ಸಾರಾಂಶ
ರಾಮನಗರ: ಅಳಿವಿಂನಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದುಗಳ ಉಳಿವಿಗಾಗಿ ಸಂತಾನೋತ್ಪತ್ತಿ ಕೇಂದ್ರ ಶೀಘ್ರ ಆರಂಭವಾಗಬೇಕು ಎಂದು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್) ನಿವೃತ್ತ ಉಪ ನಿರ್ದೇಶಕ ಡಾ.ವಿಬು ಪ್ರಕಾಶ್ ಒತ್ತಾಯಿಸಿದರು.
ನಗರದ ಕೃಷ್ಣ ಸ್ಮತಿ ಕಲ್ಯಾಣ ಮಂಟಪದಲ್ಲಿ ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನದ ಪ್ರಯುಕ್ತ ಅರಣ್ಯ ಇಲಾಖೆ, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಹಾಗೂ ಇತರ ಸಂಸ್ಥೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸ್ತುತ ಉದ್ದಕೊಕ್ಕಿನ ರಣಹದ್ದುಗಳ ಸಂಖ್ಯೆಯು ಆತಂಕಕಾರಿ ಎನ್ನುವ ಮಟ್ಟದಲ್ಲಿ ಇಳಿದಿದೆ. ಇದರ ಹೆಚ್ಚಳವಾಗಬೇಕಾದರೆ ಸಂತಾನೋತ್ಪತ್ತಿ ಕೇಂದ್ರದ ಅಗತ್ಯವಿದೆ. ಬನ್ನೇರುಘಟ್ಟದಲ್ಲಿ ಕೇಂದ್ರ ಸ್ಥಾಪನೆ ಮಾಡಲಾಗಿದೆಯಾದರೂ ಇದು ಇನ್ನೂ ಕಾರ್ಯಾರಂಭ ಮಾಡಿಲ್ಲ. ಕೂಡಲೇ ಕೇಂದ್ರ ಆರಂಭಕ್ಕೆ ಅರಣ್ಯ ಇಲಾಖೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.ಸೇವ್ ವಲ್ಚರ್ ಸಂಸ್ಥೆ ಕಾರ್ಯಕ್ರಮ ವ್ಯವಸ್ಥಾಪಕ ಕ್ರಿಸ್ ಬೌಡೋನ್ ಮಾತನಾಡಿ, ಪರಿಸರ ಉಳಿವಿನಲ್ಲಿ ರಣಹದ್ದುಗಳ ಪಾತ್ರ ಹಿರಿದು, ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಯಾರೂ ಗಮನಿಸುತ್ತಿಲ್ಲ. ರಣಹದ್ದುಗಳ ಸಂಖ್ಯೆ ಹೆಚ್ಚಾದಷ್ಟೂ ಪರಿಸರ ಉತ್ತಮವಾಗಿರುತ್ತವೆ. ಪ್ರಸ್ತುತ ಇವುಗಳ ಸಂಖ್ಯೆ ಹೆಚ್ಚಳ ಮತ್ತು ಅವುಗಳ ಬೆಳವಣಿಗೆ ಬೇಕಾದ ಸೂಕ್ತ ಪರಿಸರವನ್ನು ನಾವು ನಿರ್ಮಾಣ ಮಾಡಬೇಕಿದೆ ಎಂದು ಹೇಳಿದರು.
ಸಂತಾನೋತ್ಪತ್ತಿ ಕೇಂದ್ರ ಮತ್ತು ಅವುಗಳ ಬೆಳವಣಿಗೆ ನಂತರ ಬಿಡುಗಡೆ ಮಾಡುವ ಸ್ಥಳಗಳನ್ನು ಡೈಕ್ಲೋಫೆನಾಕ್ ಮುಕ್ತ ಪ್ರದೇಶವನ್ನಾಗಿ ಮಾಡಬೇಕು. ರಣಹದ್ದುಗಳು ಇರುವ ಕೇಂದ್ರದ 100 ಕಿಮಿ ವ್ಯಾಪ್ತಿಯಲ್ಲಿ ದೊರೆಯುವ ಯಾವುದೇ ಪ್ರಾಣಿಯ ಮೃತದೇಹ ಡೈಕ್ಲೋಫೆನಾಕ್ ಮುಕ್ತವಾಗಿರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ದಕ್ಷಿಣ ಭಾರತದಲ್ಲೇ ಪ್ರಥಮ ಸಂತಾನೋತ್ಪತ್ತಿ ಕೇಂದ್ರ :
ತಮಿಳುನಾಡಿನ ಅರಳುಗಂ ಸಂಸ್ಥೆಯ ಕಾರ್ಯದರ್ಶಿ ಭಾರತೀದಾಸನ್ ಮಾತನಾಡಿ, ಪ್ರತಿಯೊಂದು ಪ್ರದೇಶಕ್ಕೂ ಅದರದ್ದೇ ಆದ ಮಹತ್ವವಿದೆ. ಅಲ್ಲಿನ ಪ್ರಾಣಿ ಪಕ್ಷಿಗಳೂ ಸಹ ವಿಭಿನ್ನವಾಗಿರುತ್ತವೆ. ಅದೇ ರೀತಿ ಈ ಭಾಗಕ್ಕೆ ಉದ್ದಕೊಕ್ಕಿನ ರಣಹದ್ದುಗಳು ಇವೆ. ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ರಣಹದ್ದುಗಳ ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಇದರಿಂದ ರಣಹದ್ದುಗಳ ಸಂತತಿ ಹೆಚ್ಚಾಗಲಿದೆ ಎಂದರು.ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯಅರಣ್ಯ ಸಂಕರಕ್ಷಣಾಧಿಕಾರಿ ಪ್ರಭಾಸ್ ಚಂದ್ರ ರಾಯ್ ಮಾತನಾಡಿ, ರಣಹದ್ದುಗಳ ಸಂತತಿ ಬೆಳವಣಿಗೆ ಮತ್ತು ಅವುಗಳಿಗೆ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಡುವ ಜವಾಬ್ದಾರಿ ಎಲ್ಲರ ಮೇಲಿದ್ದು, ಇದರಲ್ಲಿ ಅರಣ್ಯ ಇಲಾಖೆ ಪಾಲು ಹೆಚ್ಚಿದೆ. ಇಲಾಖೆಯಿಂದ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡು ಅಳಿವಿನಂಚಿನಲ್ಲಿರುವ ರಣಹದ್ದುಗಳ ಸಂತತಿ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಸಾರ್ವಜನಿಕರೂ ಸಹ ರಣಹದ್ದುಗಳ ಮಹತ್ವದ ಬಗ್ಗೆ ತಿಳಿದು ಕೊಳ್ಳಬೇಕು ಎಂದರು.
ಡಿಸಿಎಫ್ ರಾಮಕೃಷ್ಣಪ್ಪ, ಎಸಿಎಫ್ ಪುಟ್ಟಮ್ಮ, ಆರ್‌ಎಫ್‌ಒ ಮಹಮದ್ಮ್ ಮನ್ಸೂರ್, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಚಂದ್ರೇಗೌಡ, ಕಾರ್ಯದರ್ಶಿ ಶಶಿಕುಮಾರ್, ಆರ್‌ಎಫ್‌ಒಗಳಾದ ಮಲ್ಲೇಶ್, ಜಗದೀಶ್‌ಗೌಡ, ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬಂದಿದ್ದ ನೂರಾರು ಮಂದಿ ಪರಿಸರ ಪ್ರೇಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ರಾಮದೇವರ ಬೆಟ್ಟದ ನೇಚರ್ ವಾಕ್ ಹಮ್ಮಿಕೊಂಡು, ರಣಹದ್ದುಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.14ಕೆಆರ್ ಎಂಎನ್ 6.ಜೆಪಿಜಿ
ರಾಮನಗರದಲ್ಲಿ ಅರಣ್ಯ ಇಲಾಖೆ ಮತ್ತು ರಾಜ್ಯ ರಣಹದ್ದು ಸಂರಕ್ಷಣಾ ಟ್ರಸ್ಟ್ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನದ ಕಾರ್ಯಕ್ರಮದಲ್ಲಿ ರಣಹದ್ದುಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.