ಸಾರಾಂಶ
ಧರ್ಮ, ರಾಜಕೀಯ ಮೀರಿದ ಆಚರಣೆಯಾಗಿರುವ ನಾಡಹಬ್ಬ ದಸರಾದಲ್ಲಿ ಎಲ್ಲರು ಭಾಗಿಯಾಗಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಆಚರಣೆಗೆ ಸಮಯ ಕೊಡುವುದರಿಂದ ಅಭಿವೃದ್ಧಿ ಕಾರ್ಯಗಳಿಗೂ ತೊಡಕಾಗದಂತೆ ನೋಡಿಕೊಳ್ಳಲಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೂ ಒತ್ತು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.ಮೈಸೂರು ಅರಮನೆ ಮಂಡಳಿ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಸ್ತುಪ್ರದರ್ಶನ ಆವರಣದಲ್ಲಿರುವ ಡಿ. ದೇವರಾಜ ಅರಸು ವಿವಿಧೋದ್ದೇಶ ಕುಸ್ತಿ ಅಖಾಡವನ್ನು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುದಾನ ನೀಡಲಾಗಿದೆ ಎಂದರು.
ಡಾ. ಅಂಬೇಡ್ಕರ್ ಭವನ ನಿರ್ಮಾಣ ಪೂರ್ಣಗೊಳಿಸಲು 25 ಕೋಟಿ ರೂ. ಮಂಜೂರಾಗಿದ್ದು, ಸೆ.20ಕ್ಕೆ ಚಾಲನೆ ಕೊಡಲಾಗುತ್ತಿದೆ. ದಸರೆಯ ಸಿದ್ಧತೆಯ ನಡುವೆಯೂ ತಾಲೂಕು ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಅವರು ಹೇಳಿದರು.ಧರ್ಮ, ರಾಜಕೀಯ ಮೀರಿದ ಆಚರಣೆಯಾಗಿರುವ ನಾಡಹಬ್ಬ ದಸರಾದಲ್ಲಿ ಎಲ್ಲರು ಭಾಗಿಯಾಗಬೇಕು. ದಸರೆಯೂ ಸಂವಿಧಾನದ ಆಶಯದ ಕೆಳಗೆ ನಡೆಯುತ್ತಿದೆ. ಮೈಸೂರು ನನ್ನೂರು. ಪ್ರೀತಿ, ಸೌಜನ್ಯ, ಔದಾರ್ಯತೆಯ ಜತೆಗೆ ಸತ್ಕಾರಕ್ಕೆ ಹೆಸರುವಾಸಿಯಾಗಿದೆ. ಮೈಸೂರು ರಾಜರ ಕಾಲದಿಂದಲೂ ಅತಿಥ್ಯಕ್ಕೆ ಹೆಸರು ಪಡೆದಿದೆ. ನಾಡಹಬ್ಬ ಎಲ್ಲರನ್ನು ಒಂದುಗೂಡಿಸುವ, ಮನಸ್ಸುಗಳನ್ನು ಬೆಸೆಯುವಂತಾಗಿದೆ. ಇಂದು ತಂಟೆ ತಕರಾರು ಇಲ್ಲ, ಮುಂದೆಯೂ ಇರುವುದಿಲ್ಲ. ಮೈಸೂರಿನ ಜನರು ಅದಕ್ಕೆ ಅವಕಾಶ ಕೊಡಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನ ಹಬ್ಬ ಎಲ್ಲರ ಹಬ್ಬವಾಗಿರುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಸನ್ನಡತೆ, ಸದ್ಗುಣಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಭಾರತೀಯರಾದ ನಾವು ದಸರಾ ಆಚರಣೆ ಮಾಡುತ್ತಿದ್ದೇವೆ ಎಂದರು.