ಡಿ.ಕೆ.ಶಿವಕುಮಾರ್ ಪ್ರತಿಷ್ಠೆ ಬಿಟ್ಟು ಉತ್ತಮ ಆಡಳಿತ ಮಾಡಿ

| Published : Jun 26 2024, 12:33 AM IST

ಡಿ.ಕೆ.ಶಿವಕುಮಾರ್ ಪ್ರತಿಷ್ಠೆ ಬಿಟ್ಟು ಉತ್ತಮ ಆಡಳಿತ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಪ್ರತಿಷ್ಠೆಯನ್ನು ಬಿಟ್ಟು ಹೇಮಾವತಿ ನಾಲೆಯಿಂದ ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೊರಟಿರುವ ಯೋಜನೆ ಕೈಬಿಡಬೇಕು ಎಂದು ಜಿಪಂ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶಿರಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಪ್ರತಿಷ್ಠೆಯನ್ನು ಬಿಟ್ಟು ಹೇಮಾವತಿ ನಾಲೆಯಿಂದ ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೊರಟಿರುವ ಯೋಜನೆ ಕೈಬಿಡಬೇಕು ಎಂದು ಜಿಪಂ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ ಒತ್ತಾಯಿಸಿದರು. ನಗರದಲ್ಲಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಯಿಂದ ಶಿರಾ, ಮಧುಗಿರಿ, ಕೊಟರಗೆರೆ, ತುಮಕೂರು ತಾಲೂಕುಗಳಿಗೆ ಹೆಚ್ಚು ತೊಂದರೆಯಾಗುತ್ತದೆ. ಈ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತಗಳನ್ನು ಜನತೆ ನೀಡಿದ್ದಾರೆ. ನೀವು ನಿಮಗೆ ಮತ ನೀಡಿದ ಜನರಿಗೆ ಮೋಸ ಮಾಡಬೇಡಿ. ದಯವಿಟ್ಟು ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಯನ್ನು ಕೈಬಿಡಿ ಎಂದು ಒತ್ತಾಯಿಸಿದರು.ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯರಾಧ್ಯ ಮಾತನಾಡಿ, ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಒಂದು ಅವೈಜ್ಞಾನಿಕ ಯೋಜನೆಯಾಗಿದ್ದು, ಕೂಡಲೇ ಸರ್ಕಾರ ರಾಮನಗರ ಜಿಲ್ಲೆ, ಮಾಗಡಿ ತಾಲೂಕಿಗೆ ಹೇಮಾವತಿ ನೀರು ಹರಿಸುವ ಯೋಜನೆ ರದ್ದುಪಡಿಸಬೇಕು. ಗುಬ್ಬಿ ತಾಲೂಕಿನ ಡಿ ರಾಂಪುರ ಭಾಗದಲ್ಲಿ ಸುಮಾರು 20 ಅಡಿ ಆಳದಲ್ಲಿ ಪೈಪ್‌ಗಳನ್ನು ಹಾಕಿ ಮಾಗಡಿಗೆ ನೀರನ್ನು ತೆಗೆದುಕೊಂಡು ಹೋಗುವ ಯೋಜನೆ ರೂಪಿಸಿದ್ದಾರೆ ಎಂದರು.

ನಾವು ನೀರು ತೆಗೆದುಕೊಂಡು ಹೋಗಲು ನಮ್ಮ ವಿರೋಧವಿಲ್ಲ. ಈಗಾಗಲೇ ಆಧುನಿಕ ಕಾಲುವೆಯನ್ನು ಕುಣಿಗಲ್‌ವರೆಗೆ ಮಾಡಿದ್ದಾರೆ. ಅಲ್ಲಿಂದ ಪೈಪ್ ಮೂಲಕ ಅಥವಾ ಕಾಲುವೆ ಮೂಲಕ ನೀರನ್ನು ತೆಗೆದುಕೊಂಡು ಹೋಗಲಿ ನಮ್ಮ ವಿರೋಧವಿಲ್ಲ. ಆದರೆ ಒಂದು ಗುರುತ್ವಾಕರ್ಷಣೆ ಇರುವ ಮುಖ್ಯ ಸ್ಥಳದಲ್ಲಿ ಹಳ್ಳವನ್ನು ತೋಡಿ ಪೈಪ್ ಮುಖಾಂತರ ತುಮಕೂರು ಜಿಲ್ಲೆಗೆ ಬರುವ ನೀರನ್ನೇ ಸಾಗಣೆ ಮಾಡುವ ಒಂದು ಕುತಂತ್ರದ ಯೋಜನೆ ರೂಪಸಿದ್ದಾರೆ. ಇದಕ್ಕೆ 1000 ಕೋಟಿ ರೂ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಕಾಲುವೆ ಇದ್ದು ಎಕ್ಸ್‌ಪ್ರೆಸ್‌ ಕೆನಾಲ್ ಅವಶ್ಯಕತೆ ಇರಲಿಲ್ಲ. ಕೇವಲ ಸುಮಾರು 300 ಕೋಟಿ ರು.ಯಲ್ಲಿ ಕುಣಿಗಲ್‌ನಿಂದ ನೀರು ತೆಗೆದುಕೊಂಡು ಹೋಗಬಹುದಿತ್ತು. ಆದರೆ ಇದೊಂದು ದುಡ್ಡು ಹೊಡೆಯುವ ಯೋಜನೆ. ಈ ಕೂಡಲೇ ಈ ಯೋಜನೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು. ರೈತ ಸಂಘ, ಜೆಡಿಎಸ್ ಪಕ್ಷ, ಕನ್ನಡ ಸಂಘಟನೆಗಳು, ದಲಿತ ಸಂಘಟನೆಗಳು, ಬಿಎಸ್ಪಿ ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ನಗರದ ಅಂಬೇಡ್ಕರ್ ವೃತ್ತದಿಂದ ಕಾಲ್ನಡಿಗೆ ಮುಖೇನ ನಗರದ ಪ್ರಮುಖ ರಸ್ತೆಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಅಂಬೇಡ್ಕರ್ ವೃತ್ತದಲ್ಲಿ ಕೆಲ ನಿಮಿಷಗಳ ಕಾಲ ರಸ್ತೆ ತಡೆ ನಡೆಸಿ ''''ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ''''ಯನ್ನು ಶ್ರೀಘ್ರವೇ ಕೈ ಬಿಡಬೇಕು, ತುಮಕೂರು ಜಿಲ್ಲೆಗೆ ಮಿಸಲಿಟ್ಟಿರುವ 25.3 ಟಿ.ಎಂ.ಸಿ. ಹೇಮಾವತಿ ನೀರನ್ನು ಹರಿಸಬೇಕು. ಶಿರಾ ತಾಲ್ಲೂಕಿನ ರೈತರ ಹಿತ ಕಾಪಾಡಬೇಕು ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಜೆ.ಎನ್.ರಾಜಸಿಂಹ, ರಾಜ್ಯ ಜೆಡಿಎಸ್ ಪರಿಷತ್ ಸದಸ್ಯ ಆರ್.ಉಗ್ರೇಶ್, ತಾಲೂಕು ರೈತ ಸಂಘದ ಅಧ್ಯಕ್ಷರಾದ ಸಣ್ಣದ್ಯಾಮೇಗೌಡ, ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ಶ್ರೀಗಂಧ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಡಾ.ರಘುರಾಮ್, ನಿವೃತ್ತ ಪ್ರಾಂಶುಪಾಲರು ಹಾಗೂ ನಿರ್ಮಾಪಕರಾದ ಡಿ.ಎಸ್.ಕೃಷ್ಣಮೂರ್ತಿ, ರಮೇಶ್, ಗೋಪಾಲ, ಲಕ್ಷ್ಮಣ್, ಚಂದ್ರಶೇಖರ್, ಹನುಮಂತರಾಯಪ್ಪ, ರೇಣುಕಾ ಪ್ರಸಾದ್, ಜಯಪ್ರಕಾಶ್, ಜಗದೀಶ್, ನಾರಾಯಣಪ್ಪ, ಜಯಣ್ಣ, ಕೃಷ್ಣಪ್ಪ ಸೇರಿದಂತೆ ಹಲವರು ಹಾಜರಿದ್ದರು.