ಬಡವರ ಕಾಮಧೇನಾಗಿರುವ ಹೈನುಗಾರಿಕೆಯನ್ನು ಹೆಚ್ಚು ಜನ ಅವಲಂಭಿಸಿದ್ದು, ಇದರಿಂದ ಲಕ್ಷಾಂತರ ಜನರು ಜೀವನ ಸಾಗಿಸುತ್ತಿದ್ದಾರೆ. 1.79 ಲಕ್ಷ ರೈತರು ಪ್ರತಿನಿತ್ಯ 19.50 ಲಕ್ಷ ಲೀಟರ್ ಹಾಲು ಪೂರೈಸುತ್ತಿದ್ದಾರೆ. ಈ ಉದ್ಯಮದಲ್ಲಿ ಇರುವ ರೈತರ ಶ್ರೇಯೋಭಿವೃದ್ಧಿಗಾಗಿ ಒಕ್ಕೂಟವು ರೈತರ ಕಲ್ಯಾಣ ಟ್ರಸ್ಟ್ ಸ್ಥಾಪಿಸಿದ್ದು, ಆ ಮೂಲಕ ಹೈನುಗಾರರ ಯೋಗ ಕ್ಷೇಮಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾರೋಹಳ್ಳಿ
ಪ್ರಕೃತಿ ವಿಕೋಪದಿಂದ ಕಂಗೆಟ್ಟಿರುವ ರೈತರು ಕೃಷಿಗಿಂತ ಹೈನುಗಾರಿಕೆಯನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತಿದ್ದಾರೆ. ರೈತಾಪಿ ವರ್ಗಕ್ಕೆ ಸ್ವಾವಲಂಬಿ ಬದುಕು ನಡೆಸಲು ಹೈನುಗಾರಿಕೆ ಸಹಕಾರಿಯಾಗಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.ಹಾರೋಹಳ್ಳಿ ಗ್ರಾಮೀಣ ವಿದ್ಯಾಸಂಸ್ಥೆ ಆವರಣದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ ಹಾಗೂ ಬಮೂಲ್ ಕಲ್ಯಾಣ ಟ್ರಸ್ಟ್ ಸಹಕಾರದಲ್ಲಿ ಹಾಲು ಉತ್ಪಾದಕರ ಮಕ್ಕಳ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಹಾಲು ಉತ್ಪಾದಕರಿಗೆ ಉಚಿತ ಕ್ಯಾನ್ ವಿತರಣೆ ಹಾಗೂ ಅತ್ಯುತ್ತಮ ಸಂಘ ಹಾಗೂ ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಆರಂಭಿಸಿದ ಕ್ಷೀರ ಕ್ರಾಂತಿಯ ಪರವಾಗಿ ಸಣ್ಣ ರೈತರು, ಕೃಷಿ ಕಾರ್ಮಿಕರಿಗೆ ಹೈನುಗಾರಿಕೆಯಲ್ಲಿ ಅನುಕೂಲವಾಗಿದೆ. ಸರ್ಕಾರ ಪಶುಭಾಗ್ಯ ಯೋಜನೆಯಡಿ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಿದೆ ಎಂದರು.ಬಡವರ ಕಾಮಧೇನಾಗಿರುವ ಹೈನುಗಾರಿಕೆಯನ್ನು ಹೆಚ್ಚು ಜನ ಅವಲಂಭಿಸಿದ್ದು, ಇದರಿಂದ ಲಕ್ಷಾಂತರ ಜನರು ಜೀವನ ಸಾಗಿಸುತ್ತಿದ್ದಾರೆ. 1.79 ಲಕ್ಷ ರೈತರು ಪ್ರತಿನಿತ್ಯ 19.50 ಲಕ್ಷ ಲೀಟರ್ ಹಾಲು ಪೂರೈಸುತ್ತಿದ್ದಾರೆ. ಈ ಉದ್ಯಮದಲ್ಲಿ ಇರುವ ರೈತರ ಶ್ರೇಯೋಭಿವೃದ್ಧಿಗಾಗಿ ಒಕ್ಕೂಟವು ರೈತರ ಕಲ್ಯಾಣ ಟ್ರಸ್ಟ್ ಸ್ಥಾಪಿಸಿದ್ದು, ಆ ಮೂಲಕ ಹೈನುಗಾರರ ಯೋಗ ಕ್ಷೇಮಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಪ್ರತಿವರ್ಷ ಟ್ರಸ್ಟ್‌ನಿಂದ ₹20 ಕೋಟಿ ಹಣ ಖರ್ಚು ಮಾಡಲಾಗುತ್ತಿದೆ. ಉತ್ಪಾದಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ, ಪ್ರತಿಭಾ ಪುರಸ್ಕಾರ, ಎಸ್.ಎಸ್.ಎಲ್.ಸಿಯಿಂದ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿ ವೇತನ, ಪಿ.ಪಿ.ಎಸ್.ಸಿ ನಡೆಸುವ ಹಾಗೂ ಐಎಎಸ್ ಪರೀಕ್ಷೆಗೆ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ₹75 ಸಾವಿರ ಆರ್ಥಿಕ ನೆರವು ಕಲ್ಪಿಸಲಾಗುತ್ತಿದೆ. ಈ ರೀತಿ ಹಲವು ಯೋಜನೆಗಳು ಒಕ್ಕೂಟದಲ್ಲಿ ಲಭ್ಯವಿವೆ, ಈ ಸೌಲಭ್ಯಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡಬೇಕು. ಒಕ್ಕೂಟವು ನಿಮ್ಮ ಜೊತೆಯಲ್ಲಿದೆ ಎಂದು ಹೇಳಿದರು.ಪ್ರಸಕ್ತ ಸಾಲಿನಲ್ಲಿ ರಾಸುಗಳಿಗೆ ವಿಮೆ ಯೋಜನೆಗಾಗಿ ₹50 ಕೋಟಿ ವೆಚ್ಚವಾಗಲಿದೆ. ಈಗಾಗಲೇ 2.77 ಲಕ್ಷ ಹಸುಗಳಿಗೆ ವಿಮೆ ನೀಡಲಾಗುತ್ತಿದೆ. ಇದರಲ್ಲಿ ಶೇ.50 ರಷ್ಟು ಹಣವನ್ನು ಬಮೂಲ್ ಸಂಸ್ಥೆಯೇ ಭರಿಸುವ ಮೂಲಕ ಹಲವಾರು ಬದಲಾವಣೆಗಳನ್ನು ತರಲಾಗಿದೆ ಎಂದು ಸುರೇಶ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಮಾಜಿ ಸಂಸದ ಡಿ.ಕೆ.ಸುರೇಶ್ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾದ ಬಳಿಕ ಒಕ್ಕೂಟವು ಸುಮಾರು ₹45 ಕೋಟಿ ನಷ್ಟದಲ್ಲಿತ್ತು. ಹಲವು ಸುಧಾರಣಾ ಕ್ರಮಗಳಿಂದ ₹20 ಕೋಟಿಗೂ ಹೆಚ್ಚು ಲಾಭದಲ್ಲಿದೆ. ಲಕ್ಷಾಂತರ ಮಂದಿ ಅವಲಂಬಿಸಿರುವ ಕ್ಷೀರ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತರುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ರವರ ಕೈಬಲ ಪಡಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.ಬಮೂಲ್ ನಿರ್ದೇಶಕ ಹರೀಶ್‌ಕುಮಾರ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಮಾಜಿ ಶಾಸಕ ಕೆ.ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಸಿ.ಬಿ ಅಶೋಕ್, ಮುಖಂಡರಾದ ಡಿ.ಎಂ.ವಿಶ್ವನಾಥ್, ಸರ್ದಾರ್ ಹುಸೇನ್, ಕೀರಣಗೆರೆ ಜಗದೀಶ್, ಮೋಹನ್ ಹೊಳ್ಳ, ಬೊಮುಲ್ ನಿರ್ದೇಶಕರಾದ ಪಿ.ನಾಗರಾಜು, ಲಿಂಗೇಶ್‌ಕುಮಾರ್, ಸತೀಶ್, ಆನಂದ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಸಂಸದ ಸೇರಿದಂತೆ ಸಭಿಕರನ್ನು ಬೆರಗಾಗಿಸಿದ ವಿದ್ಯಾರ್ಥಿನಿ:ಬಮೂಲ್ ಕಲ್ಯಾಣ ಟ್ರಸ್ಟ್ ಪ್ರತಿಭಾ ಪುರಸ್ಕಾರದಲ್ಲಿ ರೈತರು ಅವಲಂಬಿಸಿರುವ ಹೈನುಗಾರಿಕೆ ಜೊತೆಗೆ ರೈತಾಪಿ ವರ್ಗ ಸ್ವಾವಲಂಬಿ ಬದುಕು ನಡೆಸಲು ಸಹಕಾರಿಯಾಗುವ ಭಾಷಣ ಮಾಡಿದ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರನ್ನು ಸಮಾರಂಭದ ಮಧ್ಯೆ ಎಂಜಿನಿಯರಿಂಗ್ ವಿದ್ಯಾರ್ಥಿನಿ ಬಿ.ಎಸ್.ಶೃತಿ ಬಿಡದಿ ಟೌನ್ ಶಿಪ್ ವಿಚಾರವಾಗಿ ಪ್ರಶ್ನೆ ಕೇಳುವ ಮೂಲಕ ಅತಿಥಿಗಳು ಮತ್ತು ಸಭಿಕರು ಬೆರಗಾಗುವಂತೆ ಮಾಡಿದಳು.
ರೈತ ಸ್ವಾವಲಂಬಿ ಬದುಕನ್ನು ನಡೆಸಬೇಕಾದರೆ ಕಾಂಕ್ರೀಟ್ ನಾಡಿನ ನಿರ್ಮಾಣದಿಂದ ಸಾಧ್ಯವಿಲ್ಲ. ರೈತ ಪ್ರಕೃತಿಯ ನಡುವೆ ಬದುಕುತ್ತಾನೆ. ಪ್ರಕೃತಿ ರೈತರ ಬದುಕನ್ನು ಪೋಷಿಸುತ್ತದೆ. ಎಲ್ಲರೂ ಪ್ರಕೃತಿಯನ್ನು ರಕ್ಷಿಸಬೇಕು. ಭೂಮಿಯಿಂದ ಬೆಳೆ, ನಾಡಿನ ಬದುಕು ಎಂಬ ಮಾತುಗಳನ್ನಾಡಿದ ವಿದ್ಯಾರ್ಥಿನಿ ಶೃತಿ, ಪರೋಕ್ಷವಾಗಿ ಬಿಡದಿ ಟೌನ್ ಶಿಪ್ ಯೋಜನೆಗೆ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳುತ್ತಿರುವ ವಿರುದ್ಧ ಧ್ವನಿ ಎತ್ತಿ ಅಚ್ಚರಿ ಮೂಡಿಸಿದಳು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಹಣ ನೀಡುವುದರಿಂದ ರೈತರ ಬದುಕು ಪ್ರಗತಿಯಾಗುವುದಿಲ್ಲ. ತಾವು ಸ್ವಾವಲಂಭಿಯಾಗಿ ಬದುಕಿ ಎನ್ನುತ್ತೀರಿ, ರೈತರ ಬದುಕು ಕಿತ್ತುಕೊಳ್ಳುವ ಸರ್ಕಾರ ಯಾವ ರೀತಿ ನೆಮ್ಮದಿ ನೀಡುತ್ತದೆ. ನೀವು ನೀಡುವ ಹಣ ಮಾಲೀಕರಿಗೆ ಸಂದಾಯವಾದರೂ ಮುಂದಿನ ತಲೆಮಾರಿನ ಜೀವನ ಹೇಗೆ? ಕಂಪನಿಗಳು ನೀಡುವ ಉದ್ಯೋಗ ಒಂದು ತಲೆಮಾರಿಗೆ ಸೀಮಿತವಾಗುತ್ತದೆ. ಮುಂದಿನ ತಲೆಮಾರು ಭಿಕ್ಷಾಟನೆ ಮಾಡಿ ಬದುಕಬೇಕಾಗುತ್ತದೆ. ಇದು ಸರ್ಕಾರದ ಕೊಡುಗೆಯೇ ಎಂದು ಭಾವನಾತ್ಮಕವಾಗಿ ಪ್ರಶ್ನಿಸಿ ಉತ್ತರಿಸುವಂತೆ ಶೃತಿ ಹೇಳಿದಳು.ಆಗ ಡಿ.ಕೆ.ಸುರೇಶ್ ಮಾತನಾಡಿ, ನಗರೀಕರಣದಿಂದ ರೈತರ ಪ್ರಗತಿಯಾಗುತ್ತದೆ. ಕಾಲಕ್ಕೆ ತಕ್ಕಂತೆ ಚಿಂತನೆಗಳು ಬದಲಾಗಬೇಕು. ಜೊತೆಗೆ ಪ್ರಗತಿಯ ಆಶಯಗಳು ಬದಲಾಗಬೇಕು. ರೈತರ ಬದುಕು ಹಸನಾಗಬೇಕಾದರೆ ಆಧುನಿಕವಾಗಿ ಮುಂದುವರೆಯಬೇಕು. ಇದಕ್ಕೆ ನಗರೀಕರಣದ ಅವಶ್ಯಕತೆ ಇದೆ. ಇಂದು ಬಹುತೇಕ ಜನರು ಹಳ್ಳಿಗಳಲ್ಲಿ ವಾಸ ಮಾಡುತ್ತಿಲ್ಲ. ಹಬ್ಬ ಹರಿದಿನಗಳಲ್ಲಿ ಬಂದು ಹೋಗುತ್ತಾರೆ. ಅತಿಹೆಚ್ಚು ಜನ ನಗರವನ್ನೇ ಜನ ಅವಲಂಭಿಸಿದ್ದಾರೆ ಎಂದು ಉತ್ತರಿಸಿದರು.ರಾಜಕೀಯವನ್ನು ಚುನಾವಣೆಗೆ ಮಾತ್ರ ಸೀಮಿತಗೊಳಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ. ಆಡಳಿತ ಮತ್ತು ವಿರೋಧ ಪಕ್ಷಗಳು ಬೇದಭಾವ ಮರೆತು ಕೈಜೋಡಿಸಬೇಕು. ಭವಿಷ್ಯದಲ್ಲಿ ದೇಶವೇ ಅಭಿವೃದ್ಧಿಯ ವಿಚಾರದಲ್ಲಿ ಜಿಲ್ಲೆಯತ್ತ ನೋಡುವಂತಾಗಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಆಲೋಚನೆ ಅತ್ಯುತ್ತಮ ಮತ್ತು ದೂರದೃಷ್ಟಿ ಉಳ್ಳದ್ದಾಗಿದೆ.
ಡಿ.ಕೆ.ಸುರೇಶ್ , ಅಧ್ಯಕ್ಷರು, ಬಮೂಲ್.-------