ಪೂಜಾರಿ ಶಿಷ್ಯ ಪದ್ಮರಾಜ್‌ಗೆ ಒಲಿದ ಕಾಂಗ್ರೆಸ್‌ ಟಿಕೆಟ್‌

| Published : Mar 22 2024, 01:05 AM IST

ಪೂಜಾರಿ ಶಿಷ್ಯ ಪದ್ಮರಾಜ್‌ಗೆ ಒಲಿದ ಕಾಂಗ್ರೆಸ್‌ ಟಿಕೆಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಒಂದೆರಡು ವರ್ಷಗಳ ಹಿಂದೆ ನಾರಾಯಣ ಗುರುಗಳ ಟ್ಯಾಬ್ಲೋ ನಿರಾಕರಣೆ ವಿರುದ್ಧ ಮುಂಚೂಣಿಯಲ್ಲಿ ಹೋರಾಟ ಸಂಘಟಿಸಿ ಪದ್ಮರಾಜ್‌ ಗಮನ ಸೆಳೆದಿದ್ದರು. ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನಿರೀಕ್ಷೆಯಂತೆ ವಕೀಲ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಆಪ್ತ ಪದ್ಮರಾಜ್ ಆರ್‌. ಅವರಿಗೆ ಟಿಕೆಟ್‌ ದೊರೆತಿದೆ.

ಹಿಂದುತ್ವದ ಪ್ರಬಲ ಪ್ರಭಾವ ಇರುವ ಈ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಇಳಿಯಲು ತೀರ ಪೈಪೋಟಿಯೇನೂ ಇರಲಿಲ್ಲ. ಪಕ್ಷ ಸೂಚನೆ ನೀಡಿದರೆ ಮಾತ್ರ ಸ್ಪರ್ಧಿಸುವ ಇರಾದೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಇದ್ದರೆ, ಇನ್ನೋರ್ವ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಕೂಡ ಆಕಾಂಕ್ಷಿಯಾಗಿದ್ದರು. ಆದರೆ ತೀರ ಲಾಬಿಗಿಳಿದು ಟಿಕೆಟ್‌ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿಲ್ಲ. ಆರಂಭದಿಂದಲೂ ಪದ್ಮರಾಜ್‌ ಹೆಸರು ಮುಂಚೂಣಿಯಲ್ಲಿತ್ತು. ಜಿಲ್ಲೆಯ ನಾಯಕರು ಕೂಡ ಬೆಂಬಲಿಸಿದ್ದರು. ಹಾಗಾಗಿ ನಿರೀಕ್ಷೆಯಂತೆ ಪದ್ಮರಾಜ್‌ ಅವರನ್ನು ಕೈ ಹೈಕಮಾಂಡ್‌ ಅಂತಿಮಗೊಳಿಸಿದೆ.

ವಕೀಲರಾಗಿ ಪರಿಚಿತರಾಗಿರುವ ಪದ್ಮರಾಜ್, ಕಿರಿಯ ವಯಸ್ಸಿನಲ್ಲೇ ಕುದ್ರೋಳಿ ಕ್ಷೇತ್ರದ ಜವಾಬ್ದಾರಿ ವಹಿಸಿಕೊಂಡವರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಎಂಬ ಪುಟ್ಟ ಗ್ರಾಮದಲ್ಲಿ ಮಂಗಳೂರು ಮೂಲದ ಎಚ್.ಎಂ.ರಾಮಯ್ಯ ಮತ್ತು ಲಲಿತಾ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಪದ್ಮರಾಜ್ ರಾಮಯ್ಯ, ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಗಿಸಿ ಮುಂದೆ ಬಿ.ಎ. ಪದವಿಯನ್ನು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ಹಾಗೂ ಕಾನೂನು ಪದವಿಯನ್ನು ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಮುಗಿಸಿದರು.

ಪೂಜಾರಿ ಶಿಷ್ಯ:

1995ರಿಂದ ಕಾನೂನು ವೃತ್ತಿಯ ಚೊಚ್ಚಲ ಅಭ್ಯಾಸವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿ ಅವರೊಂದಿಗೆ ಪ್ರಾರಂಭಿಸುವ ಅವಕಾಶ ಪದ್ಮರಾಜ್‌ಗೆ ದೊರೆತಿದ್ದು, ಇದೇ ಅವರನ್ನು ರಾಜಕೀಯ ಹಾದಿಯಲ್ಲಿ ಸಾಗಲು ಪ್ರೇರಣೆ ನೀಡಿತ್ತು. ಅದಾಗಿ 4 ವರ್ಷಗಳ ಬಳಿಕ ಬಳ್ಳಾಲ್‌ಬಾಗ್‌ನಲ್ಲಿ ಸ್ವಂತ ಕಚೇರಿ ಆರಂಭಿಸಿದರು. ತೀರ ಇತ್ತೀಚಿನವರೆಗೂ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದಿದ್ದರೂ ಬಿ.ಜನಾರ್ದನ ಪೂಜಾರಿ ಅವರ ಚುನಾವಣೆ ಸಂದರ್ಭದಲ್ಲಿ ಅವರಿಗಾಗಿ ದುಡಿದಿದ್ದಾರೆ.ಗುರು ಬೆಳದಿಂಗಳು ಫೌಂಡೇಶನ್‌ ಸ್ಥಾಪಿಸಿ ಅದರ ಮೂಲಕ ಬಡವರಿಗೆ ಮನೆ ಕಟ್ಟಿಕೊಡುವುದು, ಆರೋಗ್ಯ, ಶಿಕ್ಷಣಕ್ಕೆ ಸಹಾಯಹಸ್ತ ಇತ್ಯಾದಿ ಸೇವಾ ಕಾರ್ಯಗಳಲ್ಲಿ ಪದ್ಮರಾಜ್‌ ತೊಡಗಿಕೊಂಡಿದ್ದಾರೆ. ಮಂಗಳೂರಲ್ಲಿ ಆಟೋ ಕುಕ್ಕರ್‌ ಬಾಂಬ್ ಸ್ಫೋಟದ ಸಂತ್ರಸ್ತ ಉಜ್ಜೋಡಿಯ ಪುರುಷೋತ್ತಮ ಪೂಜಾರಿ ಮನೆ ನವೀಕರಣಗೊಳಿಸುವ ಕಾರ್ಯ ಮಾಡಿದ್ದಾರೆ. ಒಂದೆರಡು ವರ್ಷಗಳ ಹಿಂದೆ ನಾರಾಯಣ ಗುರುಗಳ ಟ್ಯಾಬ್ಲೋ ನಿರಾಕರಣೆ ವಿರುದ್ಧ ಮುಂಚೂಣಿಯಲ್ಲಿ ಹೋರಾಟ ಸಂಘಟಿಸಿ ಪದ್ಮರಾಜ್‌ ಗಮನ ಸೆಳೆದಿದ್ದರು. ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪದ್ಮರಾಜ್ ಅವರ ಅಣ್ಣ ಆರ್‌. ಪುರುಷೋತ್ತಮ್‌ ಮಂಗಳೂರಿನ ಹೆಸರಾಂತ ಹೃದ್ರೋಗ ತಜ್ಞರು.

ಬಂಟ್ವಾಳದ ಟಿಕೆಟ್‌ ಕೈಬಿಟ್ಟಿದ್ದ ಪದ್ಮರಾಜ್‌!

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ವೇಳೆ ಪದ್ಮರಾಜ್‌ ಅವರಿಗೆ ಬಂಟ್ವಾಳ ಕ್ಷೇತ್ರದಲ್ಲಿ ಸ್ಪರ್ಧಿಸುವ ಅನಿರೀಕ್ಷಿತ ಅವಕಾಶ ಬಂದೊದಗಿತ್ತು. ಕಾಂಗ್ರೆಸ್‌ ರಾಜ್ಯ ಉಸ್ತುವಾರಿಯಾಗಿದ್ದ ಸುರ್ಜೇವಾಲಾ ಅವರು ಖುದ್ದು ಪದ್ಮರಾಜ್‌ ಬಳಿ ಬಂಟ್ವಾಳದಲ್ಲಿ ನಿಲ್ಲುವಂತೆ ಆಫರ್‌ ನೀಡಿದ್ದರು. ಆದರೆ ಪದ್ಮರಾಜ್‌ ನಿರಾಕರಣೆ ಮಾಡಿದ್ದರು. ಅದೇ ಸಮಯದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆಗಾಗಿ ಪದ್ಮರಾಜ್‌ ತೀವ್ರ ಆಕಾಂಕ್ಷಿಯಾಗಿದ್ದರೂ, ಕೊನೇ ಹಂತದಲ್ಲಿ ಟಿಕೆಟ್‌ ಜೆ.ಆರ್‌. ಲೋಬೊ ಅವರ ಪಾಲಾಗಿತ್ತು. ಇದೀಗ ಲೋಕಸಭೆಗೆ ಪದ್ಮರಾಜ್‌ ಪಾಲಾಗಿದೆ. ಇದು ಅವರ ಮೊದಲ ಚುನಾವಣಾ ಕದನ.