ಸಾರಾಂಶ
ಮಂಗಳವಾಡ ಗ್ರಾಮದಲ್ಲಿ ಅನಿತಾ ಲಕ್ಷ್ಮೀ ಸೇರಿ ನರಸಿಂಹಮೂರ್ತಿ,ಕರಿಯಮ್ಮ, ಸಣ್ಣ ತಿಮ್ಮಪ್ಪ, ಯರಗಂಟಪ್ಪ ಮತ್ತಿತರರು ಗ್ರಾಮದ ಅರಸೀಕೆರೆ ಮಾರ್ಗದ ರಸ್ತೆ ಬದಿಯಲ್ಲಿ ಪೆಟ್ಟಿಗೆ ಅಂಗಡಿ ತೆರೆದು ವ್ಯಾಪಾರದಲ್ಲಿ ನಿರತರಾಗಿದ್ದರು. ರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ತಗುಲಿ ಅನಿತಾ ಲಕ್ಷ್ಮೀ ಅವರಿಗೆ ಸೇರಿದ್ದ ಪೆಟ್ಟಿಗೆ ಅಂಗಡಿಯಲ್ಲಿ ಸಿಲೆಂಡರ್ ಸ್ಪೋಟಗೊಂಡಿದೆ.
ಕನ್ನಡಪ್ರಭ ವಾರ್ತೆ ಪಾವಗಡ
ಸಿಲಿಂಡರ್ ಗ್ಯಾಸ್ ಸ್ಪೋಟಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ಆರು ಪೆಟ್ಟಿಗೆ ಅಂಗಡಿಗಳು ಭಸ್ಮವಾಗಿ ಸುಮಾರು 6 ಲಕ್ಷ ಮೌಲ್ಯದ ದಿನಬಳಕೆ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಶನಿವಾರ ತಡರಾತ್ರಿ ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ನಿಡಗಲ್ ಹೋಬಳಿಯ ಕೇಂದ್ರಸ್ಥಾನ ಮಂಗಳವಾಡ ಗ್ರಾಮದಲ್ಲಿ ಅನಿತಾ ಲಕ್ಷ್ಮೀ ಸೇರಿ ನರಸಿಂಹಮೂರ್ತಿ,ಕರಿಯಮ್ಮ, ಸಣ್ಣ ತಿಮ್ಮಪ್ಪ, ಯರಗಂಟಪ್ಪ ಮತ್ತಿತರರು ಗ್ರಾಮದ ಅರಸೀಕೆರೆ ಮಾರ್ಗದ ರಸ್ತೆ ಬದಿಯಲ್ಲಿ ಪೆಟ್ಟಿಗೆ ಅಂಗಡಿ ತೆರೆದು ವ್ಯಾಪಾರದಲ್ಲಿ ನಿರತರಾಗಿದ್ದರು. ರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ತಗುಲಿ ಅನಿತಾ ಲಕ್ಷ್ಮೀ ಅವರಿಗೆ ಸೇರಿದ್ದ ಪೆಟ್ಟಿಗೆ ಅಂಗಡಿಯಲ್ಲಿ ಸಿಲೆಂಡರ್ ಸ್ಪೋಟಗೊಂಡಿದೆ. ಅಂಗಡಿಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಪಾಯ ಸಂಭವಿಸಿಲ್ಲ, ಸಿಲಿಂಡರ್ ಸ್ಪೋಟದಿಂದ ಪೆಟ್ಟಿಗೆ ಅಂಗಡಿಯಲ್ಲಿ ವ್ಯಾಪಿಸಿಕೊಂಡ ಬೆಂಕಿ ಅಕ್ಕಪಕ್ಕದ ತರಕಾರಿ ವ್ಯಾಪಾರದ ಕರಿಯಮ್ಮ, ಕಬ್ಬಿಣ ಅಂಗಡಿಯ ನರಸಿಂಹಮೂರ್ತಿ ಹಾಗೂ ಯರಗುಂಟಪ್ಪನಿಗೆ ಸೇರಿದ್ದ ಪೆಟ್ಟಿಗೆ ಅಂಗಡಿಗಳು ಸಹ ಸುಟ್ಟು ಭಸ್ಮವಾಗಿವೆ.
ಅಕ್ಕಪಕ್ಕದ ಗ್ರಾಮಸ್ಥರು ತಕ್ಷಣ ನೀರು ತಂದು ಪೆಟ್ಟಿಗೆಗಳಿಗೆ ಹೊತ್ತಿ ಉರಿಯುತ್ತಿದ್ದ ಬೆಂಕಿ ನಂದಿಸಲು ಯತ್ನಿಸಿದ್ದಾರೆ,ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಈ ಎಲ್ಲಾ ಅಂಗಡಿಗಳಿಂದ ಸುಮಾರು 6 ಲಕ್ಷ ಮೊತ್ತದ ವ್ಯಾಪಾರದ ಸಾಮಾಗ್ರಿಗಳು ಸುಟ್ಟುಹೋಗಿವೆ. ಸ್ಥಳಕ್ಕೆ ತಾಲೂಕಿನ ಅರಸೀಕೆರೆ ಪೊಲೀಸರು ಧಾವಿಸಿ, ಪ್ರಕರಣ ದಾಖಸಿಕೊಂಡಿದ್ದಾರೆ. ಕೀಡಿಗೇಡಿಗಳು ಪೆಟ್ಟಿಗೆಗೆ ಬೆಂಕಿ ಹಚ್ಚಿದ ಪರಿಣಾಮ ಸಿಲೆಂಡರ್ ಸ್ಪೋಟವಾಗಿರುವ ಶಂಕೆಯಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ಕೀಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಬೀದಿ ಬದಿಯ ವ್ಯಾಪಾರಸ್ಥರಿಗೆ ತಾಲೂಕು ಆಡಳಿತ ಹಾಗೂ ಸರ್ಕಾರ ಕೂಡಲೇ ಹೆಚ್ಚಿನ ಪರಿಹಾರ ಕಲ್ಪಿಸಿಕೊಡುವಂತೆ ತಾಲೂಕು ಬಿಜೆಪಿ ಅಧ್ಯಕ್ಷ ಮಂಗಳವಾಡ ರಂಗಣ್ಣ ಹಾಗೂ ದಲಿತ ಮುಖಂಡ ಟಿ.ಹನುಮಂತರಾಯಪ್ಪ ಒತ್ತಾಯಿಸಿದ್ದಾರೆ.