ಜಾತಿ, ಮತ ಮೀರಿ ೪ ಬಾರಿ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದಿಂದ ರಾಜಕೀಯ ಕ್ಷೇತ್ರಕ್ಕೆ ಹಾನಿಯಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಹಾನಗಲ್ಲ: ಜಾತಿ, ಮತ ಮೀರಿ ೪ ಬಾರಿ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದಿಂದ ರಾಜಕೀಯ ಕ್ಷೇತ್ರಕ್ಕೆ ಹಾನಿಯಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ರಾತ್ರಿ ಹಾನಗಲ್ ಮತ್ತು ಅಕ್ಕಿಆಲೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮೌನಾಚರಣೆ ಸಲ್ಲಿಸಿದ ಅವರು ರಾಜಕೀಯ ಚದುರಂಗದಲ್ಲಿ ಮೊದಲ ಹೆಜ್ಜೆಯಲ್ಲೇ ಯಶಸ್ಸು ಕಂಡಿದ್ದ ಸುಧಾಕರ್ ಅಪಾರ ಜನಪ್ರಿಯತೆ ಗಳಿಸಿದ್ದರು. ಸಾರ್ವಜನಿಕ ಸೇವೆಯ ಬಗ್ಗೆ ಅವರಲ್ಲಿ ಅಪಾರ ಕಾಳಜಿ, ಕಳಕಳಿ ಇತ್ತು. ಅಂಥವರು ಹೆಚ್ಚು ಕಾಲ ಜನರ ನಡುವೆ ಇರಬೇಕಿತ್ತು ಎಂದರು.ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಅಲ್ಪಸಂಖ್ಯಾತ ಜೈನ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಡಿ.ಸುಧಾಕರ್ ಅವರ ಸಮುದಾಯದ ಮತಗಳು ಬೆರಳೆಣಿಕೆಯಷ್ಟು ಇದ್ದರೂ ಗೆದ್ದು ಬರುತ್ತಿದ್ದರು. ವಿಶೇಷವಾಗಿ ರೈತರು, ಬಡವರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದರು. ಸಹಕಾರ ಕ್ಷೇತ್ರದಲ್ಲಿ ಸಹ ಛಾಪು ಮೂಡಿಸಿದ್ದರು. ಅವರ ಅಕಾಲಿಕ ನಿಧನದ ದುಃಖ ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದರು.
ಶಿಗ್ಗಾಂವಿ, ಸವಣೂರು ಕ್ಷೇತ್ರದ ಶಾಸಕ ಯಾಸೀರ್‌ಖಾನ ಪಠಾಣ, ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ, ಮುಖಂಡ ಆನಂದಸ್ವಾಮಿ ಗಡ್ಡದೇವರಮಠ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದರ್ಶನ ಲಮಾಣಿ, ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ ಇದ್ದರು.