ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಉತ್ತಮ ಆರೋಗ್ಯ ಹಾಗೂ ಮಾನಸಿಕ ಸದೃಢತೆ ಪ್ರತಿ ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗ ಶ್ರೀರಂಗಪಟ್ಟಣ ದಸರಾ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೋಗಾಭ್ಯಾಸವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ. ಯೋಗ ಅಭ್ಯಾಸದಲ್ಲಿ ಭಾರತ ವಿಶ್ವ ಗುರುವಾಗಿದೆ. ಯೋಗಭ್ಯಾಸದಿಂದ ಮನಸ್ಸಿನ ಚಂಚಲತೆ ಹೋಗಲಾಡಿಸಬಹುದು. ಪ್ರತಿಯೊಬ್ಬರು ಯೋಗಾಭ್ಯಾಸ ಮತ್ತು ಧ್ಯಾನ ಮಾಡುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡೋಣ ಎಂದರು.ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಅಷ್ಟಾಂಗ ಯೋಗವನ್ನು ಸಿದ್ಧಿ ಪಡಿಸಿಕೊಳ್ಳುವುದು ಸುಲಭದ ಮಾತಲ್ಲ. ಅಷ್ಟಾಂಗ ಯೋಗವನ್ನು ಸಿದ್ಧಿ ಪಡಿಸಿಕೊಂಡ ಎಷ್ಟು ಋಷಿ ಮುನಿಗಳು ಇಂದು ಜೀವಂತವಾಗಿದ್ದಾರೆ. ಯೋಗಕ್ಕೆ ಸರಿಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ ಎಂದರು.
ಪತಾಂಜಲಿ ಮುನಿಗಳು ಯೋಗದ ಮಹತ್ವವನ್ನು ಜಗತ್ತಿಗೇ ಸಾರಿದರು. ಪ್ರಸುತ್ತ ಆಯುರ್ವೇದ ವಿಸಾ ಕೇಂದ್ರಗಳು ಸ್ಥಾಪನೆಯಾಗಿದೆ. ಯೋಗ ಜಗತ್ತಿನಾದ್ಯಂತ 50 ಮಿಲಿಯನ್‌ಗೂ ಅಧಿಕ ವ್ಯಾಪಾರ ವಹಿವಾಟು ಹೊಂದಿದೆ. ಪ್ರವಾಸೋದ್ಯಮದಲ್ಲೂ ಸಹ ಯೋಗವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸವಾಗುತ್ತಿದೆ ಎಂದರು.ಆಯುಷ್ ಇಲಾಖೆ ಉತ್ತಮ ಕಾರ್ಯಕ್ರಮ ರೂಪಿಸಿಕೊಂಡು ಬರುತ್ತಿದೆ. ಯೋಗವನ್ನು ಕಲಿಯಲಿಕ್ಕಾಗಿ ವಿದೇಶಿಗರು ಭಾರತಕ್ಕೆ ಬರುತ್ತಿರುವುದನ್ನು ಇಂದು ನಾವು ಕಾಣಬಹುದು ಎಂದರು.
ಡೀಸಿ, ಜಿಪಂ ಸಿಇಒ, ಶ್ರೀರಂಗಪಟ್ಟಣ ತಹಸೀಲ್ದಾರ್ ಚೇತನ ಯಾದವ್ ಅವರು ಯೋಗಾಪಟುಗಳೊಂದಿಗೆ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು. ಯೋಗ ಪಟುಗಳು ಹಾಗೂ ಆಯುಷ್ ಇಲಾಖೆಯಿಂದ ನೃತ್ಯ ಪ್ರದರ್ಶನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶ್ರೀನಿವಾಸ್, ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ. ಪುಷ್ಪಲತಾ ಸೇರಿದಂತೆ ಇತರರು ಇದ್ದರು.
ದಸರಾ ಅಂಗವಾಗಿ ರಿವರ್ ರ್‍ಯಾಪ್ಟಿಂಗ್ ಸ್ಪರ್ಧೆಶ್ರೀರಂಗಪಟ್ಟಣ:
ದಸರಾ ಅಂಗವಾಗಿ ಕಾವೇರಿ ನದಿಯಲ್ಲಿ ರಿವರ್ ರ್‍ಯಾಪ್ಟಿಂಗ್ ಸ್ಪರ್ಧೆ ಗಮನ ಸೆಳೆಯಿತು.ಪಟ್ಟಣದ ಮಯೂರ ರಿವರ್ ವ್ಯೂವ್ ಬಳಿಯ ಕಾವೇರಿ ನದಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ರಾಜ್ಯದ ಮಟ್ಟದ ಕಯೋಕ್ ಕ್ರಾಸ್ ಆಯೋಜಿಸಲಾಗಿತ್ತು.
ಸ್ಪರ್ಧೆಯನ್ನು ವಿವಿಧ ವಯೋಮಿತಿಗಳ ಆಧಾರದ ಮೇಲೆ ಆಯೋಜಿಸಲಾಗಿತ್ತು. ರಾಜ್ಯ ವಿವಿಧ ಮೂಲೆಗಳಿಂದ ಕಯೋಕ್ ಕ್ರಾಸ್ ಪಂದ್ಯಾವಳಿಗೆ ಆಗಮಿಸಿದ್ದ ಬಾಲಕ, ಬಾಲಕಿಯರು ಹಾಗೂ ಯುವಕ, ಯುವತಿಯರು ಉತ್ಸಾಹಕತೆಯಿಂದ ಭಾಗವಹಿಸಿ ಮೆರಗು ತಂದರು.