ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ದಿನದಿಂದ ದಿನಕ್ಕೆ ರಸ್ತೆ ಗುಂಡಿ ಸಂಖ್ಯೆ ಹೆಚ್ಚಾಗುತ್ತಿದ್ದು, ದಿನಕ್ಕೆ ಒಂದು ಸಾವಿರಕ್ಕೂ ಅಧಿಕ ರಸ್ತೆ ಗುಂಡಿ ಕುರಿತ ದೂರುಗಳು ದಾಖಲಾಗುತ್ತಿವೆ.ನಗರದಲ್ಲಿ ಒಟ್ಟು 14 ಸಾವಿರ ಕಿ.ಮೀ ಉದ್ದದ ರಸ್ತೆ ಜಾಲವಿದ್ದು, ಈ ಪೈಕಿ 1,344 ಕಿ.ಮೀ ಉದ್ದದ ಸಬ್ ಆರ್ಟೀರಿಯಲ್ ಹಾಗೂ ಆರ್ಟೀಯರಿಲ್ ರಸ್ತೆ ಇದೆ. ಉಳಿದ 12,529 ಕಿ.ಮೀ. ಉದ್ದದ ವಾರ್ಡ್ ರಸ್ತೆಗಳಿವೆ. ಪ್ರತಿ ವರ್ಷ ನಗರದ ರಸ್ತೆಗಳಿಗೆ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ವೆಚ್ಚ ಮಾಡಲಾಗುತ್ತಿದೆ. ಆದರೂ ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ನಗರದಲ್ಲಿ ಇದೀಗ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಾರ್ಡ್ ರಸ್ತೆಗಳಲ್ಲಿ ಗುಂಡಿ ಸಮಸ್ಯೆ ಅತ್ಯಧಿಕವಾಗಿದೆ.
ದಿನಕ್ಕೆ ಒಂದು ಸಾವಿರಕ್ಕೂ ಅಧಿಕ ದೂರು:ಬಿಬಿಎಂಪಿಯು ಇತ್ತೀಚೆಗೆ ಅಭಿವೃದ್ಧಿ ಪಡಿಸಿರುವ ‘ರಸ್ತೆ ಗುಂಡಿ ಗಮನ’ ಆ್ಯಪ್‌ನಲ್ಲಿ ಪ್ರತಿ ದಿನ ಒಂದು ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗೆ ಸಂಬಂಧಿಸಿದಂತೆ ದೂರುಗಳು ದಾಖಲಾಗುತ್ತಿವೆ. ಆ್ಯಪ್ ಬಿಡುಗಡೆ ಸಂದರ್ಭದಲ್ಲಿ ದೂರು ದಾಖಲಾದ ಎರಡರಿಂದ ಮೂರು ದಿನದಲ್ಲಿ ಗುಂಡಿ ಮುಚ್ಚುವುದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ಆದರೆ, ಈ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಒಂದು ವಾರ ಸಮಯ ನೀಡುವಂತೆ ಕೇಳುತ್ತಿವೆ.
ಬಿಬಿಎಂಪಿ ಅಧಿಕಾರಿಗಳು ಹೇಳುವ ಪ್ರಕಾರ ನಗರದಲ್ಲಿ 800 ರಸ್ತೆ ಗುಂಡಿ ಅಷ್ಟೇ ಇವೆ. ರಸ್ತೆ ಗುಂಡಿ ಗಮನ ಆ್ಯಪ್‌ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ತ್ವರಿತವಾಗಿ ಗುಂಡಿ ಮುಚ್ಚುವ ಕೆಲಸವನ್ನೂ ಪಾಲಿಕೆ ಮಾಡುತ್ತಿದೆ ಎಂದು ಹೇಳಿದ್ದಾರೆ.