ಸಾರಾಂಶ
ಕ್ಷೌರದಂಗಡಿಯವರು ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ ಸಭೆ ನಡೆಸಿ ತಿಳಿ ಹೇಳಲಾಯಿತು.
ಕೊಪ್ಪಳ: ದಲಿತರ ಕ್ಷೌರ ಮಾಡಿದರೆ ಸರ್ವಣೀಯರು ಬರುವುದಿಲ್ಲ ಎನ್ನುವ ಕಾರಣದಿಂದ ತಾಲೂಕಿನ ಮುದ್ದಾಬಳ್ಳಿಯಲ್ಲಿ ಮುಚ್ಚಲಾಗಿದ್ದ ಕಟಿಂಗ್ ಸಲೂನ್ (ಕ್ಷೌರದಂಗಡಿ) ಅನ್ನು ಬುಧವಾರ ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ತೆರೆಯಲಾಯಿತು.
ಗ್ರಾಮಕ್ಕೆ ತಹಸೀಲ್ದಾರ್ ವಿಠ್ಠಲ್ ಚೌಗಲಿ, ತಾಪಂ ಇಒ ದುಂಡಪ್ಪ ತೂರಾದಿ ಹಾಗೂ ಡಿವೈಎಸ್ಪಿ ಮುತ್ತಣ್ಣ ಸರ್ವಗೋಳ ಭೇಟಿ ನೀಡಿ ಶಾಂತಿ ಸೌರ್ಹಾದ ಸಭೆ ನಡೆಸಿದರು. ಗ್ರಾಮದಲ್ಲಿ ಹಿರಿಯರು, ಅಧಿಕಾರಿಗಳು, ಕ್ಷೌರದಂಗಡಿಯವರು ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ ಸಭೆ ನಡೆಸಿ ತಿಳಿ ಹೇಳಲಾಯಿತು. ನಾವು ಇನ್ಮುಂದೆ ಅಸ್ಪೃಶ್ಯತೆ ಆಚರಣೆ ಮಾಡುವುದಿಲ್ಲ. ಎಲ್ಲರೂ ಸಮಾನವಾಗಿ ಬದುಕುತ್ತೇವೆ ಎಂದು ಶಪಥ ಮಾಡಲಾಯಿತು. ಎರಡು ತಿಂಗಳಿಂದ ಮುಚ್ಚಿದ್ದ ಕಟಿಂಗ್ ಶಾಪ್‌ಗಳನ್ನು ತೆಗೆಸಿ ದಲಿತರ ಕಟಿಂಗ್ ಮಾಡುವ ಮೂಲಕ ಗಂಭೀರ ಸಮಸ್ಯೆಯನ್ನು ಶಾಂತಿಯುತವಾಗಿ ನಿವಾರಿಸಲಾಯಿತು.