ಜೀವ ಭಯವಿದ್ದರೂ ಗನ್‌ಮ್ಯಾನ್‌ ನೀಡಿಲ್ಲ: ಬಸವರಾಜ ದಢೇಸೂಗುರು

| Published : May 23 2025, 11:49 PM IST

ಸಾರಾಂಶ

ಜಿಲ್ಲೆಯ ಅಧಿಕಾರಿಗಳು ಶಿವರಾಜ ತಂಗಡಗಿಯವರ ಒತ್ತೆಯಲ್ಲಿದ್ದಾರೆ. ಸಚಿವರು ನನ್ನನ್ನ ಟಾರ್ಗೆಟ್‌ ಮಾಡಬೇಕು ಎನ್ನುವ ಉದ್ದೇಶದಿಂದಲೇ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಬಸವರಾಜ ದಢೇಸೂಗುರ ಹೇಳಿದ್ದಾರೆ.

ಕೊಪ್ಪಳ:

ನನಗೆ ಜೀವ ಭಯವಿದ್ದು ಗನ್‌ಮ್ಯಾನ್‌ ನೀಡುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಸರ್ಕಾರಕ್ಕೆ ನನಗೆ ರಕ್ಷಣೆ ನೀಡದೆ ಟಾರ್ಗೆಟ್‌ ಮಾಡುತ್ತಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗುರು ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಾಜಿ ಶಾಸಕರಾದ ಅಮರೇಗೌಡ ಭಯ್ಯಾಪುರ, ಪರಣ್ಣ ಮುನವಳ್ಳಿ ಅವರಿಗೆ ಗನ್‌ ಮ್ಯಾನ್‌ ನೀಡಲಾಗಿದೆ. ಅವರಂತೆ ನನಗೂ ಗನ್‌ಮ್ಯಾನ್‌ ನೀಡುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಸ್ಥಳೀಯ ಸಿಪಿಐಗೂ ಪತ್ರ ಬರೆದಿದ್ದೇನೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಮಾತು ಕೇಳಿ ನನಗೆ ಗನ್‌ ಮ್ಯಾನ್‌ ನೀಡುತ್ತಿಲ್ಲ ಎಂದು ದೂರಿದರು.

ನಾವು ಸದಾ ಜನರ ಮಧ್ಯೆ ಇರುವವರು. ಕೆಲ ಸಂದರ್ಭದಲ್ಲಿ ಕೆಲ ಅಹಿತಕರ ಘಟನೆಗಳು ಜರುಗುತ್ತವೆ. ಈ ವೇಳೆ ನಮಗೆ ಗನ್‌ ಮ್ಯಾನ್‌ ಬೇಕಾಗುತ್ತದೆ. ಹೀಗಾಗಿ ನಾನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದೆ. ಒಂದು ವೇಳೆ ಗನ್‌ ಮ್ಯಾನ್‌ ನೀಡಿದರೆ ಎಲ್ಲಿ ವರ್ಗಾವಣೆಯಾಗುತ್ತೇನೆ ಎನ್ನುವ ಭಯದಲ್ಲಿ ನೀಡುತ್ತಿಲ್ಲ. ಜಿಲ್ಲೆಯ ಅಧಿಕಾರಿಗಳು ಶಿವರಾಜ ತಂಗಡಗಿಯವರ ಒತ್ತೆಯಲ್ಲಿದ್ದಾರೆ. ಸಚಿವರು ನನ್ನನ್ನ ಟಾರ್ಗೆಟ್‌ ಮಾಡಬೇಕು ಎನ್ನುವ ಉದ್ದೇಶದಿಂದಲೇ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.

ಡ್ಯಾಂ ಬಗ್ಗೆ ಕಾಳಜಿ ಇಲ್ಲ:

ತುಂಗಭದ್ರಾ ಜಲಾಶಯದ 19ನೇ ಗೇಟ್ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಇದೀಗ ಮತ್ತೆ ಮಳೆಗಾಲ ಶುರುವಾಗಿದ್ದು ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಷ್ಟಾದರೂ ಸರ್ಕಾರ ಕಾಳಜಿ ವಹಿಸಿ ಹೊಸ ಗೇಟ್‌ ಅಳವಡಿಸಲು ಮುಂದಾಗಿಲ್ಲ. ಇದೀಗ ಜಲಾಶಯದ ಎಡದಂಡೆ ಹಾಗೂ ಬಲದಂಡೆ ಕಾಲುವೆ ಕಿತ್ತು ಹೋಗಿವೆ ಎಂದು ದಢೇಸೂಗುರು ಹೇಳಿದರು.

ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮ್ಮೀರ್ ಅಹ್ಮದ್‌ ಖಾನ್ ಹೊಸ ಗೇಟ್‌ ಅಳವಡಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ, ಅದು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಕಿಡಿಕಾರಿದರು.

ಮುಖಂಡ ಡಾ. ಬಸವರಾಜ ಕ್ಯಾವಟರ್ ಮಾತನಾಡಿ, ಮುನಿರಾಬಾದ್ ರೈಲ್ವೆ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧಿಕಾರಿಗಳು ನಿಯಮ ಉಲ್ಲಂಘಿಸಿದ್ದಾರೆ. ಈ ಕುರಿತು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು. ಕೊಪ್ಪಳ ರೈಲ್ವೆ ಸೇತುವೆ ಬಳಿ ಬೋರ್ಡ್ ತೆರವು ವಿಚಾರವಾಗಿ ಮತ್ತೆ ಪರಿಶೀಲಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಒತ್ತಾಯಿಸಲಾಗಿದೆ ಎಂದರು.

ಸುದ್ದಿಗೊಷ್ಠಿಯಲ್ಲಿ ಮುಖಂಡರಾದ ಗಣೇಶ ಹೊರತಟ್ನಾಳ, ಸುನೀಲ್ ಹೆಸರೂರು ಇದ್ದರು.