ಶಿರಸಿಯಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಸೈಕಲ್ ಜಾಥಾ

| Published : Oct 07 2024, 01:33 AM IST

ಶಿರಸಿಯಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಸೈಕಲ್ ಜಾಥಾ
Share this Article
  • FB
  • TW
  • Linkdin
  • Email

ಸಾರಾಂಶ

ಸೈಕಲ್ ಜಾಥಾ ನಗರದ ಝೂ ಸರ್ಕಲ್‌ನಿಂದ ಪ್ರಾರಂಭವಾಗಿ ಉಂಚಳ್ಳಿ, ಗುಡ್ನಾಪುರ ಮಾರ್ಗವಾಗಿ ಒಟ್ಟು ೨೫ ಕಿಮೀ ಕ್ರಮಿಸಿ, ಬನವಾಸಿ ವಲಯದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಸಮಾರೋಪಗೊಂಡಿತು. ಅಲ್ಲಿ ಸಮಾರಂಭ ಆಯೋಜಿಸಲಾಗಿತ್ತು.

ಶಿರಸಿ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ಕೆನರಾ ವೃತ್ತ ಹಾಗೂ ಶಿರಸಿ ವಿಭಾಗದ ವತಿಯಿಂದ ೭೦ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಭಾನುವಾರ ಶಿರಸಿಯಿಂದ ಬನವಾಸಿ ವರೆಗೆ ಜನಜಾಗೃತಿ ಸೈಕಲ್ ಜಾಥಾ ಆಯೋಜಿಸಲಾಗಿತ್ತು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜಿ.ಆರ್., ಹಸಿರು ಬಾವುಟ ಪ್ರದರ್ಶಿಸಿ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘ, ರೋಟರಿ ಕ್ಲಬ್, ಶಿರಸಿ ಸೈಕ್ಲಿಸ್ಟ್ ಕ್ಲಬ್‌ನ ಪ್ರತಿನಿಧಿಗಳು, ಪರಿಸರಪ್ರೇಮಿಗಳು, ವಿದ್ಯಾರ್ಥಿಗಳು, ಅರಣ್ಯ ಇಲಾಖಾ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಸೈಕಲ್ ಜಾಥಾ ನಗರದ ಝೂ ಸರ್ಕಲ್‌ನಿಂದ ಪ್ರಾರಂಭವಾಗಿ ಉಂಚಳ್ಳಿ, ಗುಡ್ನಾಪುರ ಮಾರ್ಗವಾಗಿ ಒಟ್ಟು ೨೫ ಕಿಮೀ ಕ್ರಮಿಸಿ, ಬನವಾಸಿ ವಲಯದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಸಮಾರೋಪಗೊಂಡಿತು. ಅಲ್ಲಿ ಸಮಾರಂಭ ಆಯೋಜಿಸಲಾಗಿತ್ತು.

ಡಿಎಫ್‌ಒ ಡಾ. ಅಜ್ಜಯ್ಯ ಜಿ.ಆರ್. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಅಧ್ಯಕ್ಷೆ ಸರಸ್ವತಿ ಎನ್. ರವಿ ಅವರು ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಭಾರತೀಯ ವೈದ್ಯಕೀಯ ಸಂಘ ಶಿರಸಿಯ ಪ್ರತಿನಿಧಿ ಡಾ. ದಿನೇಶ ಹೆಗಡೆ, ಶಿರಸಿ ಸೈಕ್ಲಿಸ್ಟ್ ಕ್ಲಬ್‌ನ ಪ್ರತಿನಿಧಿ ನಾಗರಾಜ ಭಟ್, ನಿವೃತ್ತ ಪ್ರಾಚಾರ್ಯ ಕೆ.ಎನ್. ಹೊಸಮನಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ನಿಂಗಾಣಿ, ಬನವಾಸಿ ವಲಯಾರಣ್ಯಾಧಿಕಾರಿ ಭವ್ಯಾ ನಾಯ್ಕ, ಶಿರಸಿ ವಲಯಾರಣ್ಯಾಧಿಕಾರಿ ಗಿರೀಶ ನಾಯ್ಕ ಇದ್ದರು.

೭೦ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ರಸಪ್ರಸ್ನೆ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಡಾ. ಅಜ್ಜಯ್ಯ ಮಾತನಾಡಿ, ೭೦ನೇ ವನ್ಯಜೀವಿ ಸಪ್ತಾಹ ಮತ್ತು ಗಾಂಧಿ ಜಯಂತಿ ಪ್ರಯುಕ್ತ ವಿಭಾಗದ ಎಲ್ಲ ಅಧಿಕಾರಿ, ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯಕ್ರಮ, ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾವಳಿ, ಶಾಲಾ ಮಕ್ಕಳಿಗೆ ರಸಪ್ರಸ್ನೆ, ಚಿತ್ರಕಲೆ, ಪ್ರಬಂಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಇಲಾಖಾ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.ಸಂರಕ್ಷಣಾ ತಾಣ: ಅನೇಕ ವನ್ಯಜೀವಿಗಳಿಗೆ ಉತ್ತರ ಕನ್ನಡ ಜಿಲ್ಲೆ ಸಂರಕ್ಷಣಾ ತಾಣವಾಗಿದೆ. ಇದನ್ನು ಕೇವಲ ಇಲಾಖೆಯವರು ಮಾತ್ರ ಸಂರಕ್ಷಿಸಲು ಸಾಧ್ಯವಿಲ್ಲ. ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಸಾಧ್ಯ ಎಂದು ಡಿಎಫ್‌ಒ ಡಾ. ಅಜ್ಜಯ್ಯ ಜಿ.ಆರ್. ತಿಳಿಸಿದರು.