ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಆನ್ ಲೈನ್ ಟ್ರೇಡಿಂಗ್‌ನಲ್ಲಿ ದುಪ್ಪಟ್ಟು ಆದಾಯಗಳಿಸುವ ಆಮಿಷವೊಡ್ಡಿ ಖಾಸಗಿ ಕಂಪನಿಯ ಅಕೌಂಟೆಂಟ್‌ವೊಬ್ಬರಿಂದ ₹4.5 ಕೋಟಿ ಪಡೆದು ಸೈಬರ್ ವಂಚಕರು ಟೋಪಿ ಹಾಕಿದ್ದಾರೆ.ಉತ್ತರಹಳ್ಳಿ ಪೂರ್ಣಪ್ರಜ್ಞಾ ಲೇಔಟ್ ನಿವಾಸಿ ಕೆ.ಎಂ.ಮಧುಕುಮಾರ್ ವಂಚನೆಗೆ ಒಳಗಾಗಿದ್ದು, ಇವರು ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ಸಂಜೀವ್ ಸಿಂಗ್ ಎಂಬಾತ ಪರಿಚಯ ಮಾಡಿಕೊಂಡು ಮಧುಗೆ ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಹೇಗೆ ವಂಚನೆ?: ನನ್ನ ಮೊಬೈಲ್‌ಗೆ ಸೆ.2ರಂದು ಸಂಜೀವ್ ಸಿಂಗ್ ಎಂಬಾತ ಈ ಸ್ಟಾಕ್ ಮಾರ್ಕೆಟ್ ವಿನ್ನರ್ ವಿಐಪಿ 1 ಎಂಬ ವಾಟ್ಸ್ ಆ್ಯಪ್ ಗ್ರೂಪ್‌ಗೆ ಸೇರುವಂತೆ ಸಂದೇಶ ಕಳುಹಿಸಿದ್ದ. ಅದರಲ್ಲಿ ಸ್ಟಾಕ್ ಮಾರ್ಕೆಟಿಂಗ್ ಬಗ್ಗೆ ತರಬೇತಿ ಹಾಗೂ ಅದರ ಮಾಹಿತಿಯನ್ನು ನೀಡುವುದಾಗಿ ತಿಳಿಸಿದ್ದ. ಅದರಂತೆ ಆ ಗ್ರೂಪ್‌ಗೆ ನಾನು ಸೇರಿದೆ. ಆ ಗ್ರೂಪ್‌ನಲ್ಲಿ 129 ಸದಸ್ಯರಿದ್ದ ಕಾರಣ ನನಗೆ ವಿಶ್ವಾಸ ಮೂಡಿತು ಎಂದು ಮಧು ದೂರಿನಲ್ಲಿ ವಿವರಿಸಿದ್ದಾರೆ.ಕೆಲ ದಿನಗಳ ಬಳಿಕ ಖಾತೆ ತೆರೆಯುವಂತೆ ಸಂಜೀವ್ ಸಿಂಗ್ ಸೂಚಿಸಿದ್ದ. ಅದರಂತೆ ಟ್ರೇಡಿಂಗ್ ಪ್ಯಾಟಾರ್ಮ್ ಭಾಗವಾಗಿದೆ. ಬಳಿಕ ತಾನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡ ಅವಿನಾಶ್ ಕುಮಾರ್, ಪೋಲೆನ್ ವ್ಯವಹಾರಗಳ ಸತ್ಯಾಸತ್ಯತೆಯನ್ನು ಪೊಲೀಸ್ ವಿಚಕ್ಷಣಾ ಇಲಾಖೆಯ ಸಂಪರ್ಕ ಬಳಸಿಕೊಂಡು ಪರಿಶೀಲಿಸಿದ್ದೇನೆ. ಇವುಗಳ ವ್ಯವಹಾರ ಕಾನೂನು ಪ್ರಕಾರ ನಡೆದಿದೆ. ನಾನು ಇವರ ಮಾತುಗಳನ್ನು ನಂಬಿದೆ ಎಂದು ಮಧು ಆರೋಪಿಸಿದ್ದಾರೆ. ಬಳಿಕ ಯುಎಸ್, ಭಾರತ ಮತ್ತು ಎಚ್.ಕೆ ಸ್ಟಾಕ್ ಮಾರುಕಟ್ಟೆಗಳ ಬೆಲೆಗಳನ್ನು ತೋರಿಸಿದರು. ಅಪರಿಚಿತರು ಒದಗಿಸುವ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಬೇಕು ಎಂದರು. ಪೋಲೆನ್ ಆ್ಯಪ್ ಬಳಸಿ ಪ್ರತಿ ದಿನ ಬೆಳಗ್ಗೆ 8.30ರ ಸುಮಾರಿಗೆ ಸಂಜೀವ್ ಶಿಫಾರಸು ಮಾಡುವ ಷೇರುಗಳಿಗೆ ಹೂಡಿಕೆ ಮಾಡುವಂತೆ ಹೇಳಿದರು. ಅಂತೆಯೇ ನಾನು ಹಂತ ಹಂತವಾಗಿ ಹಣ ಹೂಡಿಕೆ ಮಾಡಿದೆ. ಬಳಿಕ ಪೂರ್ವನಿಗದಿತ ಹಣ ಮರಳಿಸದಂತೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.