ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಯುವಜನ ಸಬಲೀಕರಣ ಕ್ರೀಡಾ ಇಲಾಖೆ ನೆಹರು ಯುವ ಕೇಂದ್ರ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ರಾಜೀವ್ ಆಯುರ್ವೇದ ಮಹಾವಿದ್ಯಾಲಯ, ಪತಂಜಲಿ ಯೋಗ ಸಮಿತಿ ಪರಿವಾರ ಮತ್ತು ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜೂನ್ ೨೧ರಂದು ನಡೆಯುವ ವಿಶ್ವ ಯೋಗದಿನದ ಅಂಗವಾಗಿ ಬುಧವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಯೋಗ ಜಾಥಾವನ್ನು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿದರು.ನಂತರ ಉದ್ದೇಶಿಸಿ ಮಾತನಾಡಿದ ಶಾಸಕರು, ಜಿಲ್ಲಾಡಳಿತದೊಂದಿಗೆ ಎಲ್ಲಾ ಯೋಗ ಸಂಸ್ಥೆಯವರು ಸೇರಿ ಹಾಗೂ ಜೂನ್ ೨೧ ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಿದ್ದು, ಸಾರ್ವಜನಿಕರಿಗೆ ಯೋಗದ ಬಗ್ಗೆ ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಕೆಲ ಸಮಯಗಳನ್ನು ಜನರು ಯೋಗಕ್ಕಾಗಿ ಮೀಸಲಿಟ್ಟು ನಂತರದಲ್ಲಿ ನಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಸಂತೋಷಮಯ ಜೀವನ ನಿಮ್ಮದಾಗುತ್ತದೆ. ಜೊತೆಗೆ ಮನಸ್ಸು ಮತ್ತು ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಮಾತನಾಡಿ, ಯೋಗ ಎಂಬುದನ್ನು ಅಳವಡಿಸಿಕೊಂಡರೇ ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಬಹುದು ಎಂದು ಹೇಳಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಪೂರ್ಣಿಮಾ ಮಾತನಾಡಿ, ಜೂನ್ ೨೧ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ. ಭಾರತ ದೇಶದ ಯೋಗವನ್ನು ಈಗ ವಿದೇಶಿಯರೂ ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ಭಾರತೀಯರಾದ ನಾವೇ ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿಲ್ಲ ಎಂಬುದು ವಿಷಾಧನೀಯ ಸಂಗತಿ. ಎಲ್ಲರೂ ಕೂಡ ಯೋಗವನ್ನು ದಿನನಿತ್ಯದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಹೊರಟ ಯೋಗ ಜಾಗೃತಿ ಜಾಥವು ಎನ್.ಆರ್. ವೃತ್ತ, ಸಾಲಗಾಮೆ ರಸ್ತೆ ಮೂಲಕ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ಕೊನೆಯಾಯಿತು.ಯೋಗಾ ಜಾಥ ಕಾರ್ಯಕ್ರಮದಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಶ್ರೀ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯ ಪ್ರಸನ್ನ ಎನ್. ರಾವ್, ಡಾ. ಗುರುರಾಜು, ಶಿಕ್ಷಣಾಧಿಕಾರಿ ಮಹದೇವ್, ದೈಹಿಕ ಶಿಕ್ಷಣ ಪರಿವೀಕ್ಷಕ ವೇದಣ್ಣ, ಪತಂಜಲಿ ಯೋಗಾ ಪರಿವಾರದ ರಾಧ ತಿವಾರಿ, ಶೇಷಪ್ಪ, ಗಿರೀಶ್, ಪ್ರಜಾಪತಿ, ಭಾರತ್ ಸೇವಾದಳದ ಸಂಘಟಕರಾದ ವಿ.ಎಸ್. ರಾಣಿ, ಎಚ್. ಮಹೇಶ್, ಚೇತನ್, ಹಿರಿಯ ಕಲಾವಿದ ಮತ್ತು ಪ್ರಶಸ್ತಿ ವಿಜೇತ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.