ಮಂಗಳೂರು-ಲಕ್ಷದ್ವೀಪ ಪ್ರವಾಸಿ ಹಡಗು ಸಂಚಾರ: ಕ್ರಮಕ್ಕೆ ಸೂಚನೆ

| Published : Jan 08 2024, 01:45 AM IST

ಸಾರಾಂಶ

ಮಂಗಳೂರಿನಿಂದಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ಸಂಚಾರ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ.ಜಿಲ್ಲಾಡಳಿತಕ್ಕೆ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನಿಂದ ಸಮುದ್ರ ಮೂಲಕ ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ಸಂಚಾರ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ.ಜಿಲ್ಲಾಡಳಿತಕ್ಕೆ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸೂಚನೆ ನೀಡಿದ್ದಾರೆ.

ಪ್ರಸ್ತುತ ಲಕ್ಷದ್ವೀಪಕ್ಕೆ ಕೇರಳದ ಕೊಚ್ಚಿಯಿಂದ ಮಾತ್ರ ಹಡಗು ಮತ್ತು ವಿಮಾನದ ವ್ಯವಸ್ಥೆ ಇದೆ. ವಿಶ್ವದ ಯಾವುದೇ ಮೂಲೆಯಿಂದ ಪ್ರವಾಸಿಗರು ಲಕ್ಷದ್ವೀಪ ತಲುಪಬೇಕಾದರೂ ಕೊಚ್ಚಿಯ ಮೂಲಕವೇ ಹೋಗಬೇಕು. ಆದರೆ ಲಕ್ಷದ್ವೀಪಕ್ಕೆ ಕೊಚ್ಚಿಗಿಂತ ಮಂಗಳೂರು ಮೂಲಕವಾದರೆ ಹತ್ತಿರ. ಈಗಲೂ ಲಕ್ಷದ್ವೀಪಕ್ಕೆ ಕಟ್ಟಡ ಸಾಮಾಗ್ರಿ, ಹಣ್ಣು ತರಕಾರಿ ಮಂಗಳೂರಿನ ಹಳೆ ಬಂದರಿನ ಮೂಲಕವೇ ಸಾಗುತ್ತದೆ. ಈ ಹಿಂದೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ಸಂಚಾರ ಏರ್ಪಡಿಸಲಾಗಿತ್ತು. ಕೇವಲ 250 ರಿಂದ 300 ರು.ಗಳಲ್ಲಿ ಮಂಗಳೂರಿನಿಂದ ಲಕ್ಷದ್ವೀಪದ ಕಲ್ಪೆನಿ ದ್ವೀಪವನ್ನು ತಲುಪಬಹುದಾಗಿತ್ತು. ಅಲ್ಲದೆ ಪ್ರತ್ಯೇಕ ಟೂರ್ ಪ್ಯಾಕೆಜ್‌ ಕೂಡ ಏರ್ಪಡಿಸಲಾಗಿತ್ತು. ಆದರೆ ಇದು ಸ್ಥಗಿತಗೊಂಡು ವರ್ಷಗಳೇ ಸಂದಿದ್ದು, ಮತ್ತೆ ಮಂಗಳೂರು-ಲಕ್ಷದ್ವೀಪ ಮಧ್ಯೆ ಪ್ರವಾಸಿ ಹಡಗು ಸಂಚಾರ ಏರ್ಪಡಿಸುವಂತೆ ಪ್ರವಾಸಿಗರು ಜಾಲತಾಣ ಮೂಲಕ ಬೇಡಿಕೆ ವ್ಯಕ್ತಪಡಿಸಿರುವುದನ್ನು ಸಂಸದರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸಂಸದ ನಳಿನ್‌ ಕುಮಾರ್ ಕೂಡ ಈ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಕೇಳಿದ್ದಾರೆ ಎಂದು ಸಂಸದರ ಕಚೇರಿ ಮೂಲಗಳು ತಿಳಿಸಿವೆ.