ಹಿಂದುತ್ವದ ಆಧಾರದಲ್ಲಿ ವಿಕಸಿತ ದ.ಕ.: ಸಂಸದ ಕ್ಯಾ.ಬ್ರಿಜೇಶ್‌ ಚೌಟ

| Published : Jun 30 2024, 12:56 AM IST

ಹಿಂದುತ್ವದ ಆಧಾರದಲ್ಲಿ ವಿಕಸಿತ ದ.ಕ.: ಸಂಸದ ಕ್ಯಾ.ಬ್ರಿಜೇಶ್‌ ಚೌಟ
Share this Article
  • FB
  • TW
  • Linkdin
  • Email

ಸಾರಾಂಶ

ತೆರೆದ ವಾಹನದಲ್ಲಿ ಸಂಸದ ಬ್ರಿಜೇಶ್‌ ಚೌಟ ಅವರನ್ನು ವಿಮಾನ ನಿಲ್ದಾಣದಿಂದ ಕಾವೂರು- ಪದವಿನಂಗಡಿ- ಕೆಪಿಟಿ ಮೂಲಕ ಟಿ.ಎಂ.ಎ. ಪೈ ಅಂತಾರಾಷ್ಟ್ರೀಯ ಸಭಾಂಗಣ ವರೆಗೆ ವಿಜಯೋತ್ಸವ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಸಂಸದರಾಗಿ ಆಯ್ಕೆಯಾಗಿ ದೆಹಲಿಯ ಸಂಸತ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿ ತವರು ಜಿಲ್ಲೆಗೆ ಶನಿವಾರ ಆಗಮಿಸಿದ ಕ್ಯಾಪ್ಟನ್‌ ಬ್ರಿಜೇಶ್ ಚೌಟ ಅವರನ್ನು ಬಿಜೆಪಿ ದ.ಕ. ಜಿಲ್ಲಾ ಘಟಕದ ವತಿಯಿಂದ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಚೌಟ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪೇಟ ತೊಡಿಸಿ, ಹಾರ ಹಾಕಿ ಪುಷ್ಪಗುಚ್ಛಗಳೊಂದಿಗೆ ಭವ್ಯ ಸ್ವಾಗತ ಕೋರಿದರು. ಬಿಜೆಪಿ ಮಹಿಳಾ ಕಾರ್ಯಕರ್ತರು ಆರತಿ ಬೆಳಗಿ ಸ್ವಾಗತಿಸಿದರು.

ಬಳಿಕ ತೆರೆದ ವಾಹನದಲ್ಲಿ ವಿಮಾನ ನಿಲ್ದಾಣದಿಂದ ಕಾವೂರು- ಪದವಿನಂಗಡಿ- ಕೆಪಿಟಿ ಮೂಲಕ ಟಿ.ಎಂ.ಎ. ಪೈ ಅಂತಾರಾಷ್ಟ್ರೀಯ ಸಭಾಂಗಣ ವರೆಗೆ ವಿಜಯೋತ್ಸವ ಮೆರವಣಿಗೆ ನಡೆಯಿತು. ಕಾವೂರು, ಕೆಪಿಟಿ ವೃತ್ತದಲ್ಲಿ ಕಾರ್ಯಕರ್ತರು ನೂತನ ಸಂಸದರಿಗೆ ಅದ್ದೂರಿಯ ಸ್ವಾಗತ ಕೋರಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದ ಕಳೆ ಹೆಚ್ಚಿಸಿದರು. ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ಮುಖಂಡರು ಪಾಲ್ಗೊಂಡರು.ಹಿಂದುತ್ವದ ಗೆಲುವು: ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕ್ಯಾ. ಬ್ರಿಜೇಶ್ ಚೌಟ, ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಭೂತಪೂರ್ವ ವಿಜಯ ಸಾಧಿಸಿದೆ. ಇದು ಹಿಂದುತ್ವದ ಗೆಲುವು, ಕಾರ್ಯಕರ್ತರ ಗೆಲುವಾಗಿದೆ. ಹಿಂದತ್ವದ ಆಧಾರದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಣ ತೊಡುವುದಾಗಿ ಹೇಳಿದರು. ಕಾರ್ಯಕರ್ತರ ಧ್ವನಿಯಾಗುವೆ: ಕಾರ್ಯಕರ್ತರ ಧ್ವನಿಯಾಗಿ ಸದಾ ನಿಲ್ಲುವೆ. ಯಾವುದೇ ಸಂದರ್ಭವಿರಲಿ, ಕಾರ್ಯಕರ್ತರ ಜೊತೆಗೆವಿದ್ದೇ ಇರುತ್ತೇನೆ. ಇದರೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವೆ. ಕರಾವಳಿಯ ಸುರಕ್ಷತೆ, ಪ್ರವಾಸೋದ್ಯಮ ಇತ್ಯಾದಿಗಳಿಗೆ ವಿಶೇಷ ಆದ್ಯತೆ ನೀಡುವೆ ಎಂದರು.ಪ್ರತಿ ಮಂಡಲದಲ್ಲಿ ಕಾರ್ಯಕ್ರಮ: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿಯೇ ತುಳುವಿನಲ್ಲಿ ಮಾತನಾಡುವ ಮೂಲಕ ತುಳುನಾಡಿನ ಹಿರಿಮೆ ಹೆಚ್ಚಿಸಿದ್ದಾರೆ. ಈ ಬಾರಿ ಕೂಡ ಕಾರ್ಯಕರ್ತರ ಅವಿರತ ಶ್ರಮ‌ ಬಿಜೆಪಿ ಗೆಲುವಿಗೆ ಕಾರಣವಾಗಿದೆ. ಇದೇ ಉತ್ಸಾಹ, ಪ್ರೋತ್ಸಾಹ ಸದಾ ಇರಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್‌ ಮಾತನಾಡಿ, 1980ರ ದಶಕದಲ್ಲಿ ಉದಯವಾದ ಬಿಜೆಪಿ ಇಂದು ಈ ಹಂತಕ್ಕೆ ಸ್ಥಾನಕ್ಕೆ ಏರಬೇಕಾದರೆ ಕೊಟ್ಯಂತರ ಕಾರ್ಯಕರ್ತರ ಶ್ರಮ ಅಡಗಿದೆ ಎಂದರು.

ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಮುಂದಿನ ಐದು ವರ್ಷ ದೊಡ್ಡ ಸವಾಲಿದೆ. ತಂಡವಾಗಿ ಕೆಲಸ ಮಾಡುವ ಮೂಲಕ ಮೋದಿಯವರ ಕೈ ಬಲಪಡಿಸಬೇಕಿದೆ. ಪಕ್ಷ ಸಂಘಟನೆ ಬಲಪಡಿಸುವ ಮೂಲ ಭಾರತ ಭಾರತವಾಗಿ ಉಳಿಯುವಲ್ಲಿ ನಮ್ಮೆಲ್ಲರ ಸಾಥ್ ನೀಡಬೇಕಿದೆ ಎಂದರು.ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಹರೀಶ್ ಪೂಂಜ, ರಾಜೇಶ್ ನಾಯ್ಕ್, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಬಾಲಕೃಷ್ಣ ಭಟ್, ಪ್ರಮುಖರಾದ ನಿತಿನ್ ಕುಮಾರ್, ಕಿಶೋರ್ ಕುಮಾರ್ ಪುತ್ತೂರು, ಅಕ್ಷಿತ್ ಸುವರ್ಣ ಮತ್ತಿತರರಿದ್ದರು.

ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು. ರಾಕೇಶ್ ರೈ ನಿರೂಪಿಸಿದರು.

ಸಂಸದರಿಗಾಗಿಯೇ ವಿಶೇಷ ಹಾಡು!

ವಿಮಾನ ನಿಲ್ದಾಣದಿಂದ ಹೊರಟ ವಿಜಯೋತ್ಸವ ಮೆರವಣಿಗೆಯಲ್ಲಿ ಚೌಟರಿಗಾಗಿಯೇ ರಚಿಸಿದ ವಿಶೇಷ ಹಾಡುಗಳು ಕಾರ್ಯಕರ್ತರ ಹುರುಪು ಹೆಚ್ಚಿಸಿದವು.

ಕಾವೂರು ಬಿಜೆಪಿ ಕಚೇರಿ ಬಳಿ ಹಾಗೂ ಕೆಪಿಟಿ ವೃತ್ತದ ಸಮೀಪ ಸಂಸದರನ್ನು ಪಕ್ಷದ ಕಾರ್ಯಕರ್ತರು ವಿಶೇಷ ಹೂಮಾಲೆ ಹಾಕಿ, ಶಾಲು ಹಾಕಿ, ಆರತಿ ಬೆಳಗಿ ಸ್ವಾಗತಿಸಿದರು. ಚುನಾವಣೆ ವೇಳೆ ಕ್ಯಾಪ್ಟನ್ ಚೌಟ ಅವರಿಗೆಂದೇ ಸಿದ್ಧಪಡಿಸಲಾದ ಹಾಡುಗಳಿಗೆ ಕಾರ್ಯಕರ್ತರು ಹೆಜ್ಜೆ ಹಾಕಿದರು. ವಿಜಯೋತ್ಸವ ಮೆರವಣಿಗೆಯ ವಾಹನದಲ್ಲಿ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಹರೀಶ್ ಪೂಂಜಾ ಸೇರಿದಂತೆ ಹಲವು ಮುಖಂಡರು‌ ಸಾಥ್ ನೀಡಿದರು.