ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಶತಾಯುಷಿ ಸಾಹಿತಿ ದಿ.ಸೀತಾಸುತ ಅವರು ಸಾಹಿತ್ಯಕ್ಕೆ ಅಲ್ಲದೇ ಶಿಕ್ಷಣಕ್ಕೂ ಒತ್ತು ನೀಡಿದ್ದರು ಎಂಬುದಕ್ಕೆ ಅವರ ಕುಟುಂಬವೇ ಸಾಕ್ಷಿ ಎಂದು ಮೈಸೂರು ವಿಶ್ವವಿದ್ಯಾನಿಲಯ ಉಪ ಕುಲಪತಿ ಎನ್.ಕೆ.ಲೋಕನಾಥ್ ತಿಳಿಸಿದರು.ನಗರದ ಚಂದ್ರದರ್ಶನ ಕಲ್ಯಾಣ ಮಂಟಪದಲ್ಲಿ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಡಾ.ವಿ.ಟಿ.ಸುಶೀಲ ಜಯರಾಮ್ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಶತಾಯುಷಿ ಸಾಹಿತಿ ದಿವಂಗತ ಸೀತಾಸುತರವರ 126ನೇ ವರ್ಷದ ಸಂಸ್ಮರಣೆ ಮತ್ತು ಡಾ.ವಿ.ಟಿ.ಸುಶೀಲ ಜಯರಾಮ್ ಹೆಸರಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೀತಾಸುತ ಕುಟುಂಬದಲ್ಲಿ ಬಹುಪಾಲು ವೈದ್ಯರೇ ಹೆಚ್ಚಾಗಿದ್ದಾರೆ. ಅದೇ ರೀತಿ ಸಾಹಿತ್ಯದ ಜೊತೆಗೆ ಶಿಕ್ಷಣದ ನಂಟಿಗೂ ಒಗ್ಗಿಕೊಂಡಿದ್ದರು. ಇಂತಹ ಸೀತಾಸುರ ಜೀವನ ಮತ್ತು ಅವರು ನಡೆದು ಬಂದ ದಾರಿ ಎಲ್ಲರಿಗೂ ತಿಳಿಯಬೇಕು. ಹಾಗಾಗಿ ಅವರ ಸಾಹಿತ್ಯಗಳು ಚರ್ಚೆಗೆ ಬರಬೇಕು. ಇಲ್ಲದಿದ್ದರೆ ಸಾಹಿತ್ಯಾಸಕ್ತರಿಗೆ ಅವರ ಸಾರ ತಿಳಿಯುವುದಾದರೂ ಹೇಗೆ? ಪ್ರತಿಯೊಂದು ಕೃತಿಯ ಬಗ್ಗೆ ವ್ಯಾಪಕ ಚರ್ಚೆ ನಡೆದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ. ಇಲ್ಲದಿದ್ದರೆ ಕೇವಲ ಕೃತಿ ರಚನೆಗೊಂಡು ಬಿಡುಗಡೆಯಾಗಿ ಕಪಾಟು ಸೇರಿಬಿಡುತ್ತದೆ ಎಂದು ಹೇಳಿದರು.ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ಮೂಲಕ ಸೀತಾಸುತ ಅವರು ಸರಳ ಜೀವನ ನಡೆಸುತ್ತಿದ್ದರು ಎಂಬುದನ್ನು ಕೇಳಿದ್ದೇನೆ. ಇಂತಹ ಮಹನೀಯರ ಕೆಲಸವನ್ನು ನೆನೆಯಲು ವೈದ್ಯ, ಸಾಹಿತ್ಯ ಹಾಗೂ ಯೋಧರಿಗೆ ಸನ್ಮಾನ ಮಾಡಿ ಗೌರವಿಸುತ್ತಿರುವುದು ಉತ್ತಮ ಕೆಲಸ. ನಾನು ಕೂಡ ಇಂತಹ ಕಾರ್ಯಕ್ರಮಗಳು ನಡೆಯಲು ಸಹಕರಿಸುವೆ ಎಂದು ತಿಳಿಸಿದರು.
ವಿದೇಶಕ್ಕೆ ಹೋಗಿ ಬಂದ ಕೆಲವರು ಕನ್ನಡವನ್ನೇ ಮರೆಯುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಕನ್ನಡಿಗರು ಎಲ್ಲೇ ಹೋದರೂ ತಮ್ಮ ಮಾತೃ ಭಾಷೆಯನ್ನು ಬಿಟ್ಟುಕೊಡುವ ಪ್ರಮೇಯವನ್ನು ಬೆಳೆಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.ಮಂಡ್ಯ ಜನರು ಹೃದಯವಂತರು ಎಂಬುದಕ್ಕೆ ನನಗೆ ಗೌರವ ತಂದುಕೊಡುವ ರೀತಿಯಲ್ಲಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವುದು ಶ್ಲಾಘನೀಯ. ಸೀತಾಸುತ ಅವರ ಸಾಹಿತ್ಯವನ್ನು ನಾನು ಓದಿದ್ದೇನೆ ಹಾಗೂ ಹತ್ತಿರದಿಂದ ಕಂಡಿದ್ದೇನೆ ಎಂದು ನುಡಿದರು.
ದಿವಂಗತ ಡಾ.ವಿ.ಟಿ.ಸುಶೀಲ ಜಯರಾಂ ಹೆಸರಿನ ವೈದ್ಯಕೀಯ ಸೇವಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿಜಿಎಸ್ ಮೆಡಿಕಲ್ ಹಾಸ್ಪಿಟಲ್‌ನ ಮುಖ್ಯ ಆಡಳಿತಾಕಾರಿ ಡಾ.ಕೃಷ್ಣಮೂರ್ತಿ, ಪ್ರಶಸ್ತಿಯನ್ನು ಸ್ವೀಕರಿಸಿದ್ದಕ್ಕೆ ಸಂತೋಷ ತರಿಸಿದೆ. ನನಗಿಂತಲೂ ಹಿಂದೆ ಈ ಪ್ರಶಸ್ತಿಯನ್ನು ದಿಗ್ಗಜರಿಗೆ ನೀಡಿದ್ದಾರೆ. ಅವರ ಸಾಲಿನಲ್ಲಿ ನನ್ನನ್ನೂ ಗೌರವಿಸಿ ಪ್ರಶಸ್ತಿ ನೀಡಿರುವ ಸೀತಾಸುತರ ಕುಟುಂಬಕ್ಕೆ ಅನಂತ ಧನ್ಯವಾದಗಳನ್ನು ತಿಳಿಸುವೆ ಎಂದು ಸ್ಮರಿಸಿದರು.ಡಾ.ವಿ.ಟಿ.ಸುಶೀಲ ಜಯರಾಮ್ ಟ್ರಸ್ಟ್‌ನವರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಮಿಮ್ಸ್‌ಗೆ 60 ಹಾಸಿಗೆಯ ಹೆರಿಗೆ ಕೊಠಡಿ ನಿರ್ಮಾಣ, ಡಯಾಲಿಸಿಸ್ ಕೇಂದ್ರಕ್ಕೆ ಉಪಕರಣಗಳನ್ನು ನೀಡಿ ಬಡಜನರ ಆರೋಗ್ಯಕ್ಕೆ ನೆರವಾಗಿದ್ದಾರೆ. ಉಳ್ಳವರು ಸಮಾಜದಲ್ಲಿ ಸೇವೆ ಮಾಡುವುದು ಕಡಿಮೆ, ಬೇರೆಯವರ ಜೀವನಕ್ಕೆ ನೆರವಾಗಲು ನಿಂತಿರುವ ಈ ಕುಟುಂಬಕ್ಕೆ ದೇವರು ಮತ್ತಷ್ಟು ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದರು.
ದೇಶ ಸೇವಾ ಪ್ರಶಸ್ತಿಯನ್ನು ವೀರಯೋಧ ಕೆ.ಪಿ.ಜನಾರ್ಧನಗೌಡ(ಮರಣೋತ್ತರ) ಅವರ ಪತ್ನಿ ರಂಜಿತಾ, ಸಾಹಿತ್ಯ ಸೇವಾ ಪ್ರಶಸ್ತಿಯನ್ನು ಹಾಸನ ಹೇಮಗಂಗೋತ್ರಿ ವಿವಿ ರಿಜಿಸ್ಟ್ರಾರ್ ಪುಟ್ಟಸ್ವಾಮಿ ಹಾಗೂ ದಿವಂಗತ ಡಾ.ವಿ.ಟಿ.ಸುಶೀಲ ಜಯರಾಂ ಹೆಸರಿನ ವೈದ್ಯಕೀಯ ಸೇವಾ ಪ್ರಶಸ್ತಿಯನ್ನು ಬಿಜಿಎಸ್ ಮೆಡಿಕಲ್ ಹಾಸ್ಪಟಲ್‌ನ ಮುಖ್ಯ ಆಡಳಿತಾಕಾರಿ ಡಾ.ಕೃಷ್ಣಮೂರ್ತಿ ಅವರಿಗೆ ನೀಡಲಾಯಿತು.ಕಾರ್ಯಕ್ರಮಕ್ಕೂ ಮುನ್ನ ಪ್ರಶಸ್ತಿ ಪುರಸ್ಕೃತರನ್ನು ನಗರದ ಹೊಸಹಳ್ಳಿ ಬಿಸಿಲು ಮಾರಮ್ಮ ದೇವಸ್ಥಾನದ ಆವರಣದಿಂದ ಬೆಳ್ಳಿ ಸಾರೋಟಿನಲ್ಲಿ ಎತ್ತಿನಗಾಡಿ ಜೊತೆಯಲ್ಲಿ ವೇದಿಕೆ ಬಳಿ ಗೌರವದಿಂದ ಕರೆತರಲಾಯಿತು. ಭರತ ನಾಟ್ಯ ನೃತ್ಯ ವೈಭವ ಸೇರಿ ಸಾಂಸ್ಕೃತಿಕ ವಿವಿಧ ಕಾರ್ಯಕ್ರಮಗಳು ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಅಧ್ಯಕ್ಷ ಕೆ.ಎಸ್.ದೊರೆಸ್ವಾಮಿ, ಡಾ.ಕೆ.ಎಸ್.ಜಯರಾಂ, ಡಾ.ಕೆ.ಎಸ್.ಕೃಷ್ಣ, ಕೆ.ಎಸ್.ಶ್ರೀಕಂಠಸ್ವಾಮಿ ಭಾಗವಹಿಸಿದ್ದರು.