ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಶನಿವಾರ ಹೊಸ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದೆ.ದ.ಕ.ಜಿಲ್ಲಾ ಬಿಜೆಪಿಯ ಏಳು ಮಂದಿ ಉಪಾಧ್ಯಕ್ಷರು, ಮೂರು ಮಂದಿ ಪ್ರಧಾನ ಕಾರ್ಯದರ್ಶಿ, ಎಂಟು ಮಂದಿ ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಕಾರ್ಯಾಲಯ ಕಾರ್ಯದರ್ಶಿ ಸೇರಿದಂತೆ 20 ಮಂದಿಯ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಎಲ್ಲ ಮಂಡಲಗಳಿಗೆ ಪ್ರಾತಿನಿಧ್ಯ ಸಿಗುವ ರೀತಿಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಪದಾಧಿಕಾರಿಗಳ ನಿಯುಕ್ತಿ ಮಾಡಿದ್ದಾರೆ. ಅಲ್ಲದೆ ಮಹಿಳಾ ಮೋರ್ಚಾ, ಯುವ ಮೋರ್ಚಾ, ಎಸ್ಸಿ ಮೋರ್ಚಾ, ಎಸ್‌ಟಿ ಮೋರ್ಚಾ, ರೈತ ಮೋರ್ಚಾಗಳಿಗೆ ನೇಮಕ ಮಾಡಲಾಗಿದೆ.
ಜಿಲ್ಲಾ ಪದಾಧಿಕಾರಿಗಳು: ಸುನಿಲ್ ಆಳ್ವ ಮೂಲ್ಕಿ, ಜಯಂತ್ ಪೂಜಾರಿ ಬೆಳ್ತಂಗಡಿ, ತಿಲಕ್‌ರಾಜ್ ಕೃಷ್ಣಾಪುರ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂಜಾ ಪೈ, ರಾಕೇಶ್ ರೈ ಕೆಡೆಂಜಿ, ಶಾಂತಿಪ್ರಸಾದ್ ಹೆಗ್ಡೆ( ಉಪಾಧ್ಯಕ್ಷರು), ಪ್ರೇಮಾನಂದ ಶೆಟ್ಟಿ ಮಂಗಳೂರು, ಯತೀಶ್ ಆರ್ವಾರ್ ಸುಳ್ಯ ಹಾಗೂ ಕಿಶೋರ್ ಬೊಟ್ಯಾಡಿ( ಪ್ರಧಾನ ಕಾರ್ಯದರ್ಶಿ), ವಿನಯ ಮುಳುಗಾಡು, ದೇವಪ್ಪ ಪೂಜಾರಿ ಬಂಟ್ವಾಳ, ಕವಿತಾ ದಿನೇಶ್ ಮೂಡುಶೆಡ್ಡೆ, ವಸಂತಿ ಕುಲಾಲ್ ಮಚ್ಚಿನ, ಪೂರ್ಣಿಮಾ, ವಿದ್ಯಾಗೌರಿ ಪುತ್ತೂರು, ದಿನೇಶ್ ಅಮ್ಟೂರ್, ಸೀತಾರಾಮ ಬೆಳಾಲ್( ಕಾರ್ಯದರ್ಶಿ), ಸಂಜಯ ಪ್ರಭು(ಕೋಶಾಧಿಕಾರಿ) ಹಾಗೂ ಅರವಿಂದ ಬೆಂಗ್ರೆ( ಕಾರ್ಯಾಲಯ ಕಾರ್ಯದರ್ಶಿ) ಇವರನ್ನು ನೇಮಕ ಮಾಡಲಾಗಿದೆ.ವಸಂತ್ ಜೆ.ಪೂಜಾರಿ ಮತ್ತು ಮನೋಹರ ಶೆಟ್ಟಿ(ಮಾಧ್ಯಮ ಪ್ರಮುಖ್), ರಾಜ್‌ಗೋಪಾಲ್ ರೈ, ಮೋಹನ್‌ರಾಜ್ ಕೆ.ಆರ್. ಹಾಗೂ ಅರುಣ್ ಶೇಟ್(ಜಿಲ್ಲಾ ವಕ್ತಾರ), ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಧಿರೇಶ್ ಕೆ., ಅಕ್ಷಯ ಆಳ್ವ ಮತ್ತು ಕಾರ್ತಿಕ್ ರಾವ್ ಗಂಜಿಮಠ ಇವರನ್ನು ಸಹ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.
ಮಂಜುಳಾ ರಾವ್(ಮಹಿಳಾ ಮೋರ್ಚಾ), ನಂದನ್ ಮಲ್ಯ(ಯುವ ಮೋರ್ಚಾ), ಜಗನ್ನಾಥ ಬೆಳ್ವಾಯಿ(ಎಸ್ಸಿ ಮೋರ್ಚಾ), ಹರೀಶ್ ಬಿಜತ್ರೆ(ಎಸ್‌ಟಿ ಮೋರ್ಚಾ) ಹಾಗೂ ಗಣೇಶ್ ಗೌಡ ನಾವುರ(ರೈತ ಮೋರ್ಚಾ) ನೇಮಕ ಮಾಡಲಾಗಿದೆ.7 ಮಂಡಲ ಅಧ್ಯಕ್ಷರು: ಬೆಳ್ತಂಗಡಿ ಮಂಡಲಕ್ಕೆ ಶ್ರೀನಿವಾಸ ರಾವ್, ಮೂಡುಬಿದಿರೆಗೆ ದಿನೇಶ್ ಪುತ್ರನ್, ಮಂಗಳೂರು ನಗರ ಉತ್ತರಕ್ಕೆ ರಾಜೇಶ್ ಕೊಟ್ಟಾರಿ, ಮಂಗಳೂರು ನಗರ ದಕ್ಷಿಣಕ್ಕೆ ರಮೇಶ್ ಕಂಡೆಟ್ಟು, ಮಂಗಳೂರಿಗೆ ಜಗದೀಶ್ ಆಳ್ವ ಕುವೆತ್ತಬೈಲ್, ಬಂಟ್ವಾಳಕ್ಕೆ ಚೆನ್ನಪ್ಪ ಕೋಟ್ಯಾನ್ ಹಾಗೂ ಸುಳ್ಯಕ್ಕೆ ವೆಂಕಟ ವಳಲಂಬೆ ಇವರನ್ನು ನೇಮಕ ಮಾಡಲಾಗಿದೆ.
ಪುತ್ತೂರು ಮಂಡಲ ನೇಮಕಕ್ಕೆ ತಡೆ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಹೊಸ ಪದಾಧಿಕಾರಿಗಳ ಪಟ್ಟಿ ಶನಿವಾರ ಪ್ರಕಟವಾಗಿದ್ದು, ಪುತ್ತೂರು ಹೊರತುಪಡಿಸಿ ಜಿಲ್ಲೆಯ ಏಳು ಮಂಡಲಗಳ ಅಧ್ಯಕ್ಷರ ಹೆಸರು ಘೋಷಿಸಲಾಗಿದೆ. ಪುತ್ತೂರಲ್ಲಿ ಪುತ್ತಿಲ ಪರಿವಾರದ ಬಿಕ್ಕಟ್ಟು ಶಮನ ಪ್ರಯತ್ನ ಹಿನ್ನೆಲೆಯಲ್ಲಿ ಅಲ್ಲಿನ ಮಂಡಲ ಅಧ್ಯಕ್ಷರ ಘೋಷಣೆಯನ್ನು ಪಕ್ಷದ ವರಿಷ್ಠರು ತಡೆಹಿಡಿದಿದ್ದಾರೆ.ಪುತ್ತೂರು ಮಂಡಲಕ್ಕೆ ಬಿಜೆಪಿ ಅಧ್ಯಕ್ಷರ ನೇಮಕ ಮೂರ್ನಾಲ್ಕು ದಿನಗಳ ಕಾಲ ವಿಳಂಬವಾಗಲಿದೆ. ಅಸೆಂಬ್ಲಿ ಚುನಾವಣೆ ಬಳಿಕ ತಲೆದೋರಿದ ಅರುಣ್ ಕುಮಾರ್ ಪುತ್ತಿಲ ಬಿಕ್ಕಟ್ಟು ಶಮನಕ್ಕೆ ಪ್ರಯತ್ನ ನಡೆಯುತ್ತಿರುವ ಹಿನ್ನೆಲೆ ಹಾಗೂ ಫೆ.5ರಂದು ಪುತ್ತೂರಲ್ಲಿ ಪುತ್ತಿಲ ಪರಿವಾರದ ನಿರ್ಣಾಯಕ ಸಮಾಲೋಚನಾ ಸಭೆ ನಡೆಯುವುದರಿಂದ ಕಾದು ನೋಡುವ ತಂತ್ರಗಾರಿಕೆಗೆ ಬಿಜೆಪಿ ಮೊರೆ ಹೋಗಿದೆ.ಶನಿವಾರ ಬಿಡುಗಡೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಪದಾಧಿಕಾರಿಗಳ ಮೊದಲ ಪಟ್ಟಿಯಲ್ಲಿ ಪುತ್ತೂರು ಮಂಡಲ ಅಧ್ಯಕ್ಷರ ಹೆಸರು ಪ್ರಕಟವಾಗಿಲ್ಲ. ಪಕ್ಷದ ನಾಯಕರ ಸೂಚನೆ ಮೇರೆಗೆ ತಾತ್ಕಾಲಿಕ ತಡೆ ಹಿಡಿಯಲಾಗಿದೆ ಎಂದು ಹೇಳಲಾಗಿದೆ.
ಅಸೆಂಬ್ಲಿ ಚುನಾವಣೆಯಲ್ಲಿ ಹಿಂದು ಸಂಘಟಕ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಿ ಬಿಜೆಪಿ ಸೋಲಿಗೆ ಕಾರಣರಾಗಿದ್ದಲ್ಲದೆ, ಬಿಜೆಪಿಯನ್ನು ತೃತೀಯ ಸ್ಥಾನಕ್ಕೆ ತಳ್ಳಿದ್ದರು. ಆ ಬಳಿಕ ಎರಡು ಗ್ರಾಮ ಪಂಚಾಯ್ತಿ ಉಪ ಚುನಾವಣೆಯಲ್ಲೂ ಬಿಜೆಪಿ ಸೋಲು ಕಂಡಿತ್ತು. ಬಳಿಕ ಸಹಕಾರಿ ಸಂಘಗಳ ಆಡಳಿತ ತೆಕ್ಕೆಗೆ ಬಿಜೆಪಿ ಜತೆ ಸಹಮತ ಹೊಂದಿದ್ದ ಪುತ್ತಿಲ ಪರಿವಾರ, ನಗರ ಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡೂ ಕಡೆ ಮೊದಲ ಬಾರಿ ಸೋತಿತ್ತು. ಬಿಜೆಪಿ ಜತೆ ಸಂಧಾನ ಮಾತುಕತೆ ನಡೆಯುತ್ತಿದ್ದ ಬೆನ್ನಿಗೇ ಈ ಎಲ್ಲ ಬೆಳವಣಿಗೆಗಳು ನಡೆದಿದ್ದು, ಪ್ರತಿ ಬಾರಿಯೂ ಸಂಧಾನ ಮಾತುಕತೆ ಮುರಿದು ಬೀಳುತ್ತಿತ್ತು.ಇದೀಗ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಪಟ್ಟಿ ಹೊರಬಿದ್ದಿದ್ದು, ಇನ್ನು ಪುತ್ತೂರು ಮಂಡಲ ಪದಾಧಿಕಾರಿಗಳ ಪಟ್ಟಿ ಪ್ರಕಟ ಮಾತ್ರ ಬಾಕಿ ಉಳಿದಿದೆ. ಹಾಗಾಗಿ ಪುತ್ತಿಲ ಪರಿವಾರ ಜತೆಗಿನ ಬಿಕ್ಕಟ್ಟು ಶಮನಕ್ಕೆ ಕೊನೆ ಅವಕಾಶ ಎನ್ನಲಾಗಿದ್ದು, ಎಲ್ಲವೂ ಸರಿಹೋದರೆ, ಅರುಣ್ ಕುಮಾರ್ ಪುತ್ತಿಲರನ್ನು ಬಿಜೆಪಿಗೆ ಬರಮಾಡಿಕೊಂಡು ಪುತ್ತೂರು ಮಂಡಲದ ಜವಾಬ್ದಾರಿ ನೀಡುವ ಸಂಭವ ಇದೆ. ಅಂತಿಮ ಮಾತುಕತೆ ಮುರಿದುಬಿದ್ದರೆ, ಪುತ್ತೂರು ಮಂಡಲ ಅಧ್ಯಕ್ಷ ಸ್ಥಾನ ಪಕ್ಷದ ಸಕ್ರಿಯರೊಬ್ಬರ ಹೆಗಲೇರಲಿದೆ ಎಂದು ಮೂಲಗಳು ತಿಳಿಸಿವೆ.