- ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಹಿನ್ನೆಲೆ - ಶೆಟ್ಟಿಕೊಪ್ಪದಲ್ಲಿ ಸಂಭ್ರಮಾಚರಣೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿರುವ ಡಿ.ಕೆ.ಶಿವಕುಮಾರ್ ಸಂಘಟನಾ ಚತುರರು ಹಾಗೂ ಉತ್ತಮ ಆಡಳಿತಗಾರರು ಎಂದು ಕಡಹಿನ ಬೈಲು ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಅಧ್ಯಕ್ಷ ಕರುಗುಂದ ನಂದೀಶ್ ತಿಳಿಸಿದರು.
ಬುಧವಾರ ಸಂಜೆ ಶೆಟ್ಟಿಕೊಪ್ಪದಲ್ಲಿ ರಾಜ್ಯದ 24 ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿ ದರು.ಡಿ.ಕೆ.ಶಿವಕುಮಾರ್ ರೈತರ ಅಭಿವೃದ್ಧಿಗೆ ಹಾಗೂ ಹಲವು ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬಂದಾಗಲೆಲ್ಲಾ ಸಚಿವರಾಗಿ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕೊಡುಗೆ ಅಪಾರ ಎಂದರು.ಜಿಲ್ಲಾ ಎಸ್.ಎಸಿ ಹಾಗೂ ಎಸ್ಟಿ ದೌರ್ಜನ್ಯ ಜಾಗೃತ ಸಮಿತಿ ಸದಸ್ಯ ಶೆಟ್ಟಿಕೊಪ್ಪ ಮಹೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷ ಸಂಕಷ್ಟ ಎದುರಿಸಿದಾಗಲೆಲ್ಲಾ ಪಕ್ಷಕ್ಕೆ ಹೆಗಲು ಕೊಟ್ಟು ನಿಲ್ಲುವ ನಾಯಕ ಡಿ.ಕೆ. ಶಿವಕುಮಾರ್ ತಮ್ಮ ರಾಜಕೀಯ ಎದುರಾಳಿಗಳನ್ನು ಮಾತಿನ ಮೂಲಕ ಕಟ್ಟಿಹಾಕುವ ಧೀಮಂತ ನಾಯಕರಾಗಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಶೆಟ್ಟಿಕೊಪ್ಪದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮಂಡಲ ಪ್ರಧಾನ ಬೆಳ್ಳಯ್ಯ ಗೌಡರ ನೇತೃತ್ವದಲ್ಲಿ ನಡೆದ ಸಂಭ್ರಮಾಚಾರಣೆಯಲ್ಲಿ ಕಡಹಿನಬೈಲು ಬೂತ್ ಅಧ್ಯಕ್ಷ ಅಬ್ದುಲ್ ರೆಹಮಾನ್, ಹಿರೇಬಿಸು ಬೂತ್ ಅಧ್ಯಕ್ಷ ಪಿ.ಟಿ.ಜೇಮ್ಸ್,ನೇರ್ಲೆ ಕೊಪ್ಪ ಬೂತ್ ಅಧ್ಯಕ್ಷ ಪರಮೇಶ್ವರ, ಕಾಂಗ್ರೆಸ್ ಪಕ್ಷದ ಮುಖಂಡರಾದ ರವೀಂದ್ರ, ಎ.ಬಿ.ಚಂದ್ರಶೇಖರ, ಎಂ.ಹಮೀದ್,ಬಣಗಿ ಚಂದ್ರೇಗೌಡ,ಎ.ಬಿ.ಪ್ರಶಾಂತ, ಡಿ.ಜಿ.ಜಗದೀಶ್, ಬಾಲರಾಜ್,ಎಂ.ಕೆ.ಶ್ರೀಧರ್,ಸುಲೇಮಾನ್, ಆಶ್ರಪ್, ಶಿವಣ್ಣ ಮತ್ತಿತರರು ಇದ್ದರು.