ಬ್ಯಾಡಗಿ ಪಟ್ಟಣದ ಎಸ್ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) 19 ವರ್ಷದೊಳಗಿನ ಬಾಲಕಿಯರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ನಿರ್ಣಾಯಕ ಹಂತದಲ್ಲಿ ಎಡವಿದ ಅತಿಥೇಯ ಹಾವೇರಿ ಜಿಲ್ಲಾ ತಂಡ ರನ್ನರ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಬ್ಯಾಡಗಿ: ಪಟ್ಟಣದ ಎಸ್ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) 19 ವರ್ಷದೊಳಗಿನ ಬಾಲಕಿಯರ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ನಿರ್ಣಾಯಕ ಹಂತದಲ್ಲಿ ಎಡವಿದ ಅತಿಥೇಯ ಹಾವೇರಿ ಜಿಲ್ಲಾ ತಂಡ ರನ್ನರ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಕ್ರೀಡಾಕೂಟದ ಅಂತಿಮ ದಿನವಾದ ಭಾನುವಾರ ಗೆಲ್ಲುವ ಭರವಸೆ ಮೂಡಿಸಿದ್ದ ಹಾವೇರಿ ತಂಡವು ಅಂತಿಮ ಪಂದ್ಯದಲ್ಲಿ ಪರಾಭವಗೊಳ್ಳುವ ಮೂಲಕ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಸಾವಿರಾರು ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತು. ಪಂದ್ಯದ ಮೊದಲಾರ್ಧದಲ್ಲಿ 09 ಅಂಕಗಳಿಂದ ಮುನ್ನಡೆ (24-15) ಸಾಧಿಸಿದ್ದ ದಕ್ಷಿಣ ಕನ್ನಡ ದ್ವಿತೀಯಾರ್ಧದಲ್ಲಿ ರೈಡರ್ ದೃತಿ ತಮ್ಮ ತಂಡಕ್ಕೆ ಹೆಚ್ಚು ಅಂಕಗಳನ್ನು ಕಲೆ ಹಾಕುವ ಮೂಲಕ ಅಂತಿಮವಾಗಿ ಗೆಲುವಿನ ಪ್ರಮುಖ ರೂವಾರಿ ಎನಿಸಿದರು.ದಕ್ಷಿಣ ಕನ್ನಡ ತಂಡವು ಅನುಭವಿ ಆಟಗಾರರಿಂದ ಹೊಂದಿದ್ದು ತಾಳ್ಮೆಯಿಂದ ಎಚ್ಚರಿಕೆಯ ಆಟ ಪ್ರದರ್ಶಿಸಿ ತಂಡವನ್ನು ಗೆಲುವಿನ ಹಂತಕ್ಕೆ ಕೊಂಡೊಯ್ದರು, ಆದರೆ, ಹಾವೇರಿ ತಂಡದ ಪ್ರಮುಖ ರೈಡರ್ ರುಕ್ಸಾನಾ, ಸೃಷ್ಟಿ, ಸಾನಿಕಾ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರದಿರುವುದು ತಂಡದ ಪರಾಭವಕ್ಕೆ ಪ್ರಮುಖ ಕಾರಣವಾಯಿತು. ಒಂದು ಸಂದರ್ಭದಲ್ಲಿ ಲೋನಾ ಖಾಲಿ ಮಾಡುವ ಸಾಧ್ಯತೆಯಿತ್ತು, ಇದರಿಂದ ಹಾವೇರಿ ಜಿಲ್ಲಾ ತಂಡ ಮೇಲುಗೈ ಸಾಧಿಸುವ ಎಲ್ಲಾ ಅವಕಾಶಗಳಿದ್ದವು, ಆದರೆ ರೈಡರ್ ರುಕ್ಸಾನ ಡಬಲ್ ಆಂಕಲ್ ಹೊಲ್ಡ್ (ಸೂಪರ್ ಟ್ಯಾಕಲ್) ಬಲೆಗೆ ಬಿದ್ದ ಪರಿಣಾಮ ಆಲೌಟ್ ಮಾಡುವ ಅವಕಾಶ ಕಳೆದುಕೊಂಡಿತು, ಹೀಗಾಗಿ ತಂಡದ ಇನ್ನಿತರ ಆಟಗಾರ್ತಿಯರು ಒತ್ತಡಕ್ಕೊಳಗಾದರು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಸೆಂಟ್ರಲ್ ವಿರುದ್ಧ ಹಾವೇರಿ ಮಹಿಳಾ ತಂಡವು 14 ಅಂಕಗಳಿಂದ (35-21) ವಿಜಯ ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿತ್ತು, ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡವು ಶಿವಮೊಗ್ಗ ವಿರುದ್ಧ 39 (70-31) ಅಂಕಗಳಿಂದ ಜಯಗಳಿಸಿ ಫೈನಲ್ಗೆ ಅರ್ಹತೆ ಪಡೆದುಕೊಂಡಿತ್ತು. ಅಂತಿಮವಾಗಿ ಹಾವೇರಿ ತಂಡದ ಪ್ರಮುಖ ರೈಡರ್ ರುಕ್ಸಾರ್ ಬೆಸ್ಟ ರೈಡರ್, ದಕ್ಷಿಣ ಕನ್ನಡ ಜಿಲ್ಲಾ ತಂಡದ ಹರ್ಷಿಣಿ ಬೆಸ್ಟ ಡಿಫೆಂಡರ್ ಹಾಗೂ ಅದೇ ತಂಡದ ಧನ್ವಿ ಬೆಸ್ಟ್ ಆಲ್ರೌಂಡರ್ ಪ್ರಶಸ್ತಿ ಗಳಿಸುವ ಮೂಲಕ ಮೂವರು ಆಟಗಾರ್ತಿಯರು ಸ್ಮಾರ್ಟ ವಾಚ್ ಗಿಟ್ಟಿಸಿಕೊಂಡರು.ಪ್ರಥಮ ಬಾರಿಗೆ ನಗದು ಬಹುಮಾನ: ವಿಜೇತ ತಂಡಕ್ಕೆ ₹ 50 ಸಾವಿರ, ರನ್ನರ-ಅಪ್ ₹ 25, ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ಶಿವಮೊಗ್ಗ ಹಾಗೂ ಬೆಂಗಳೂರು ಸೆಂಟ್ರಲ್ ತಂಡಗಳಿಗೆ ತಲಾ ₹10 ಸಾವಿರಗಳನ್ನು ಶಾಸಕ ಬಸವರಾಜ ಶಿವಣ್ಣನವರ ತಮ್ಮ ವೈಯಕ್ತಿತ ಕೊಡುಗೆಯಾಗಿ ನೀಡಿದರು. ಅಷ್ಟಕ್ಕೂ ಇಷ್ಟೊಂದು ಮೊತ್ತದ ನಗದು ಬಹುಮಾನ ಪದವಿ ಪೂರ್ವ ಇಲಾಖೆ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಎನ್ನುವುದು ವಿಶೇಷ. ರನ್ನರ-ಅಪ್ ಸ್ಥಾನ ಪಡೆದ ಹಾವೇರಿಗೆ ರಾಜು ಬಡಿಗೇರ ₹ 25 ಸಾವಿರ ನಗದು ಬಹುಮಾನ ನೀಡಿದರು.