ಸಾರಾಂಶ
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ 8 ಸ್ಥಾನಗಳಿಗೆ ಎ.26 ರಂದು ಚುನಾವಣೆ ನಡೆಯಲಿದೆ. ಸಹಕಾರ ಭಾರತಿಯು 8 ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮತದಾರರು ಬೆಂಬಲಿಸುವಂತೆ ವಿನಂತಿಸಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ 8 ಸ್ಥಾನಗಳಿಗೆ ಎ.26 ರಂದು ಚುನಾವಣೆ ನಡೆಯಲಿದೆ. ಸಹಕಾರ ಭಾರತಿಯು 8 ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮತದಾರರು ಬೆಂಬಲಿಸುವಂತೆ ವಿನಂತಿಸಿದೆ.ಈ ಬಗ್ಗೆ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ ಮಾತನಾಡಿ, ಸಹಕಾರ ಭಾರತಿ ಬೆಂಬಲದೊಂದಿಗೆ ಕುಂದಾಪುರ ಉಪವಿಭಾಗ ಕ್ಷೇತ್ರದ 7 ಸಾಮಾನ್ಯ ಸ್ಥಾನಗಳಿಗೆ ಅಭ್ಯರ್ಥಿಯಾಗಿ ಮೋಹನ್‌ದಾಸ್ ಅಡ್ಯಂತಾಯ (ಕಾರ್ಕಳ), ಭೋಜ ಪೂಜಾರಿ (ಹೆಬ್ರಿ), ಅಶೋಕ್ ರಾವ್ (ಕಾಪು), ಹೆರ್ಗ ದಿನಕರ್ ಶೆಟ್ಟಿ (ಉಡುಪಿ), ಕಾಡೂರು ಸುರೇಶ್ ಶೆಟ್ಟಿ (ಕುಂದಾಪುರ), ಸುಬ್ಬಣ್ಣ ಶೆಟ್ಟಿ ಮತ್ತು ಟಿವಿ.ಪ್ರಾಣೇಶ್ ಯಡಿಯಾಳ್ (ಬೈಂದೂರು), ಮಹಿಳಾ ಮೀಸಲಾತಿ ಕ್ಷೇತ್ರದಲ್ಲಿ ಶಾಂತಾ.ಎಸ್.ಭಟ್ (ಬ್ರಹ್ಮಾವರ) ಸ್ಪರ್ಧಿಸಲಿದ್ದಾರೆ ಎಂದರು.
ಸಹಕಾರ ಭಾರತಿಯಿಂದ ಕಳೆದ 18 ವರ್ಷ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕ, ಅಧ್ಯಕ್ಷ, ಕೆಎಂಎಫ್ ಪ್ರತಿನಿಧಿಯಾಗಿ ಸ್ಕಾಡ್ಸ್ ಸಂಸ್ಥೆಯ ಅಧ್ಯಕ್ಷರಾಗಿ ನಿರಂತರ ಸ್ಥಾನಮಾನಗಳನ್ನು ಪಡೆದಿದ್ದ ಕೊಡವೂರು ರವಿರಾಜ್ ಹೆಗ್ಡೆ, ಚುನಾವಣಾ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯವರೆಗೆ ಸಹಕಾರ ಭಾರತಿಯೊಂದಿಗೆ ಇದ್ದು, ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೊಸಬರಿಗೆ ಅವಕಾಶ ನೀಡಿ ಎಂದು ಹೇಳಿದ್ದರು, ಇದೀಗ ಕಾಂಗ್ರೆಸ್ ಬೆಂಬಲಿತ ಕೂಟದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಆರೋಪಿಸಿದರು.ಕಾಂಗ್ರೆಸ್ ಬೆಂಬಲಿತವಾಗಿ ಕೊಡವೂರು ರವಿರಾಜ್ ಹೆಗ್ಡೆ, ಮಮತಾ ಶೆಟ್ಟಿ, ಸ್ವತಂತ್ರವಾಗಿ ಸ್ಪರ್ಧಿಸುವ ಕಮಲಾಕ್ಷ ಹೆಬ್ಬಾರ್ ಮತ್ತು ಸ್ಮಿತಾ ಆರ್. ಶೆಟ್ಟಿ ಸಹಕಾರ ಭಾರತಿಯ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಹೈನುಗಾರರು ಗೊಂದಲಕ್ಕೆ ಒಳಗಾಗದೆ, ಸಹಕಾರ ಭಾರತಿಯ ಅಧಿಕೃತ ಅಭ್ಯರ್ಥಿಗಳಿಗೆ ಬೆಂಬಲಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರ.ಕಾರ್ಯದರ್ಶಿ ನರಸಿಂಹ ಕಾಮತ್, ಹಾಲು ಪ್ರಕೋಷ್ಠ ರಾಜ್ಯ ಸಂಚಾಲಕ ಬೋಳ ಸದಾಶಿವ ಶೆಟ್ಟಿ, ಜಿ.ಪ್ರ.ಕಾರ್ಯದರ್ಶಿ ಸುದೇಶ್ ನಾಯಕ್ ಇದ್ದರು.