ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಹಿಂದುಳಿದ ವರ್ಗಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆಗೊಳಿಸದೆ ಇರುವುದನ್ನು ಖಂಡಿಸಿ ಡಿ. 13 ರಂದು ಗಾಂಧಿ ಚೌಕದಲ್ಲಿ ಪ್ರತಿಭಟಿಸುವುದಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ತಿಳಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿಯೇ ಇರುವ ನಿಗಮಗಳಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆಗೊಳಿಸಿಲ್ಲ ಎಂದು ಟೀಕಿಸಿದರು. ಸಿದ್ದರಾಮಯ್ಯ ಹಿಂದುಳಿದ ವರ್ಗದ ಚಾಂಪಿಯನ್ ಅಂತಾರೆ. ಆದರೆ ಈವರೆಗೂ ನಿಗಮಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಈ ಹಿಂದೆ ಬಸವರಾಜ್ ಬೊಮ್ಮಾಯಿ ಸರ್ಕಾರ ಇದ್ದಾಗ 546 ಕೋಟಿ ರೂ. ಅನುದಾನವನ್ನು ವಿವಿಧ ನಿಗಮಗಳಿಗೆ ಬಿಡುಗಡೆ ಮಾಡಿತ್ತು. ಆದರೆ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇವಲ 170 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಸವಿತಾ ಸಮುದಾಯದ ಅಭಿವೃದ್ಧಿಗೆ ಕೇವಲ 2 ಕೋಟಿ ರೂ. ಬಿಡುಗಡೆ ಮಾಡಿದೆ. ಹಿಂದಿನ ಸರ್ಕಾರಗಳು ಬಿಡುಗಡೆ ಮಾಡಿದ್ದಷ್ಟು ಅನುದಾನವನ್ನ ಬಿಡುಗಡೆ ಮಾಡಬೇಕಿತ್ತು. ಈ ಕೆಲಸವನ್ನ ಕೂಡ ಸರ್ಕಾರ ಮಾಡಿಲ್ಲ. ಈಗ ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಆಗಿರೋದನ್ನ ಇದು ತೋರಿಸುತ್ತದೆ. ಹಿಂದುಳಿದ ವರ್ಗಗಳ ನಿಗಮಗಳ ಬಾಗಿಲು ಮುಚ್ಚಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.ಗ್ಯಾರಂಟಿ ಯೋಜನೆ ಬಿಟ್ಟರೆ ಈ ಸರ್ಕಾರಕ್ಕೆ ಏನು ಕಾಣುತ್ತಿಲ್ಲ. ರಾಜ್ಯ ಸರ್ಕಾರದ ಈ ನಡೆ ಖಂಡಿಸಿ ಪ್ರಥಮ ಹಂತದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಮೈಸೂರಿನಲ್ಲೂ ನಾಳೆ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗಿದೆ. ಕಾಂಗ್ರೆಸ್ ಮತ ಬ್ಯಾಂಕಿನ ಮೇಲೆ ಅಧಿಕಾರ ಮಾಡುವ ಕೆಲಸ ಮಾಡುತ್ತಿದೆ. ಬದುಕು ಕಟ್ಟಿಕೊಡುವ ಯಾವುದೇ ಯೋಜನೆ ಕಾಂಗ್ರೆಸ್ ನಲ್ಲಿ ಇಲ್ಲ. ದೂರದೃಷ್ಟಿ ಉಳ್ಳ ಯಾವುದೇ ಯೋಜನೆಯೂ ಇಲ್ಲ. ಗ್ಯಾರಂಟಿ ಯೋಜನೆ ಹಣವನ್ನು ಚುನಾವಣೆ ವೇಳೆ ಬಿಡುಗಡೆ ಮಾಡುವ ಕೆಲಸ ಮಾಡುತ್ತಿದೆ. ರಾಜಕಾರಣದಲ್ಲಿ ಅಧಿಕಾರ ಮಾಡಲು, ಅಧಿಕಾರ ಉಳಿಸಿಕೊಳ್ಳಲು ಮಾತ್ರ ಅಹಿಂದ ಬೇಕು. ಆದರೆ ಅಹಿಂದ ಸಮುದಾಯಕ್ಕೆ ಯಾವುದೇ ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ಅವರು ಕಿಡಿ ಕಾರಿದರು. ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ನಮ್ಮ ಬೆಂಬಲಪಂಚಮಸಾಲಿ ಸಮುದಾಯ ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ರಘು ಕೌಟಿಲ್ಯ, ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಹೋರಾಟಗಾರರ ಮೇಲಿನ ಹಲ್ಲೆಯನ್ನ ಖಂಡಿಸುತ್ತೇವೆ ಎಂದರು.ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.