ಸಾರಾಂಶ
ಕರಾವಳಿ ಭಾಗದಲ್ಲಿ ತಣಿಯದ ಕೋಮು ದ್ವೇಷದ ಹತ್ಯಾ ಸರಣಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರವು, ಮಂಗಳೂರು ಪೊಲೀಸ್ ಆಯುಕ್ತ ಸೇರಿ ಮೂವರು ಐಪಿಎಸ್ ಅಧಿಕಾರಿಗಳನ್ನು ದಿಢೀರ್ ಗುರುವಾರ ವರ್ಗಾಯಿಸಿದೆ.
ಬೆಂಗಳೂರು : ಕರಾವಳಿ ಭಾಗದಲ್ಲಿ ತಣಿಯದ ಕೋಮು ದ್ವೇಷದ ಹತ್ಯಾ ಸರಣಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರವು, ಮಂಗಳೂರು ಪೊಲೀಸ್ ಆಯುಕ್ತ ಸೇರಿ ಮೂವರು ಐಪಿಎಸ್ ಅಧಿಕಾರಿಗಳನ್ನು ದಿಢೀರ್ ಗುರುವಾರ ವರ್ಗಾಯಿಸಿದೆ.
ಮಂಗಳೂರು ಆಯುಕ್ತರಾಗಿ ಗುಪ್ತದಳದ ಡಿಐಜಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ನೇಮಿಸಿದ ಸರ್ಕಾರ, ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಮಂಗಳೂರು ಆಯುಕ್ತರಾಗಿದ್ದ ಅನುಪಮ್ ಅಗರ್‌ವಾಲ್ ಅವರನ್ನು ನಿಯೋಜಿಸಿದೆ. ಅದೇ ರೀತಿ ಉಡುಪಿ ಜಿಲ್ಲೆ ಎಸ್ಪಿ ಕೆ.ಅರುಣ್ ಅವರಿಗೆ ದಕ್ಷಿಣ ಕನ್ನಡ ಹಾಗೂ ಗುಪ್ತದಳದ ಎಸ್ಪಿ ಹರಿರಾಮ್ ಶಂಕರ್ ಅವರಿಗೆ ಉಡುಪಿ ಎಸ್ಪಿ ಹುದ್ದೆ ನೀಡಲಾಗಿದೆ. ಆದರೆ ದಕ್ಷಿಣ ಕನ್ನಡ ಎಸ್ಪಿಯಾಗಿದ್ದ ಯತೀಶ್ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ.
ಈ ಹಿಂದೆ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿಯಾಗಿ ಕೆಲಸ ಮಾಡಿ ಅನುಭವವಿದೆ. ಅಲ್ಲದೆ, ಕೋಮು ಗಲಭೆಗಳ ನಿಯಂತ್ರಣಕ್ಕೆ ‘ಟಾಸ್ಕ್ ಮಾಸ್ಟರ್’ ಎಂದೇ ಇಲಾಖೆಯಲ್ಲಿ ಅವರು ಹೆಸರು ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿಯಾಗಿದ್ದಾಗ ಕೋಮು ದ್ವೇಷವನ್ನು ತಹಬದಿಗೆ ತಂದು ರೆಡ್ಡಿ ಅವರು ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಾಗೆ ಇತ್ತೀಚೆಗೆ ಆರು ನಕ್ಸಲೀಯರ ಶರಣಾಗತಿಯಲ್ಲಿ ಸುಧೀರ್ ಕುಮಾರ್ ರೆಡ್ಡಿ ಹಾಗೂ ಎಸ್ಪಿ ಹರಿರಾಮ್ ಶಂಕರ್ ಮಹತ್ವದ ಪಾತ್ರವಹಿಸಿದ್ದರು. ಈ ದಕ್ಷತೆಗೆ ಕಾರಣಕ್ಕೆ ಪ್ರಸುತ್ತ ಕರಾವಳಿ ಪ್ರದೇಶದಲ್ಲಿ ಕೋಮು ದ್ವೇಷದ ಸರಣಿ ಕೊಲೆಗಳಿಂದ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿ ತಿಳಿಗೊಳಿಸಲು ರೆಡ್ಡಿ ಮೇಲೆ ಸರ್ಕಾರ ವಿಶ್ವಾಸವಿರಿಸಿದೆ.
ಇನ್ನು ಕೋಮು ಹಗೆತನದ ಹತ್ಯೆಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಜನಾಕ್ರೋಶ ವ್ಯಕ್ತವಾಯಿತು. ಇದರಿಂದ ಎಚ್ಚೆತ್ತ ಸರ್ಕಾರವು, ಕೋಮು ದ್ವೇಷವನ್ನು ಅಳಿಸಿ ಕರಾವಳಿಯಲ್ಲಿ ಕೋಮು ಸಾಮರಸ್ಯವನ್ನು ಮೂಡಿಸುವ ಜವಾಬ್ದಾರಿಯನ್ನು ಸುಧೀರ್ ಕುಮಾರ್ ರೆಡ್ಡಿ, ಎಸ್ಪಿಗಳಾದ ಅರುಣ್ ಹಾಗೂ ಹರಿರಾಮ್ ಶಂಕರ್ ಅವರಿಗೆ ನೀಡಿದೆ. ಈಗಾಗಲೇ ಉಡುಪಿಯಲ್ಲಿ ಕೆಲಸ ಮಾಡಿದ್ದ ಅನುಭವಿ ಎಸ್ಪಿ ಅರುಣ್ ಅವರಿಗೆ ಕೋಮು ಗಲಭೆ ಹಾಟ್ ಸ್ಪಾಟ್ ದಕ್ಷಿಣ ಕನ್ನಡ ಜಿಲ್ಲೆ ಹೊಣೆಗಾರಿಕೆಯನ್ನು ಸಹ ಕೊಟ್ಟಿದೆ. ಹಾಸನ ಜಿಲ್ಲೆಯಲ್ಲಿ ಹರಿರಾಮ್ ಕೆಲಸ ಮಾಡಿದ್ದರು.
ಸಿಎಂ ಮುಜುಗರ-ಬೆಳಗಾವಿ ಆಯುಕ್ತ ಎತ್ತಂಗಡಿ
ಕೆಲ ದಿನಗಳ ಹಿಂದೆ ಬಿಜೆಪಿ ಪ್ರತಿಭಟನೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗ ಸಮ್ಮೇಳನದಲ್ಲಿ ಮುಜುಗರಕ್ಕೀಡಾಗಿದ್ದ ಘಟನೆಗೆ ಬೆಳಗಾವಿ ಪೊಲೀಸ್ ಆಯುಕ್ತರ ತಲೆದಂಡವಾಗಿದೆ.
ಬೆಳಗಾವಿ ಆಯುಕ್ತರಾಗಿದ್ದ ಇಡಾ ಮಾರ್ಟಿನ್ ಅವರನ್ನು ವರ್ಗಾಯಿಸಿದ ಸರ್ಕಾರ, ನೂತನ ಆಯುಕ್ತರಾಗಿ ಡಿಐಜಿ ಭೂಷಣ್ ಬೊರಸೆ ಅವರನ್ನು ನೇಮಿಸಿದೆ. ಆದರೆ ಇಡಾ ಮಾರ್ಟಿನ್ ಅವರಿಗೆ ಸರ್ಕಾರವು ಯಾವುದೇ ಹುದ್ದೆ ತೋರಿಸಿಲ್ಲ.
ಕಳೆದ ವಿಧಾನಸಭಾ ಅಧಿವೇಶನದ ವೇಳೆ ಬೆಳಗಾವಿಯಲ್ಲಿ ಪಂಚಮಸಾಲಿಗಳ ಪ್ರತಿಭಟನೆ, ಸುವರ್ಣಸೌಧಕ್ಕೆ ನುಗ್ಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರ ಗಲಾಟೆ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಬಂಧನ ವೇಳೆ ನಡೆದ ಹೈಡ್ರಾಮಾಗಳಿಂದ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುವ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ದಿಢೀರ್ ಪ್ರತಿಭಟನೆ ನಡೆಸಿದರು. ಇದರಿಂದ ತೀವ್ರ ಇರಿಸುಮುರುಸಿಗೊಳಗಾದ ಮುಖ್ಯಮಂತ್ರಿಗಳು ಸಿಟ್ಟಿನಿಂದ ಎಎಸ್ಪಿ ಅವರ ಮೇಲೆ ಎತ್ತಲು ಹೋದ ಘಟನೆ ನಡೆದಿತ್ತು.
;Resize=(690,390))
)
)


;Resize=(128,128))
;Resize=(128,128))
;Resize=(128,128))
;Resize=(128,128))