ಸಾರಾಂಶ
ಶಿಗ್ಗಾಂವಿ:ಮಾಹಿತಿ ಕಲೆ ಹಾಕುವ ಜೊತೆಗೆ ಪ್ರತಿದಿನ ಪತ್ರಿಕೆಯನ್ನು ಜನತೆಗೆ ತಲುಪಿಸುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ ಎಂದು ತಹಸೀಲ್ದಾರ್ ಸಂತೋಷ ಹಿರೇಮಠ ಹೇಳಿದರು. ಪಟ್ಟಣದ ಹಳೆ ಬಸ್ ನಿಲ್ದಾಣದ ಜಯಲಕ್ಷ್ಮಿ ಭವನದಲ್ಲಿ ತಾಲೂಕು ಪತ್ರಿಕಾ ವಿತರಕರ ಸಂಘದಿಂದ ಹಮ್ಮಿಕೊಂಡ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸುದ್ದಿಗಳಿಗೆ ಅರ್ಥ ಬರುವುದು ಪತ್ರಿಕೆಯನ್ನು ಜನತೆ ಓದಿದಾಗ ಮಾತ್ರ, ಜಗತ್ತು ಎಚ್ಚರವಾಗುವ ಮೊದಲೇ ಪತ್ರಿಕೆ ಮನೆ ಬಾಗಿಲಿಗೆ ಮುಟ್ಟಿಸುತ್ತಾರೆ. ಪತ್ರಿಕೋದ್ಯಮದಲ್ಲಿ ವಿತರಕರ ಪಾತ್ರ ಬಹಳಷ್ಟು ಮಹತ್ವವನ್ನು ಪಡೆದಿದೆ. ಆ ಕಾರ್ಯವನ್ನು ಪ್ರತಿನಿತ್ಯ ತಮ್ಮ ಒತ್ತಡದ ಜೀವನದ ಮಧ್ಯ ಪತ್ರಿಕಾ ವಿತರಕರು ಚಾಚೂ ತಪ್ಪದೇ ಶ್ರದ್ಧೆಯಿಂದ ಪತ್ರಿಕೆಯನ್ನು ವಿತರಣೆ ಮಾಡುತ್ತಾರೆ ಎಂದರು.ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಕನ್ನಡ ಉಳಿಸುವ ನಿಟ್ಟಿನಲ್ಲಿ ಕನ್ನಡ ಪತ್ರಿಕೆಗಳ ಕಾರ್ಯವೂ ಶ್ಲಾಘನೀಯವಾಗಿದೆ. ಕೋರೋನಾ ವಾರಿಯರ್ಸ್‌ಗಳಾಗಿ ವಿತರಕರ ಶ್ರಮ ದೊಡ್ಡದಾಗಿತ್ತು. ಮಳೆ, ಚಳಿ ಎನ್ನದೇ ಪತ್ರಿಕೆ ಹಂಚುವ ಕಾರ್ಯ ನಿಜಕ್ಕೂ ಅವರ ನಿಸ್ವಾರ್ಥ ಸೇವೆಯನ್ನು ತೋರಿಸುತ್ತದೆ ಎಂದ ಅವರು, ಇದೇ ಸೆ. ೮ರಂದು ನಡೆಯುವ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸಿದರು.ಇದೇ ಸಂದರ್ಭದಲ್ಲಿ ತಾಲೂಕು ವಿತರಕರ ಸಂಘದ ವತಿಯಿಂದ ತಹಸೀಲ್ದಾರ್ ಸಂತೋಷ ಹಿರೇಮಠ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಸೋಮಣ್ಣ ಬೇವಿನಮರದ, ಪುರಸಭೆ ಸದಸ್ಯ ರಮೇಶ ವನಹಳ್ಳಿ, ಯುವ ಮುಖಂಡ ಆನಂದ ಸುಬೇಧಾರ ಅವರುಗಳನ್ನು ಸನ್ಮಾನಿಸಲಾಯಿತು. ಮುಖಂಡರಾದ ರಮೇಶ ಬ್ರಹ್ಮಾವರ, ಬಸವರಾಜ ಹಾವೇರಿ, ವಿ ಎಸ್ ಪಾಟೀಲ, ಪತ್ರಕರ್ತರಾದ ಪರಮೇಶ ಲಮಾಣಿ, ಪಿ ಎಂ ಸತ್ಯಪ್ಪನವರ, ಬಸವರಾಜ ಹಡಪದ, ಎಂ ವಿ ಗಾಡದ, ಸದಾಶಿವಸ್ವಾಮಿ ಹಿರೇಮಠ, ದೇವರಾಜ ಸುಣಗಾರ, ಚನ್ನವೀರ ನೀರಲಗಿ, ಪತ್ರಿಕಾ ವಿತರಕರ ಸಂಘದ ತಾಲೂಕಾದ್ಯಕ್ಷ ವಿರುಪಾಕ್ಷಪ್ಪ ನೀರಲಗಿ, ಉಪಾಧ್ಯಕ್ಷ ಸಿದ್ದರಾಮಗೌಡ ಮೆಳ್ಳಾಗಟ್ಟಿ, ಕಾರ್ಯದರ್ಶಿ ಸುರೇಶ ಯಲಿಗಾರ, ವಿತರಕರಾದ ಮುತ್ತಪ್ಪ ಬಂಡಿವಡ್ಡರ, ಸಂಕಲ್ಪ ಬಡ್ಡಿ, ವಿಶ್ವನಾಥ ಹೊಣ್ಣಣ್ಣನವರ, ಪ್ರಕಾಶ ಹರಿಗೊಂಡ, ಸುನೀಲ ಹರಿಗೊಂಡ, ಅರುಣ ಸಾಳುಂಕೆ, ಹರೀಶ ಗಣ್ಣಪ್ಪನವರ ಸದಸ್ಯರು ಇದ್ದರು.