ಹಳ್ಳಿಗಳ ಜನರು, ಮಹಿಳೆಯರು ಮನೆ ಮನೆಯಲ್ಲೂ ರೊಟ್ಟಿಗಳನ್ನು ತಟ್ಟಿ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಅರ್ಪಿಸುವುದು ಮೊದಲಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.
ಕೊಪ್ಪಳ: ಹಳ್ಳಿಹಳ್ಳಿಗಳಲ್ಲಿ ರೊಟ್ಟಿ ಸಪ್ಪಳವೇ ಕೇಳುತ್ತಿದೆ. ಗವಿಸಿದ್ಧೇಶ್ವರ ಜಾತ್ರೆಯ ಹಿನ್ನೆಲೆಯಲ್ಲಿ ಮಹಾದಾಸೋಹಕ್ಕೆ ಲಕ್ಷ ಲಕ್ಷ ರೊಟ್ಟಿ ನೀಡಲು ಗ್ರಾಮಗಳಲ್ಲಿ ಸಾಮೂಹಿಕವಾಗಿ ರೊಟ್ಟಿ ಮಾಡಲಾಗುತ್ತಿದೆ. ಅಷ್ಟೇ ಅಲ್ಲ ಮಾಡಿದ ರೊಟ್ಟಿ ಮತ್ತು ದವಸ ಧಾನ್ಯ ಟ್ರ್ಯಾಕ್ಟರ್ ಮತ್ತು ಬಂಡಿಗಳಲ್ಲಿ ಮೆರವಣಿಗೆ ಮಾಡಿಕೊಂಡು ಬರುತ್ತಿದ್ದಾರೆ.
ಹೀಗಾಗಿ, ಗವಿಸಿದ್ಧೇಶ್ವರ ಜಾತ್ರೆ ಆರಂಭಕ್ಕೂ ಮುನ್ನವೇ ಗ್ರಾಮಗಳಲ್ಲಿ ಗವಿಸಿದ್ಧೇಶ್ವರ ಜಾತ್ರೆ ಪ್ರಾರಂಭವಾಗಿದೆ.ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಭಕ್ತರು ದವಸ-ಧಾನ್ಯ ಅರ್ಪಿಸುತ್ತಿದ್ದು, ತಾಲೂಕಿನ ಹಟ್ಟಿ ಗ್ರಾಮದಾದ್ಯಂತ ಈಗ ಮಹಿಳೆಯರು ರೊಟ್ಟಿ ತಟ್ಟುವ ಸಪ್ಪಳ ಕೇಳಿಬರುತ್ತಿದೆ.
ಜಿಲ್ಲೆಯಾದ್ಯಂತ ಪ್ರತಿ ವರ್ಷವೂ ಗವಿಸಿದ್ದೇಶ್ವರ ಜಾತ್ರಾಮಹೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗಾಗಿ ಸುತ್ತಲಿನ ನೂರಾರು ಹಳ್ಳಿಗಳ ಜನರು, ಮಹಿಳೆಯರು ಮನೆ ಮನೆಯಲ್ಲೂ ರೊಟ್ಟಿಗಳನ್ನು ತಟ್ಟಿ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಅರ್ಪಿಸುವುದು ಮೊದಲಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.ಅದರಲ್ಲೂ ತಾಲೂಕಿನ ಹಟ್ಟಿ ಗ್ರಾಮದಲ್ಲಿ ಇಡೀ ಊರಿನ ಜನರೇ ಬಯಲು ಪ್ರದೇಶದಲ್ಲಿ ರೊಟ್ಟಿ ತಟ್ಟಿ ಶ್ರೀಮಠಕ್ಕೆ ಅರ್ಪಣೆ ಮಾಡುವ ಸಂಪ್ರದಾಯವಿದೆ. ಅದರಂತೆ ಶುಕ್ರವಾರ ರಾತ್ರಿ ಹಟ್ಟಿ ಗ್ರಾಮಸ್ಥರು ಮನೆ ಮನೆಯಿಂದ ಜೋಳ ಹಾಗೂ ದೇಣಿಗೆ ಸಂಗ್ರಹಿಸಿ ೨.೫೦ ಕ್ವಿಂಟಲ್‌ನಷ್ಟು ಜೋಳದ ಹಿಟ್ಟು ಸಿದ್ಧಪಡಿಸಿ ಮನೆಯ ಮಹಿಳೆಯರು ದೇವಸ್ಥಾನದ ಬಯಲು ಪ್ರದೇಶದಲ್ಲಿ ಸಾಮೂಹಿಕವಾಗಿ ರೊಟ್ಟಿ ತಟ್ಟಿದರು. ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಸಂಜೆ ಗ್ರಾಮಕ್ಕೆ ಭೇಟಿ ನೀಡಿ ರೊಟ್ಟಿ ತಟ್ಟುವ ಮಹಿಳೆಯರಿಗೆ ಹಿಟ್ಟು ನೀಡಿದರು. ಮಹಿಳೆಯರ ಕಾರ್ಯವನ್ನು ಶ್ಲಾಘಿಸಿದರು.
ಸಿಸಿ ಕ್ಯಾಮೆರಾ ಕಣ್ಗಾವಲು:ವಿಚಾರಣೆ ಕೇಂದ್ರದ ಹತ್ತಿರ ಕೆರೆ ದಡ, ದಾಸೋಹ ಭವನ ಹೊರ ವೀಕ್ಷಣೆ, ದಾಸೋಹ ಹೈಮಾಸ್ಟ್ ಲೈಟ್, ಶಿಲಾ ಮಂಟಪ, ಗದ್ದುಗೆ ಹೊರ ಭಾಗ, ಗುಡ್ಡ, ಗುಡ್ಡದಿಂದ ಶ್ರೀಗಳ ಕೋಣೆಗೆ ಹೋಗುವ ದಾರಿ, ಅನ್ನಪೂರ್ಣೇಶ್ವರಿ ಗುಡಿ, ಕೈಲಾಸ ಮಂಟಪ, ಸಂಗೀತ ಪಾಠಶಾಲಾ ಹತ್ತುವ ಮೆಟ್ಟಿಲುಗಳ ವೀಕ್ಷಣೆಗೆ ಒಟ್ಟು ೧೬ ಸಿಸಿ ಕ್ಯಾಮೆರಾ ಕಣ್ಗಾವಲಾಗಿರುತ್ತವೆ.
ಮಹಾದಾಸೋಹ ಭವನ: ವಿದ್ಯುತ್ ಕೊಠಡಿ, ಮಿರ್ಚಿ ಹಾಕುವ ಕೊಠಡಿ, ಕಿರಾಣಿ ವಸ್ತುಗಳ ಕೊಠಡಿ, ರೊಟ್ಟಿ ಕೊಠಡಿ, ಸಿಹಿ ಪದಾರ್ಥ ಶೇಖರಣಾ ಕೊಠಡಿ, ಅನ್ನ, ಪಲ್ಯೆ, ಸಾಂಬಾರ ಶೇಖರಿಸುವ ಸ್ಥಳ, ಚಟ್ನಿ ರುಬ್ಬುವ ಸ್ಥಳ, ಅಡುಗೆ ಮಾಡುವ ಸ್ಥಳದಿಂದ ಹೊರಹೋಗುವ, ಗೇಟ್ ಹತ್ತಿರ ಕಾಯಿಪಲ್ಲೆ ಸಂಗ್ರಹಿಸುವ ಮತ್ತು ಹೆಚ್ಚುವ ಸ್ಥಳ, ಪ್ರಸಾದ ವಿತರಣೆ ಸ್ಥಳದಲ್ಲಿ ಪುರುಷರು ಮತ್ತು ಮಹಿಳೆಯರು ಪ್ರಸಾದ ಸ್ವೀಕರಿಸುವ ಸ್ಥಳ, ದಾಸೋಹ ಭವನದ ಹಿಂದೆ ಒಳಗೆ ಮತ್ತು ಹೊರಗೆ ಓಡಾಡುವ ದಾರಿಯ ಹತ್ತಿರ ಒಟ್ಟು ೨೪ ಕ್ಯಾಮೆರಾ ಕಣ್ಗಾವಲಾಗಿರುತ್ತವೆ.ಜಾತ್ರಾ ಆವರಣ: ಜಾತ್ರಾ ಆವರಣದಲ್ಲಿ ವಿವಿಧ ಸ್ಥಳಗಳಲ್ಲಿ ೪೪ ಕ್ಯಾಮೆರಾ ಅಳವಡಿಸಲಾಗಿದೆ. ಜನದಟ್ಟಣೆ ಹೆಚ್ಚು ಇರುವ ಸ್ಥಳಗಳಲ್ಲಿ ಮಹಿಳೆಯರ, ಮಕ್ಕಳ, ವಯೋವೃದ್ಧರ ಹಿತದೃಷ್ಟಿಯಿಂದ ಮತ್ತು ಹಣ, ಬಂಗಾರ, ವಸ್ತು, ಒಡವೆಗಳು, ಆಭರಣ, ಮೊಬೈಲ್ ಮುಂತಾದವುಗಳ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಜಾತ್ರಾ ಮಹೋತ್ಸವವನ್ನು ಶಿಸ್ತುಬದ್ಧವಾಗಿ ಜರುಗಿಸಲು ಮುಂಜಾಗ್ರತೆಗೆ ಇಡೀ ಜಾತ್ರಾ ಆವರಣ, ಶ್ರೀಮಠದ ಪ್ರಾಂಗಣ ಮತ್ತು ದಾಸೋಹ ಭವನದ ತುಂಬೆಲ್ಲ ಒಟ್ಟು ೮೪ಕ್ಕಿಂತ ಹೆಚ್ಚಿನ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.