ಸಾರಾಂಶ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಅರ್ಭಟ ಮುಂದುವರೆದಿದ್ದು, ಮುಂದಿನ ಮೂರ್ನಾಲ್ಕು ದಿನ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಅರ್ಭಟ ಮುಂದುವರೆದಿದ್ದು, ಮುಂದಿನ ಮೂರ್ನಾಲ್ಕು ದಿನ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುತ್ತಿದೆ. ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರೆಯಲಿದೆ. ಹೀಗಾಗಿ, ಭಾನುವಾರ ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಉತ್ತರ ಒಳನಾಡಿನ ಹಾವೇರಿ, ಗದಗದಲ್ಲಿ ಹಗುರ ಮಳೆ ಆಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಮಂಡ್ಯ, ರಾಮನಗರ ಮತ್ತು ತುಮಕೂರಿನಲ್ಲಿ ಸಾಧಾರಣ ಮಳೆ ಆಗಲಿದೆ.
ಸೋಮವಾರದಂದು ಕೋಲಾರ, ರಾಮನಗರ, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.
ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ವರದಿ ಪ್ರಕಾರ, ಕೋಲಾರದಲ್ಲಿ ಅತಿ ಹೆಚ್ಚು 9 ಸೆಂ.ಮೀ. ಮಳೆ ಸುರಿದಿದೆ. ಬೆಂಗಳೂರು ನಗರದಲ್ಲಿ 7, ಚಿಂತಾಮಣಿ, ಕೆ.ಆರ್.ನಗರ, ಕುಣಿಗಲ್, ನಾಗಮಂಗಲ, ಸುಳ್ಯದಲ್ಲಿ ತಲಾ 5, ಕೃಷ್ಣರಾಜಸಾಗರ, ಮಲೇಮಹದೇಶ್ವರ ಬೆಟ್ಟ ತಲಾ 5, ವೈ.ಎನ್.ಹೊಸಕೋಟೆ 4, ಚಾಮರಾಜನಗರದಲ್ಲಿ 3 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.