ಸಾರಾಂಶ
ಅಡುಗೆ ಸಿಲಿಂಡರ್ ಆಕಸ್ಮಿಕವಾಗಿ ಸ್ಫೋಟಗೊಂಡ ಪರಿಣಾಮ ಓರ್ವ ಮಹಿಳೆ ಸಾವಿಗೀಡಾಗಿದ್ದು, ನಾಲ್ವರಿಗೆ ಗಾಯಗಳಾದ ದುರ್ಘಟನೆ ಕಲ್ಲೆ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ಧಾರವಾಡ:
ಅಡುಗೆ ಸಿಲಿಂಡರ್ ಆಕಸ್ಮಿಕವಾಗಿ ಸ್ಫೋಟಗೊಂಡ ಪರಿಣಾಮ ಓರ್ವ ಮಹಿಳೆ ಸಾವಿಗೀಡಾಗಿದ್ದು, ನಾಲ್ವರಿಗೆ ಗಾಯಗಳಾದ ದುರ್ಘಟನೆ ತಾಲೂಕಿನ ಕಲ್ಲೆ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.ಬೆಳಗ್ಗೆ ಅಡುಗೆ ಮಾಡುವ ಸಮಯದಲ್ಲಿ ಗ್ಯಾಸ್ ಹೊತ್ತಿಸುವಾಗ ಅನಿಲ ಸೋರಿಕೆಯಾಗಿದ್ದ ಸಿಲಿಂಡರ್ ಭಾರೀ ಪ್ರಮಾಣದ ಸ್ಫೋಟಗೊಂಡಿದೆ. ಘಟನೆಯಲ್ಲಿ ಮಹಾದೇವಿ ಸುರೇಶ ವಗೆಣ್ಣವರ (30) ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ. ಮೃತಳ ಪತಿ ಸುರೇಶ ವಗೆಣ್ಣವರ, ಮಾವ ಚೆನ್ನಪ್ಪ ವಗೆಣ್ಣವರ, ಅತ್ತೆ ಗಂಗವ್ವ ವಗೆಣ್ಣವರ ಹಾಗೂ 10 ವರ್ಷದ ಪುತ್ರ ಶ್ರೀಧರ ವಗೆಣ್ಣವರ ತೀವ್ರ ಗಾಯಗೊಂಡಿದ್ದು ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸ್ಫೋಟಗೊಂಡ ಕೂಡಲೇ ಸಂಪೂರ್ಣ ಮನೆಗೆ ಬೆಂಕಿ ಹತ್ತಿಕೊಂಡಿದ್ದು, ಅಡುಗೆ ಮನೆಯಲ್ಲಿದ್ದ ಮಹಾದೇವಿ ಸ್ಥಳದಲ್ಲಿ ಮೃತಪಟ್ಟರೆ, ಬೇರೆ ಬೇರೆ ಕೋಣೆಗಳಲ್ಲಿದ್ದ ಉಳಿದವರು ಪ್ರಯಾಸಪಟ್ಟು ಬೆಂಕಿಯಿಂದ ತಪ್ಪಿಸಿಕೊಂಡು ಹೊರ ಬಂದಿದ್ದಾರೆ. ಘಟನೆ ತಿಳಿದು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲಾಯಿತು. ಘಟನೆಯಿಂದ ಮನೆಯ ಗೋಡೆಗಳು ಛಿದ್ರವಾಗಿವೆ. ಸ್ಥಳಕ್ಕೆ ಗರಗ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.