ಕನ್ನಡಪ್ರಭ ವಾರ್ತೆ ವಿಜಯಪುರ

ಅಕ್ಕಸಾಲಿಗರ ಅಂಗಡಿಯಲ್ಲಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಸರಾಫ್‌ ಬಜಾರನಲ್ಲಿರುವ ಶಿರೂರ ಕಾಂಪ್ಲೆಕ್ಸ್‌ ನಲ್ಲಿ ಗುರುವಾರ ಬೆಳಗ್ಗೆ 9ಗಂಟೆ ಸುಮಾರಿಗೆ ಸಂಭವಿಸಿದೆ.

ಎಂದಿನಂತೆ ಅಂಗಡಿಗೆ ಬಂದು ಅಂಗಡಿಯ ಶೆಟರ್‌ (ಬಾಗಿಲು) ತೆರೆಯುತ್ತಿದ್ದಂತೆ ಸ್ಪೋಟಗೊಂಡಿರುವ ಸಿಲಿಂಡರ್‌ನಿಂದಾಗಿ ಬಂಗಾಲಿ (ಪಶ್ಚಿಮ ಬಂಗಾಳದ) ಮೂಲದ ಅಕ್ಕಸಾಲಿಗರಾದ 38 ವರ್ಷದ ಅಬು (ಬೀಜು) ಹಾಗೂ 40 ವರ್ಷದ ನಾನಾ ಹಕೀಮ್ ಎಂಬುವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಮೈಮೇಲಿನ ಚರ್ಮವೆಲ್ಲ ಕಿತ್ತುಹೋಗಿದ್ದು, ಗಂಭೀರ ಗಾಯಗೊಂಡ ಇಬ್ಬರು ಅಕ್ಕಸಾಲಿಗರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬುಧವಾರ ಚಿನ್ನಾಭರಣ ಮಾರುಕಟ್ಟೆ ಸೂಟಿ ಇರುವುದರಿಂದ ನಿನ್ನೆ ಯಾರೂ ಇತ್ತ ಸುಳಿದಿರಲಿಲ್ಲ. ಹಾಗಾಗಿ ಕಳೆದ ರಾತ್ರಿಯೇ ಗ್ಯಾಸ್‌ ಸೋರಿಕೆಯಾಗಿದ್ದು, ಬೆಳಗ್ಗೆ ಅಂಗಡಿಗೆ ಬಂದಿದ್ದ ಇಬ್ಬರು ಅಕ್ಕಸಾಲಿಗರಲ್ಲಿ ಓರ್ವ ಸಿಗರೇಟ್ ಸೇದುತ್ತಲಿದ್ದ, ಆಗ ಅಂಗಡಿ ಶೆಟರ್‌ ತೆರೆದಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿ, ರಾತ್ರಿಯಿಡಿ ಸೋರಿಕೆಯಾಗಿ ಅಂಗಡಿಯಲ್ಲೇ ಶೇಖರಣೆಯಾಗಿದ್ದ ಗ್ಯಾಸ್‌ನೊಂದಿಗೆ ಸಿಲಿಂಡರ್‌ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಇಬ್ಬರು ಅಕ್ಕಸಾಲಿಗರು ತಮ್ಮ ಅಂಗಡಿಯಲ್ಲಿನ ಚಿನ್ನದ ಕುಲುಮೆ ಹೊತ್ತಿಸಿ ಚಿನ್ನ ಕರಗಿಸುವ ಕೆಲಸ ಆರಂಭಿಸುತ್ತಿದ್ದಾಗ ಏಕಾಏಕಿ ಗ್ಯಾಸ್ ಸಿಲಿಂಡರ್‌ ಸ್ಪೋಟಗೊಂಡಿದೆ.

ಸ್ಪೋಟದ ತೀವ್ರತೆಗೆ ಅಂಗಡಿಯ ಶೆಟರ್ ಬಾಗಿಲು ಜಜ್ಜಿ ಹೋಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಶಬ್ದ ಕೇಳಿಬಂದಿದೆ. ಸ್ಪೋಟದ ತೀವ್ರತೆಗೆ ಸರಾಫ್ ಬಜಾರ್‌ನಲ್ಲಿರುವ ಅಕ್ಕಪಕ್ಕದ ಅಂಗಡಿಗಳ ಕಿಟಕಿ ಗಾಜುಗಳು ಒಡೆದು ಛಿದ್ರಛಿದ್ರವಾಗಿ, ಎಲ್ಲ ಸಾಮಾನುಗಳು ಪುಡಿಪುಡಿಯಾಗಿವೆ. ವಿಷಯ ತಿಳಿಸದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗಾಂಧಿಚೌಕ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.


ಬೆಚ್ಚಿ ಬೀಳಿಸದ ಭಾರೀ ಶಬ್ದ:

ಗ್ಯಾಸ್‌ ಸಿಲಿಂಡರ್‌ ಸ್ಪೋಟದ ತೀವ್ರತೆಗೆ ಅಂಗಡಿ ಮುಂದಿನ ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರಿನ ಗಾಜು ಒಡೆದು ಹೋಗಿದೆ. ಅಂಗಡಿಯಿಂದ ಎಡಬಲಕ್ಕೆ ಸುಮಾರು 30 ಮೀಟರ್ ವರೆಗಿನ ಅಕ್ಕ ಪಕ್ಕದ ಅಂಗಡಿಗಳಲ್ಲಿನ ವಸ್ತುಗಳು ಸಹ ಕಂಪನಕ್ಕೆ ಚೆಲ್ಲಾಪಿಲ್ಲಿಯಾಗಿವೆ. ಸ್ಪೋಟಗೊಂಡ ಅಂಗಡಿ ಪಕ್ಕದಲ್ಲೇ ಇದ್ದ ನೈಸ್ ಗಿಫ್ಟ್ ಸೆಂಟರ್ ನಲ್ಲಿನ ವಸ್ತುಗಳು ಸ್ಫೋಟದ ತೀವ್ರತೆಯಿಂದ ಬೀಳುತ್ತಿರುವ ದೃಶ್ಯ ಗಿಫ್ಟ್‌ ಸೆಂಟರ್‌ ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಧಿಕಾರಿಗಳ ಭೇಟಿ:

ಘಟನಾ ಸ್ಥಳಕ್ಕೆ ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ, ಗಾಂಧಿಚೌಕ್‌ ಠಾಣೆ ಸಿಪಿಐ ಪ್ರದೀಪ ತಳಕೇರಿ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಸರಾಫ್ ಬಜಾರನಲ್ಲಿ ಬಂಗಾಲಿ ಮೂಲದ ಅಕ್ಕಸಾಲಿಗರು ಬಹಳ ವರ್ಷಗಳಿಂದ ಗ್ಯಾಸ್ ಸಿಲಿಂಡರ್‌ ಬಳಕೆ ಮಾಡಿ ಚಿನ್ನ ಕರಗಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸದಾ ಜನಸಂದಣಿ ಇರುವ ಸರಾಫ್ ಬಾಜಾರ್‌ ನಲ್ಲಿ ಈ ದಂಧೆ ನಡೆಯುತ್ತಿರೋದು ಅಪಾಯಕಾರಿ. ಇದನ್ನು ಬಂದ್ ಮಾಡಿಸುವಂತೆ ಸ್ಥಳೀಯ ಇತರೆ ಚಿನ್ನದ ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ.

-ಶಿವಕುಮಾರ, ಚಿನ್ನದ ವ್ಯಾಪಾರಸ್ಥ.

ಗ್ಯಾಸ್‌ ಸೋರಿಕೆ ಅವಘಡದಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಾವು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದೇವೆ. ಈ ಅವಘಡ ಯಾಕೆ ಸಂಭವಿಸಿದೆ, ಹೇಗೆ ಸಂಭವಿಸಿದೆ. ಗ್ಯಾಸ್‌ ಸೋರಿಕೆಗೆ ಕಾರಣವೇನು, ಸ್ಫೋಟದಿಂದ ಏನೇನು ಹಾನಿಯಾಗಿದೆ. ಇದೆಲ್ಲದರ ಬಗ್ಗೆ ತನಿಖೆ ನಡೆಸಿ, ವರದಿ ಬಂದಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

-ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್‌ಪಿ.