ಸಿಲಿಂಡರ್‌ ಸ್ಫೋಟ: ಮನೆ ಸಂಪೂರ್ಣ ಬೆಂಕಿಗಾಹುತಿ

| Published : Mar 24 2024, 01:35 AM IST

ಸಾರಾಂಶ

ಸಿರಿಗೆರೆ ಸಮೀಪದ ಲಕ್ಷ್ಮೀಸಾಗರ ಗ್ರಾಮದಲ್ಲಿ ಸಿಲಿಂಡರ್‌ ಸ್ಫೋಟಕ್ಕೆ ಮನೆಯೊಂದು ಸಂಪೂರ್ಣ ಕುಸಿದು ಬಿದ್ದು, ಅಗ್ನಿಗಾಹುತಿಯಾಗಿರುವ ಘಟನೆ ಶನಿವಾರ ಮಧ್ಯಾಹ್ನ ಜರುಗಿದೆ.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಸಿಲಿಂಡರ್‌ ಸ್ಫೋಟಕ್ಕೆ ಮನೆಯೊಂದು ಸಂಪೂರ್ಣ ಕುಸಿದು ಬಿದ್ದು, ಅಗ್ನಿಗಾಹುತಿಯಾಗಿರುವ ಘಟನೆ ಸಿರಿಗೆರೆ ಸಮೀಪದ ಲಕ್ಷ್ಮೀಸಾಗರ ಗ್ರಾಮದಲ್ಲಿ ಮಧ್ಯಾಹ್ನ ನಡೆದಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಗ್ರಾಮದ ನಿವಾಸಿಗಳಾದ ಗೋವಿಂದಪ್ಪ ಮತ್ತು ಅಂಜಿನಮ್ಮ ಅಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದವರು. ಎಂದಿನಂತೆ ಬೆಳಿಗ್ಗೆ ಅಡುಗೆ ಮಾಡಿ, ಊಟ ಮಾಡಿ ತಮ್ಮ ಕೆಲಸದ ನಿಮಿತ್ತ ಗ್ರಾಮದ ಹೊರಹೋಗಿದ್ದಾರೆ. ಮಧ್ಯಾಹ್ನ ೩.೩೦ರ ವೇಳೆಗೆ ಸಿಲಿಂಡರ್‌ ಇದ್ದಕ್ಕಿದ್ದಂತೆ ಸಿಡಿದು, ಭಾರಿ ಶಬ್ದಕ್ಕೆ ನೆರೆಯವರು ಸ್ಥಳಕ್ಕೆ ಆಗಮಿಸು ವಷ್ಟರಲ್ಲಿ ಮನೆ ಸಂಪೂರ್ಣ ಕುಸಿದು ನೆಲಕ್ಕೆ ಬಿದ್ದಿದೆ. ಮನೆಯಲ್ಲಿದ್ದ ಆಲ್ಮೇರಾ, ಟ್ರಂಕ್‌, ಬಟ್ಟೆ, ಆಹಾರ ಸಾಮಗ್ರಿಗಳು, ಇತರೆ ಪರಿಕರಗಳು ಸುಟ್ಟು ಕರಕಲಾಗಿವೆ.

ಕೂಲಿಗೆ ಹೋಗುವಾಗ ಸಿಲಿಂಡರ್‌ ಆಫ್‌ ಮಾಡಿ ಹೋಗಿರುವುದಾಗಿ ಅಂಜಿನಮ್ಮ ಹೇಳುತ್ತಾರಾದರೂ, ಹಾಗೆ ಆಫ್‌ ಮಾಡಿರುವ ಸಿಲಿಂಡರ್‌ ದಿಢೀರ್‌ ಸ್ಫೋಟ ಗೊಂಡಿರುವುದರಿಂದ ಜನರಲ್ಲಿ ಭೀತಿ ಹುಟ್ಟಿಸಿದೆ.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರಸ್ವತಿ ಸ್ವಾಮಿ, ಕಾರ್ಯದರ್ಶಿ ಸತೀಶ್‌ ಬಾಬು, ಪಿಡಿಒ ಜಯಶೀಲಾ, ಗ್ರಾಪಂ ಸದಸ್ಯರಾದ ಸುರೇಶ್‌, ವಸಂತ ಕುಮಾರ್‌, ಅಶೋಕ್‌ ಕುಮಾರ್‌, ಧನಂಜಯ, ತ್ರಿವೇಣಿ, ದೇವರಾಜ್‌, ಚಿದಾನಂದ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಳಿಸಿದರು. ಇದೇ ವೇಳೆ ಸಂತ್ರಸ್ತರಿಗೆ ಗ್ರಾಮ ಪಂಚಾಯ್ತಿ ವತಿಯಿಂದ ೧೦ ಸಾವಿರ ರು.ಗಳ ನೆರವು ನೀಡಲಾಯಿತು. ಚಿತ್ರದುರ್ಗದ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು.