ಸಾರಾಂಶ
ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಕಾಲಕಾಲಕ್ಕೆ ಸ್ಥಳೀಯವಾಗಿ ಲಭ್ಯವಿರುವ ಸೊಪ್ಪು, ತರಕಾರಿಗಳನ್ನು ಕಡ್ಡಾಯವಾಗಿ ಉಪಯೋಗಿಸಲೇಬೇಕು.
ಕುಮಟಾ: ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಕಾಲಕಾಲಕ್ಕೆ ಸ್ಥಳೀಯವಾಗಿ ಲಭ್ಯವಿರುವ ಸೊಪ್ಪು, ತರಕಾರಿಗಳನ್ನು ಕಡ್ಡಾಯವಾಗಿ ಉಪಯೋಗಿಸಲೇಬೇಕು. ದಿನನಿತ್ಯದ ಆಹಾರ ಪೌಷ್ಟಿಕಾಂಶಯುಕ್ತವಾಗಿರುವಂತೆ ನಿಗಾ ವಹಿಸಬೇಕು ಎಂದು ಪುರಸಭೆ ಅಧ್ಯಕ್ಷೆ ಸುಮತಿ ಭಟ್ ಹೇಳಿದರು.
ಪಟ್ಟಣದ ಚಿತ್ರಗಿ- ಕಲ್ಗುಡ್ಡ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಪಂ, ತಾಲೂಕಾಡಳಿತ, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಇಲಾಖೆ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆಯಡಿ ಯೋಜನಾ ಮಟ್ಟದ ಪೋಷಣ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಂಪನ್ಮೂಲ ವ್ಯಕ್ತಿಯಾಗಿ ಡಾ. ಪವಿತ್ರಾ, ಪೌಷ್ಟಿಕ ಆಹಾರಗಳು ಮತ್ತು ಅವುಗಳ ಮಹತ್ವದ ಕುರಿತು ಸಮಗ್ರವಾಗಿ ವಿವರಿಸಿದರು. ಅಂಗನವಾಡಿ ಮೇಲ್ವಿಚಾರಕಿ ಭಾರತಿ ಪಟಗಾರ ಪೋಷಣ ಅಭಿಯಾನದ ಧ್ಯೇಯೋದ್ದೇಶ ವಿವರಿಸಿದರು.
ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಉಮಾ ಪಟಗಾರ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆಯ ಪಿಎಚ್‌ಸಿಒ ಶೋಭಾ ಗುನಗಾ ಉಪಸ್ಥಿತರಿದ್ದರು. ಗರ್ಭಿಣಿರಿಗೆ ಸೀಮಂತ, ಚಿಣ್ಣರಿಗೆ ಅನ್ನಪ್ರಾಶನ ಮಾಡಲಾಯಿತು. ಸ್ಥಳೀಯವಾಗಿ ಸಿಗುವ ಸೊಪ್ಪು ತರಕಾರಿ, ಕಾಳು, ಹಣ್ಣು ಉಪಯೋಗಿಸಿ ವೈವಿಧ್ಯಮಯ ತಿಂಡಿ-ತಿನಿಸು ತಯಾರಿಸಿ ಪ್ರಾತ್ಯಕ್ಷಿಕೆಯಡಿ ಅವುಗಳಲ್ಲಿರುವ ಪೌಷ್ಟಿಕಾಂಶಗಳ ಮಾಹಿತಿ ವಿನಿಮಯದೊಂದಿಗೆ ಪ್ರದರ್ಶಿಸಲಾಯಿತು.ಮಿಲನಾ ಉಪಾಧ್ಯಾಯ ಪ್ರಾರ್ಥಿಸಿದರು. ಚಿತ್ರಗಿ ಅಂಗನವಾಡಿ ಕಾರ್ಯಕರ್ತೆ ಶಿಲ್ಪಾ ಎಸ್. ನಾಯ್ಕ ಸ್ವಾಗತಿಸಿದರು. ಕಲ್ಗುಡ್ಡ ಅಂಗನವಾಡಿ ಕಾರ್ಯಕರ್ತೆ ರಜನಿ ಪಿ. ನಾಯ್ಕ ನಿರೂಪಿಸಿ ವಂದಿಸಿದರು. ಯೋಜನಾ ವ್ಯಾಪ್ತಿಯ ಗರ್ಭಿಣಿಯರು, ಬಾಣಂತಿಯರು, ಪಾಲಕರು, ಕಿಶೋರಿಯರು, ಸ್ಥಳೀಯರು ಇದ್ದರು.