ದ.ಕ. ಬಿಜೆಪಿ ಲೋಕಸಭಾ ಚುನಾವಣಾ ಕಚೇರಿ ಕಾರ್ಯಾರಂಭ

| Published : Feb 16 2024, 01:48 AM IST

ಸಾರಾಂಶ

ಸಂಸತ್‌, ಅಸೆಂಬ್ಲಿ, ಪಾಲಿಕೆ ಸೇರಿದಂತೆ ಎಲ್ಲ ಚುನಾವಣೆಗಳಿಗೂ ಇದು ‘ಗೆಲುವಿನ ಕಾರ್ಯಾಲಯ’ ಎಂದು ವಿಶ್ಲೇಷಿಸಿದ ನಳಿನ್‌ ಕುಮಾರ್‌ ಕಟೀಲು, ಪ್ರಸಕ್ತ ಅಧಿವೇಶನ ನಡೆಯುತ್ತಿದ್ದು, ಒಳ್ಳೆಯ ಮುಹೂರ್ತವಾದ ಕಾರಣ ಗುರುವಾರ ಈ ಕಾರ್ಯಾಲಯ ಉದ್ಘಾಟಿಸಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಲೋಕಸಭಾ ಚುನಾವಣೆಗೆ ಬಿಜೆಪಿ ಅಧಿಕೃತವಾಗಿ ಸಿದ್ಧತೆ ಆರಂಭಿಸಿದೆ. ದ.ಕ. ಲೋಕಸಭಾ ಚುನಾವಣೆಗಾಗಿ ಮಂಗಳೂರಿನ ಬಂಟ್ಸ್‌ಹಾಸ್ಟೆಲ್‌ನಲ್ಲಿ ಬಿಜೆಪಿ ಚುನಾವಣಾ ಕಚೇರಿಯನ್ನು ತೆರೆದಿದೆ.

ಚುನಾವಣಾ ಕಚೇರಿ ಉದ್ಘಾಟಿಸಿದ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌, ದೇಶದಲ್ಲಿ 400ಕ್ಕೂ ಅಧಿಕ ಸ್ಥಾನ ಬಿಜೆಪಿ ಗೆಲ್ಲಲಿದ್ದು, ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಲಿದ್ದಾರೆ. ದ.ಕ.ಜಿಲ್ಲೆಯಲ್ಲಿ ಮತ್ತೊಮ್ಮೆ ಸಂಸದ ಸ್ಥಾನದಲ್ಲಿ ಬಿಜೆಪಿಗೆ ಗೆಲುವಾಗಲಿದೆ ಎಂದರು.

2004ರಿಂದ ಇಲ್ಲಿ ಬಿಜೆಪಿ ಚುನಾವಣಾ ಕಾರ್ಯಾಲಯ ಕಾರ್ಯನಿರ್ವಹಿಸುತ್ತಿದೆ. ಇದನ್ನು ಬಳಕೆ ಮಾಡಿದ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಗೆದ್ದಿದೆ. ಈ ಚುನಾವಣೆಯ ಪ್ರಭಾರಿಗಳಾದ ಕೋಟ ಶ್ರೀನಿವಾಸ ಪೂಜಾರಿ, ನಿತಿನ್‌ ಕುಮಾರ್‌ ಹಾಗೂ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಅವರ ತಂಡ ಲೋಕಸಭಾ ಚುನಾವಣೆ ಗೆಲವಿಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿ 2.73 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರೆ, ಈ ಬಾರಿ ಅದು ಇನ್ನೂ 3.50 ಲಕ್ಷದಷ್ಟು ಅಧಿಕ ಮತಗಳ ಅಂತರದಿಂದ ಗೆಲುವು ಕಾಣುವ ವಿಶ್ವಾಸವಿದೆ. ರಾಜ್ಯದಲ್ಲಿ ಹಿನ್ನೆಡೆಯಾಗಿದ್ದಾಗಲೂ ನಮ್ಮಲ್ಲಿ ಗೆಲವು ತಂದುಕೊಟ್ಟಿದ್ದೆವು. ಸಂಸತ್‌, ಅಸೆಂಬ್ಲಿ, ಪಾಲಿಕೆ ಸೇರಿದಂತೆ ಎಲ್ಲ ಚುನಾವಣೆಗಳಿಗೂ ಇದು ‘ಗೆಲುವಿನ ಕಾರ್ಯಾಲಯ’ ಎಂದು ವಿಶ್ಲೇಷಿಸಿದರು.

ಪ್ರಸಕ್ತ ಅಧಿವೇಶನ ನಡೆಯುತ್ತಿದ್ದು, ಒಳ್ಳೆಯ ಮುಹೂರ್ತವಾದ ಕಾರಣ ಗುರುವಾರ ಈ ಕಾರ್ಯಾಲಯ ಉದ್ಘಾಟಿಸಲಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪಾಲಿಕೆ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕ್ಯಾ.ಬ್ರಿಜೇಶ್‌ ಚೌಟ, ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್‌ ಎಂ. ಮತ್ತಿತರರಿದ್ದರು.

ಬಿಜೆಪಿ ಬೆಳ್ತಂಗಡಿ ಮಂಡಲ ನೂತನ ಸಮಿತಿಗೆ ಪದಾಧಿಕಾರಿಗಳ ನೇಮಕ

ಬೆಳ್ತಂಗಡಿ: ಬಿಜೆಪಿ ಬೆಳ್ತಂಗಡಿ ಮಂಡಲದ ನೂತನ ಸಮಿತಿಯನ್ನು ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಧರ್ಮಸ್ಥಳ ಘೋಷಣೆ ಮಾಡಿದ್ದಾರೆ.

ಮಂಡಲದ ಉಪಾಧ್ಯಕ್ಷರಾಗಿ ಮೋಹನ್ ಅಂಡಿಂಜೆ, ಸದಾನಂದ ಉಂಗಿಲಬೈಲು, ಕೊರಗಪ್ಪ ಗೌಡ ಚಾರ್ಮಾಡಿ, ಚೆನ್ನಕೇಶವ ಮುಂಡಾಜೆ, ರಜನಿ ಮುಂಡಾಜೆ, ವೇದಾವತಿ ಕುಲಾಲ್, ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಶಾಂತ್ ಪಾರೆಂಕಿ ಮತ್ತು ಜಯಾನಂದ ಗೌಡ ಪ್ರಜ್ವಲ್, ಕಾರ್ಯದರ್ಶಿಗಳಾಗಿ ಸುಂದರ ಹೆಗ್ಡೆ ವೇಣೂರು, ಪ್ರಭಾಕರ ಆಚಾರ್ಯ ಸವಣಾಲು, ಗಿರೀಶ್ ಡೋಂಗ್ರೆ, ಸಂತೋಷ್ ಕುಮಾರ್ ಜೈನ್, ಆಶಾ ಸಾಲ್ಡಾನ, ಅಶ್ವಿನಿ ನಾಯಕ್, ಕೋಶಾಧಿಕಾರಿಯಾಗಿ ಜಯಂತ ಗೌಡ ಗುರಿಪಳ್ಳ, ಕಾರ್ಯಾಲಯ ಕಾರ್ಯದರ್ಶಿಯಾಗಿ ಜಯಾನಂದ ಕಲ್ಲಾಪು ಅವರನ್ನು ಆಯ್ಕೆ ಮಾಡಲಾಗಿದೆ.

ಯುವಮೋರ್ಚಾ ಅಧ್ಯಕ್ಷರಾಗಿ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿಗಳಾಗಿ ಜಯಪ್ರಕಾಶ್ ಕಡಮ್ಮಾಜೆ, ವಿನೀತ್ ಸಾವ್ಯ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ವಿದ್ಯಾ ಶ್ರೀನಿವಾಸ್ ಬೆಳಾಲ್, ಪ್ರಧಾನ ಕಾರ್ಯದರ್ಶಿ ಗಳಾಗಿ ತುಳಸಿ ಮಾಲಾಡಿ, ಪೂರ್ಣಿಮಾ ಮುಂಡಾಜೆ, ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷರಾಗಿ ರತ್ನಾಕರ್ ಬುಣ್ಣನ್, ಪ್ರಧಾನ ಕಾರ್ಯದರ್ಶಿಗಳಾಗಿ ವಿಠಲ ಆಚಾರ್ಯ ಗುರುವಾಯನಕೆರೆ, ಸುಧೀರ್ ಭಂಡಾರಿ, ರೈತಮೋರ್ಚಾ ಅಧ್ಯಕ್ಷರಾಗಿ ವಿಜಯ ಗೌಡ ವೇಣೂರು, ಪ್ರಧಾನ ಕಾರ್ಯದರ್ಶಿಗಳಾಗಿ ದೀವಿನ್ ಚಾರ್ಮಾಡಿ, ಯೋಗೀಶ್ ಗೌಡ ಆಲಂಬಿಲ, ಎಸ್.ಸಿ. ಮೋರ್ಚಾ ಅಧ್ಯಕ್ಷರಾಗಿ ಈಶ್ವರ ಬೈರ, ಪ್ರಧಾನ ಕಾರ್ಯದರ್ಶಿಗಳಾಗಿ ಲಕ್ಷ್ಮಣ ಪಿಲಿಪಂಜರ, ಹೇಮಚಂದ್ರ ಹತ್ಯಡ್ಕ, ಎಸ್.ಟಿ. ಮೋರ್ಚಾ ಅಧ್ಯಕ್ಷರಾಗಿ ರಾಜೇಶ್ ಎಂ.ಕೆ., ಪ್ರಧಾನ ಕಾರ್ಯದರ್ಶಗಳಾಗಿ ಉಮೇಶ್ ನ್ಯಾಯತರ್ಪು, ನವೀನ್ ಬರೆಂಗಾಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.