ಬಡವರು, ರೈತರು ದಲಿತ ವಿರೋಧಿ ಕೈ ಸರ್ಕಾರ: ವಿಜಯೇಂದ್ರ

| Published : Jan 31 2024, 02:21 AM IST

ಸಾರಾಂಶ

ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್‌ ಭ್ರಷ್ಟಾಚಾರ ಆರೋಪ ಮಾಡಿದರು. ಆದರೆ ಈಗ ಬೆಂಗಳೂರು ನಗರದಲ್ಲಿ ಮನೆ ಕಟ್ಟಲು, ಸ್ಯಾಂಕ್ಷನ್‌ ತೆಗೆದುಕೊಳ್ಳಬೇಕು ಎಂದರೆ ಸ್ಕ್ವಾರ್‌ ಫೀಟ್‌ಗೆ 100 ರು.ನಂತೆ ಲಂಚ ಕೊಡಬೇಕು. ಮುಂದಿನ ಲೋಕಸಭೆ ಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುವ ವೇಳೆ ಸ್ಕ್ವಾರ್‌ ಫೀಟ್‌ ಮಂತ್ರಿ ಅಂತ ಹೊಸ ಖಾತೆ ಮಾಡಿದರೂ ಆಶ್ಚರ್ಯ ಇಲ್ಲ ಎಂದು ವಿಜಯೇಂದ್ರ ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದಲ್ಲಿರೋದು ಬಡವರು, ರೈತರು, ದಲಿತ ವಿರೋಧಿ ಸರ್ಕಾರ, ಭ್ರಷ್ಟಾಚಾರದ ಸರ್ಕಾರ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಸೀಟುಗಳನ್ನು ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಗರದ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷ ಸತೀಶ್‌ ಕುಂಪಲ ಅವರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಸಂಕಷ್ಟದಲ್ಲಿರುವ ರೈತರಿಗೆ ಯಾವ ಸಹಾಯವನ್ನೂ ರಾಜ್ಯ ಸರ್ಕಾರ ಮಾಡಿಲ್ಲ. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಬರದಿಂದ ಸಂಕಷ್ಟದಲ್ಲಿದ್ದ ರೈತರ ಅಕೌಂಟಿಗೆ 13 ಸಾವಿರ ರು.ಗಳನ್ನು ಹಾಕಿದ್ದರು. ಪ್ರವಾಹ ಪರಿಸ್ಥಿತಿ ಇದ್ದಾಗ 5 ಲಕ್ಷ ರು. ಪರಿಹಾರ ಒದಗಿಸಿದ್ದರು. ಇನ್ನು ಕಾಂಗ್ರೆಸ್‌ ಮುಖಂಡರು ದಲಿತರ ಬಗ್ಗೆ ಮಾತನಾಡುತ್ತಾರೆ. ದಲಿತರಿಗೆ ಸಂಬಂಧಿಸಿದ ಸಾವಿರಾರು ಕೋಟಿ ಹಣವನ್ನು ಡೈವರ್ಟ್‌ ಮಾಡಿದ್ದಾರೆ. ಡಾ.ಬಿ.ಆರ್‌.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಷ್ಟೆ ಅಲ್ಲ, ಅವರ ವಿರುದ್ಧ ಸ್ಪರ್ಧಿಸಿ ಗೆದ್ದ ಕಾಂಗ್ರೆಸ್‌ ಸಂಸದನಿಗೆ ಭಾರತ ರತ್ನ ಪ್ರಶಸ್ತಿ ನೀಡಿದವರಿಗೆ ದಲಿತರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಆದರೆ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರ ಜೀವನಕ್ಕೆ ಸಂಬಂಧಿಸಿದ ಪ್ರದೇಶಗಳನ್ನು ಪಂಚ ತೀರ್ಥ ಕ್ಷೇತ್ರಗಳನ್ನಾಗಿ ಅಭಿವೃದ್ಧಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಬಡವರು, ರೈತರು, ದಲಿತರ ವಿರೋಧಿ ಧೋರಣೆ ಪ್ರದರ್ಶಿಸಿದೆ ಎಂದರು.

ಸ್ಕ್ವಾರ್‌ ಫೀಟ್‌ ಭ್ರಷ್ಟಾಚಾರ: ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್‌ ಭ್ರಷ್ಟಾಚಾರ ಆರೋಪ ಮಾಡಿದರು. ಆದರೆ ಈಗ ಬೆಂಗಳೂರು ನಗರದಲ್ಲಿ ಮನೆ ಕಟ್ಟಲು, ಸ್ಯಾಂಕ್ಷನ್‌ ತೆಗೆದುಕೊಳ್ಳಬೇಕು ಎಂದರೆ ಸ್ಕ್ವಾರ್‌ ಫೀಟ್‌ಗೆ 100 ರು.ನಂತೆ ಲಂಚ ಕೊಡಬೇಕು. ಮನೆ ಸ್ಯಾಂಕ್ಷನ್ ಆದ ಮೇಲೂ 100 ರು., ವಿದ್ಯುತ್‌ ಕನೆಕ್ಷನ್‌ ತೆಗೆದುಕೊಳ್ಳಬೇಕೆಂದರೂ ಚದರ ಅಡಿಗೆ 100 ರು. ಕೊಡಬೇಕು. ಮುಂದಿನ ಲೋಕಸಭೆ ಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುವ ವೇಳೆ ಸ್ಕ್ವಾರ್‌ ಫೀಟ್‌ ಮಂತ್ರಿ ಅಂತ ಹೊಸ ಖಾತೆ ಮಾಡಿದರೂ ಆಶ್ಚರ್ಯ ಇಲ್ಲ ಎಂದು ವಿಜಯೇಂದ್ರ ಲೇವಡಿ ಮಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಾಲ್ಕೈದು ತಿಂಗಳಲ್ಲೇ ಕೆಲವರ ಮನೆಯಲ್ಲಿ 150- 200 ಕೋಟಿ ರು. ಹಣ ಸಿಕ್ಕಿದೆ. ಕೇಂದ್ರ ಬಿಜೆಪಿ ಸರ್ಕಾರ ಐಟಿ ದಾಳಿ ಮೂಲಕ ಟಾರ್ಗೆಟ್‌ ಮಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕರು ಹೇಳಿದರೇ ವಿನಾ ಅದು ಕಪ್ಪು ಹಣ, ಅವರನ್ನು ಅರೆಸ್ಟ್‌ ಮಾಡಿ ಎನ್ನಲಿಲ್ಲ. ಆ ಹಣ ಕಾಂಗ್ರೆಸ್ ಪಕ್ಷದ್ದೇ ಎಂದು ಒಪ್ಪಿಕೊಂಡಂತೆ ಮಾತನಾಡಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.

ಎಲ್ಲ 28 ಸೀಟ್‌ ಗೆಲ್ಬೇಕು: ರಾಜ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊರೆತ ವಿಜಯದ ನಾಗಾಲೋಟ ಮುಂದುವರಿಯುವ ಉತ್ಸಾಹದಲ್ಲಿದ್ದರು. ಪಂಚ ರಾಜ್ಯ ಚುನಾವಣೆಯಲ್ಲೂ ಗ್ಯಾರಂಟಿ ಕುರಿತು ಮಾತನಾಡಿದರು. ಆದರೆ ಮತದಾರರು ತಮಗೆ ಗ್ಯಾರಂಟಿ ಮೇಲೆ ವಿಶ್ವಾಸ ಇಲ್ಲ, ಮೋದಿ ಮೇಲೆ ವಿಶ್ವಾಸ ಇದೆ ಅಂತ ತೋರಿಸಿ ತಕ್ಕ ಉತ್ತರ ನೀಡಿದ್ದಾರೆ. ಈ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಸೀಟ್‌ ಗೆಲ್ಲಬೇಕಿದೆ. ಯಾವ ಕ್ಷಣದಲ್ಲೂ ಚುನಾವಣೆ ಘೋಷಣೆ ಆಗಬಹುದು, ಎಲ್ಲರೂ ಸಂಘಟಿತರಾಗಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಅಲ್ಪಸಂಖ್ಯಾತರ ಹಿಂದೆ ಸಿದ್ದು: ಅಹಿಂದ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಅಹಿಂದದಲ್ಲಿ ಹಿಂದುಳಿದ ವರ್ಗವನ್ನು ಕೈಬಿಟ್ಟು ‘ಅ’ ಅಂದರೆ ಅಲ್ಪಸಂಖ್ಯಾತರ ಹಿಂದೆ ಓಡುತ್ತಿದ್ದಾರೆ. ಅದರಿಂದ ಯಾವ ಉಪಯೋಗವೂ ಇಲ್ಲ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೋಸ ಹೋದ ಮತದಾರರು ಮತ್ತೆ ಮೋಸ ಹೋಗದೆ ನರೇಂದ್ರ ಮೋದಿ ಗೆಲುವಿನ ಉತ್ಸಾಹದಲ್ಲಿದ್ದಾರೆ ಎಂದರು.

ಮುಂದಿನ ಲೋಕಸಭಾ ಚುನಾವಣಾ ಫಲಿತಾಂಶ ಏನಾಗಬಹುದು ಎಂಬ ಚರ್ಚೆ ಇಡೀ ಜಗತ್ತಿನಲ್ಲಿ ನಡೆಯುತ್ತಿದೆ. ಮೋದಿ ಪಿಎಂ ಆಗ್ತಾರಾ ಅಂತ ಹೊರದೇಶದಲ್ಲೂ ಚರ್ಚೆ ಆಗ್ತಿದೆ, ಈ ಹಿಂದೆ ಇಂತಹ ಯಾವ ಚರ್ಚೆಯೂ ಆಗುತ್ತಿರಲಿಲ್ಲ. ಇದೀಗ ಮೋದಿ ಮಾತನ್ನು ಜಗತ್ತೇ ಗಮನಿಸುತ್ತಿದೆ. ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಇದೇ ಸಂದರ್ಭ ಹಿರಿಯ ನಾಯಕರ ಸಮ್ಮುಖದಲ್ಲಿ ನೂತನ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಅವರು ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ ಅವರಿಂದ ಅಧಿಕಾರ ವಹಿಸಿಕೊಂಡರು.

ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌, ಮಾಜಿ ಸಚಿವ ಅಶ್ವತ್ಥ ನಾರಾಯಣ್, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ., ರಾಜ್ಯ ಕಾರ್ಯದರ್ಶಿಗಳಾದ ಶರಣ್ ಪಲ್ಲಿಕೇರಿ, ಬೃಜೇಶ್ ಚೌಟ, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಪ್ರಭಾರಿ ಭಾರತೀಶ್, ಸಹ ಪ್ರಭಾರಿ ರಾಜೇಶ್ ಕಾವೇರಿ, ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್, ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ್ ಕಡೆಂಜಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ ಮತ್ತಿತರರು ಇದ್ದರು.