ಸಿಲಿಂಡರ್ ಸ್ಫೋಟ, ವೈದ್ಯೆ ಸೇರಿ ಇಬ್ಬರಿಗೆ ಗಾಯ

| Published : Jan 09 2025, 12:47 AM IST

ಸಾರಾಂಶ

ನಗರದಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ವೈದ್ಯೆ ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ನಗರದ ಚಿನಿವಾಲರ್ ಆಸ್ಪತ್ರೆಯ ಹತ್ತಿರ ನಡೆದಿದೆ.

ಶ್ವಾನ ಬೊಗಳಿದ್ದರಿಂದ ಎಚ್ಚೆತ್ತ ಜನರು, ಅಪಾಯದಿಂದ ಪಾರುಕನ್ನಡಪ್ರಭ ವಾರ್ತೆ ಗಂಗಾವತಿ

ನಗರದಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ವೈದ್ಯೆ ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ನಗರದ ಚಿನಿವಾಲರ್ ಆಸ್ಪತ್ರೆಯ ಹತ್ತಿರ ನಡೆದಿದೆ.

ಮಂಗಳವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ತಿಪ್ಪಣ್ಣ ಎಂಬವರ ಚಹಾದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಸಿಲಿಂಡರ್ ಸ್ಫೋಟಕ್ಕೆ ಕಾರಣವಾಗಿದೆ. ಚಹಾದ ಅಂಗಡಿಯಲ್ಲಿದ್ದ ತಿಪ್ಪಣ್ಣ ತೀವ್ರ ಗಾಯಗೊಂಡಿದ್ದರೆ, ಚಹಾದ ಅಂಗಡಿ ಮುಂಭಾಗದಲ್ಲಿದ್ದ ಚಿನಿವಾಲರ್ ಆಸ್ಪತ್ರೆಯ ವೈದ್ಯೆ ಡಾ. ಸುಲೋಚನಾ ಚಿನಿವಾಲರ್ ನೀರಿನ ಪೈಪ್‌ನಿಂದ ಬೆಂಕಿ ಆರಿಸಲು ಮುಂದಾದಾಗ ಬೆಂಕಿ ಆವರಿಸಿಕೊಂಡು ಕೈ ಮತ್ತು ಮುಖ ಸುಟ್ಟಿದೆ. ಸುದ್ದಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ತಿಪ್ಪಣನ ಮನೆಯಲ್ಲಿ ರೊಟ್ಟಿ ಮಾಡಿ ಬೆಂಕಿ ಆರಿಸದೆ ಹಾಗೇ ಬಿಟ್ಟಿರುವುದೇ ಬೆಂಕಿ ಹೊತ್ತಲು ಕಾರಣ ಎನ್ನಲಾಗಿದೆ. ಗಾಯಾಳುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ವಾನ ಬೊಗಳಿದ್ದರಿಂದ ಎಚ್ಚೆತ್ತ ಜನರು:

ಚಹಾದ ಅಂಗಡಿಯಲ್ಲಿ ಬೆಂಕಿ ಹತ್ತಿ ಉರಿಯುತ್ತಿದ್ದಂತೆಯೇ ಹುಲಗಪ್ಪ ಎನ್ನುವರ ಮನೆಯಲ್ಲಿದ್ದ ಡೈಸಿ ಎನ್ನುವ ನಾಯಿ ಬೊಗಳಲು ಪ್ರಾರಂಭಿಸಿದೆ. ಎಂದೂ ಬೊಗಳದ ನಾಯಿ ನಿರಂತರವಾಗಿ ಬೊಗಳುತ್ತಿದಂತೆಯೇ ಅಕ್ಕಪಕ್ಕದ ಜನರು ಮನೆಯಿಂದ ಎದ್ದು ಹೊರಗೆ ಬಂದಿದ್ದಾರೆ.

ನಾಯಿ ಬೊಗಳದಿದ್ದರೆ 50ಕ್ಕೂ ಹೆಚ್ಚು ಜನರು ಅವಘಡಕ್ಕೆ ಸಿಲುಕುತ್ತಿದ್ದರು. ಆದರೂ ನಾಲ್ಕು ಮನೆ ಮತ್ತು ನಾಲ್ಕು ಮಳಿಗೆಗಳು ಬೆಂಕಿಯಿಂದಾಗಿ ಸುಟ್ಟುಹೋಗಿವೆ. ಸುಮಾರು ₹40 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.ಕೊಪ್ಪಳ-6 ಕಳ್ಳತನ ಪ್ರಕರಣ, ಐವರ ಬಂಧನ:

6 ಪ್ರಕರಣ ಭೇದಿಸಿರುವ ಪೊಲೀಸರು ಐವರನ್ನು ಬಂಧಿಸಿ ₹ 4,45,000 ಮೌಲ್ಯದ ನಗದು, ಬಂಗಾರದ ಆಭರಣ, ಮೊಬೈಲ್ ಮತ್ತು ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ.

ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳವಿನಾಳ ಬ್ರಿಡ್ಜ್ ಹತ್ತಿರ ಡಿ.19ರಂದು ರಾತ್ರಿ 8:30ರ ಸುಮಾರಿಗೆ ಎಪಿಎಂಸಿ ಮಾರ್ಕೆಟ್‌ನಿಂದ ತರಕಾರಿ ವ್ಯಾಪಾರದ ನಗದು ₹300000 ಗಳನ್ನು ದೋಚಿಕೊಂಡು ಹೋಗಿರುವ ಕುರಿತು ನಂದಿನಗರದ ಶಂಕ್ರಪ್ಪ ಈಶ್ವರಗೌಡ್ರ ಪ್ರಕರಣ ದಾಖಲಿಸಿದ್ದರು.ವಿಶೇಷ ತಂಡ ರಚಿಸುವ ಮೂಲಕ ಕಾರ್ಯಾಚರಣೆ ನಡೆಸಿದಾಗ ಐವರು ಸಿಕ್ಕಿ ಹಾಕಿಕೊಂಡಿದ್ದಾರೆ.

ಗಂಗಾವತಿಯ ಮೆಹಬೂಬು ನಗರದ ನಿವಾಸಿಗಳಾದ ಗೌಸಬಾಷಾ ಜಾವೀದಲಿ, ಹನೀಪ್ ಸೇಕ್ಷಾವಲಿ, ಎ.ಕೆ. ಸೋಹೆಲ್ ಜಾಫರ್, ಕೊಪ್ಪಳದ ಹಮಾಲರ ಕಾಲನಿಯ ದಾವೂದ್ ಇಬ್ರಾಹಿಂ ತರಕಾರಿವಾಲಿ, ಆಸೀಪ್ ತರಕಾರಿವಾಲಿ ಬಂಧಿತರು.ಕೊಪ್ಪಳ ಗ್ರಾಮೀಣ ಠಾಣೆಯ 3 ಪ್ರಕರಣಗಳು, ಮುನಿರಾಬಾದ ಠಾಣೆಯ 2 ಪ್ರಕರಣಗಳು ಮತ್ತು ಕುಷ್ಟಗಿ ಠಾಣೆಯ 1 ಪ್ರಕರಣ ಹೀಗೆ ಒಟ್ಟು 6 ಪ್ರಕರಣಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಪತ್ತೆ ಕಾರ್ಯ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿರ ತಂಡಕ್ಕೆ ಪೊಲೀಸ್ ಅಧೀಕ್ಷಕ ಡಾ. ರಾಮ್ ಎಲ್. ಅರಸಿದ್ದಿ ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.