ಸೈಬರ್ ವಂಚನೆ, ಆನ್‌ಲೈನ್ ಹಣಕಾಸು ವಂಚನೆ, ಹೂಡಿಕೆ ವಂಚನೆ, ಉದ್ಯೋಗ ಆಮಿಷ, ಡಿಜಿಟಲ್ ಅರೆಸ್ಟ್ ಸೇರಿದಂತೆ ವಿವಿಧ ರೀತಿಯ ಸೈಬರ್ ಅಪರಾಧಗಳಿಂದ ಸಾರ್ವಜನಿಕರು ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ದೂರುದಾರರ ಹಣವನ್ನು ಶೀಘ್ರವಾಗಿ ಮರುಪಾವತಿಸಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಗದಗ: ಸೈಬರ್ ಅಪರಾಧಗಳಿಗೆ ಒಳಗಾಗಿ ಹಣ ಕಳೆದುಕೊಂಡ ಸಾರ್ವಜನಿಕರು ಇದೀಗ ಕೇಂದ್ರ ಗೃಹ ಸಚಿವಾಲಯದ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಮನಿ ರಿಫಂಡ್ ಮಾಡ್ಯೂಲ್ ಮೂಲಕ ತಮ್ಮ ಹಣವನ್ನು ಮರುಪಡೆಯುವ ಅವಕಾಶವಿದೆ ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸೈಬರ್ ವಂಚನೆ, ಆನ್‌ಲೈನ್ ಹಣಕಾಸು ವಂಚನೆ, ಹೂಡಿಕೆ ವಂಚನೆ, ಉದ್ಯೋಗ ಆಮಿಷ, ಡಿಜಿಟಲ್ ಅರೆಸ್ಟ್ ಸೇರಿದಂತೆ ವಿವಿಧ ರೀತಿಯ ಸೈಬರ್ ಅಪರಾಧಗಳಿಂದ ಸಾರ್ವಜನಿಕರು ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ದೂರುದಾರರ ಹಣವನ್ನು ಶೀಘ್ರವಾಗಿ ಮರುಪಾವತಿಸಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.ಸೈಬರ್ ವಂಚನೆಗೆ ಒಳಗಾದ ತಕ್ಷಣವೇ ಸಾರ್ವಜನಿಕರು 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ www.cybercrime.gov.in ಪೋರ್ಟಲ್‌ನಲ್ಲಿ ದೂರು ದಾಖಲಿಸಬೇಕು. ದೂರು ದಾಖಲಿಸಿದ ಬಳಿಕ ದೊರೆಯುವ ಸ್ವೀಕೃತಿ ಸಂಖ್ಯೆಯನ್ನು(Acknowledgement Number) ಬಳಸಿ ಹಣ ಮರುಪಾವತಿ ಪ್ರಕ್ರಿಯೆಯನ್ನು ಮುಂದುವರಿಸಬಹುದು.ಒಂದು ಖಾತೆಯಲ್ಲಿ 50 ಸಾವಿರವರೆಗೆ ಹಣ ಸ್ಥಗಿತಗೊಂಡಿದ್ದರೆ, ಎಫ್‌ಐಆರ್ ಅಥವಾ ನ್ಯಾಯಾಲಯದ ಆದೇಶದ ಅಗತ್ಯವಿಲ್ಲದೆ ಅಗತ್ಯ ದಾಖಲೆಗಳು ಹಾಗೂ ಬ್ಯಾಂಕ್‌ನ ಇಂಡೆಮ್ನಿಟಿ ಬಾಂಡ್ ಆಧಾರದ ಮೇಲೆ ಹಣ ಬಿಡುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಒಂದಕ್ಕಿಂತ ಹೆಚ್ಚು ಖಾತೆಗಳಲ್ಲಿ ಒಟ್ಟು 50 ಸಾವಿರಕ್ಕಿಂತ ಕಡಿಮೆ ಮೊತ್ತ ಸ್ಥಗಿತಗೊಂಡಿದ್ದರೂ ಇದೇ ನಿಯಮ ಅನ್ವಯವಾಗುತ್ತದೆ.
ಆದರೆ ಒಂದೇ ಖಾತೆಯಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಸ್ಥಗಿತಗೊಂಡಿದ್ದರೆ, ಎಫ್‌ಐಆರ್ ದಾಖಲಿಸುವುದು ಕಡ್ಡಾಯ. ಸಂಬಂಧಿತ ಪೊಲೀಸ್ ಠಾಣೆಯ ತನಿಖಾ ಅಧಿಕಾರಿಗಳ ಶಿಫಾರಸಿನ ಮೇರೆಗೆ ಮಾತ್ರ ಹಣ ಮರುಪಾವತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಹಣ ಮರುಪಾವತಿಗಾಗಿ ಸಾರ್ವಜನಿಕರು https://mrm-ncrp.mha.gov.in ವೆಬ್‌ಸೈಟ್‌ಗೆ ಭೇಟಿ ನೀಡಿ, ಎನ್ ಸಿಆರ್ ಪಿ ದೂರುಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಆಗಬೇಕು. ನಂತರ Raise Refund Request ಆಯ್ಕೆ ಮಾಡಿ, ದೂರು ಐಡಿ, ಮೊಬೈಲ್‌ಗೆ ಬಂದ ಒಟಿಪಿ, ಪ್ಯಾನ್ ಕಾರ್ಡ್ ಮಾಹಿತಿ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ವಿನೂತನ Request ID ಅನ್ನು ಪಡೆದು ಅದರ ಮೂಲಕ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು.ಅರ್ಜಿ ಸಲ್ಲಿಕೆಯ ಬಳಿಕ ಸಂಬಂಧಿತ ಪೊಲೀಸ್ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿ, ಕಾನೂನುಬದ್ಧ ಪ್ರಕ್ರಿಯೆ ಪೂರ್ಣಗೊಂಡ ನಂತರ ಸ್ಥಗಿತಗೊಂಡ ಹಣವನ್ನು ದೂರುದಾರರ ಖಾತೆಗೆ ಜಮಾ ಮಾಡುವ ಕ್ರಮ ಕೈಗೊಳ್ಳಲಾಗುತ್ತದೆ.ಸಾರ್ವಜನಿಕರು ಯಾವುದೇ ರೀತಿಯ ಸೈಬರ್ ವಂಚನೆಗೆ ಒಳಗಾದ ತಕ್ಷಣ ಸಮಯ ವ್ಯರ್ಥ ಮಾಡದೆ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನಲ್ಲಿ ದೂರು ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮನವಿ ಮಾಡಿದ್ದಾರೆ. ಸೈಬರ್ ವಂಚನೆ ತಡೆಗಟ್ಟುವಲ್ಲಿ ಜಾಗೃತಿಯೇ ಪ್ರಮುಖ ಅಸ್ತ್ರವಾಗಿದ್ದು, ಅಪರಿಚಿತ ವ್ಯಕ್ತಿಗಳ ಕರೆ, ಸಂದೇಶ, ಲಿಂಕ್ ಹಾಗೂ ಹೂಡಿಕೆ ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.