ಸಾರಾಂಶ
ಸುಳ್ಯ ತಾಲೂಕಿನ ಕೂತುಕುಂಜ ಕಜೆ ಎಂಬಲ್ಲಿ ಹುಟ್ಟಿ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಬೆಳೆದು, ಸುಳ್ಯದಲ್ಲಿರುವ ಡಾ. ಪ್ರಭಾಕರ ಶಿಶಿಲರು ಕನ್ನಡದ ವಿಶಿಷ್ಟ ಪ್ರತಿಭೆ ಹಾಗೂ ಶ್ರೇಷ್ಠ ಸಾಹಿತಿ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಫೆ.21,22ರಂದು ನಡೆಯುವ 27ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಅವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ ತಿಳಿಸಿದ್ದಾರೆ.ಸುಳ್ಯ ತಾಲೂಕಿನ ಕೂತುಕುಂಜ ಕಜೆ ಎಂಬಲ್ಲಿ ಹುಟ್ಟಿ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಬೆಳೆದು, ಸುಳ್ಯದಲ್ಲಿರುವ ಡಾ. ಪ್ರಭಾಕರ ಶಿಶಿಲರು ಕನ್ನಡದ ವಿಶಿಷ್ಟ ಪ್ರತಿಭೆ ಹಾಗೂ ಶ್ರೇಷ್ಠ ಸಾಹಿತಿ.
ಕನ್ನಡದಲ್ಲಿ 10 ಕಾದಂಬರಿ, 8 ಕಥಾ ಸಂಕಲನ, 5 ಪ್ರವಾಸ ಕಥನ ಸೇರಿ ಒಟ್ಟು 54 ಸೃಜನಶೀಲ ಕೃತಿಗಳನ್ನು ಹಾಗೂ 165 ಅರ್ಥಶಾಸ್ತ್ರ ವಿಚಾರ ಸಾಹಿತ್ಯ ಕೃತಿಗಳು, ಆಂಗ್ಲ ಭಾಷೆಯಲ್ಲಿ 10 ಅರ್ಥಶಾಸ್ತ್ರ ಕೃತಿಗಳನ್ನು ರಚಿಸಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಶತಮಾನದ ಕವಿಗಳು ಕೃತಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರ ಕವಿತೆಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ. ಅನೇಕ ಲಾವಣಿ ಮತ್ತು ಗೀಗೀ ಪದ ರಚಿಸಿದ್ದಾರೆ.ಶಿಶಿಲರು ಬರೆದ ಪುಂಸ್ತ್ರೀ ಕೃತಿ ಸಂಸ್ಕೃತ, ಹಿಂದಿ, ಮಲಯಾಳಂ, ತೆಲುಗು, ತಮಿಳು, ತುಳು, ಕೊಂಕಣಿ, ಮರಾಠಿ, ಅರೆಭಾಷೆ, ಕೊಡವ, ಗುಜರಾತಿ, ಬೆಂಗಾಲಿ, ಪಂಜಾಬಿ, ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡು ಜನಮನ್ನಣೆ ಪಡೆದಿದೆ. ಮತ್ಸ್ಯಗಂಧಿ, ಕಪಿಲಳ್ಳಿಯ ಕತೆಗಳು, ಮೂಡಣದ ಕೆಂಪುಕಿರಣ, ಇರುವುದೆಲ್ಲವ ಬಿಟ್ಟು ಕೃತಿಗಳೂ ಅನ್ಯ ಭಾಷೆಗೆ ಅನುವಾದಗೊಂಡಿವೆ. ಯಕ್ಷಗಾನ ಹಾಗೂ ರಂಗಭೂಮಿಗೂ ಅಪಾರ ಕೊಡುಗೆ ನೀಡಿದ್ದಾರೆ. ಅನೇಕ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ಸಾಹಿತ್ಯ ಸೇವೆಗೆ ಅನೇಕ ಪ್ರಶಸ್ತಿಗಳು ಸಂದಿವೆ.