ಸಾರಾಂಶ
ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ ಹುಟ್ಟಿ ಬೆಳೆದು ಕೊನೆಗೆ ಮಣ್ಣಾದ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮ ಸಮಸ್ಯೆಗಳನ್ನು ಹೊದ್ದು ಮಲಗಿದೆ.
ರಾಮ್ ಅಜೆಕಾರು
ಕಾರ್ಕಳ : ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ ಹುಟ್ಟಿ ಬೆಳೆದು ಕೊನೆಗೆ ಮಣ್ಣಾದ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮ ಸಮಸ್ಯೆಗಳನ್ನು ಹೊದ್ದು ಮಲಗಿದೆ.
ಪಶ್ಚಿಮ ಘಟ್ಟದ ಪಾದದ ಕೆಳಗಿರುವ ದಟ್ಟ ಕಾಡಿನ ನಡುವೆ, ಹೊರಜಗತ್ತಿನಲ್ಲಿರುವ ನಾಗರಿಕ ಮೂಲ ಸೌಕರ್ಯಗಳಾದ ರಸ್ತೆ, ವಿದ್ಯುತ್, ಆಸ್ಪತ್ರೆ, ಶಾಲೆಗಳಿಲ್ದ ಊರಿದು. ಸರ್ಕಾರದ ಯೋಜನೆಗಳು ತಲುಪದ, ರಾಜಕಾರಣಿಗಳ ಭಾಷಣಗಳು ಕೇಳದ ಊರಿದು. ಆದರೆ ಇಲ್ಲೂ ಆರಕ್ಕೇರದೆ ಮೂರಕ್ಕಿಳಿಯದೆ ಬದುಕುತ್ತಿರುವ ಜನರಿದ್ದಾರೆ, ಪುಟ್ಟ ಮನೆಗಳಿವೆ, ಅಂಗೈಯಗಲದ ದಾಖಲೆಗಳಲ್ಲಿ ತಮ್ಮದಲ್ಲದ ಜಮೀನಿದೆ, ತೋಟ ಗದ್ದೆಗಳಿವೆ. ಸಮೀಪದ ಕೂಡ್ಲು ಎಂಬಲ್ಲಿ ರಮಣೀಯವಾದ ಜಲಪಾತವಿದ್ದು, ಅದನ್ನು ನೋಡಲು ಸಾವಿರಾರು ಮಂದಿ ಬರುತ್ತಾರೆ, ಅವರಿಗಾಗಿ ಪ್ರವಾಸೋದ್ಯಮ ಇಲಾಖೆ ಕಚ್ಚಾ ರಸ್ತೆ ನಿರ್ಮಿಸಿದೆ. ಆದರೆ ಕೂಗಳತೆ ದೂರದ ಅಜ್ಜೊಳ್ಳಿ, ಮೇಗದ್ದೆಗಳಿಗೆ ರಸ್ತೆಯೇ ಇಲ್ಲ. ತೆಂಗುಮಾರ್, ತಿಂಗಳನಕ್ಕಿ, ಪೀತಬೈಲ್‌ಗೆ ರಸ್ತೆ ಎಂಬ ರಚನೆಯೊಂದಿದೆ. ಆದರೆ ರಸ್ತೆ ರೂಪ ಇಲ್ಲ, ಡಾಮರಂತು ಆಗಿಯೇ ಇಲ್ಲ. ಇಲ್ಲಿರುವ ಬಹುತೇಕ ಮಲೆಕುಡಿಯ ಕುಟುಂಬಗಳು ಸ್ಥಿತಿವಂತರಲ್ಲ. ಅವರಲ್ಲಿ ಸೈಕಲ್ ಕೂಡ ಇಲ್ಲ!
ಶಾಲೆ, ಆಸ್ಪತ್ರೆ, ಅಂಗಡಿ ಇತ್ಯಾದಿಗಳಂತು ಇಲ್ಲಿ ಕನಸೇ ಸರಿ. ಇಲ್ಲಿ ಒಂದಿಬ್ಬರ ಬಳಿ ಬಿಟ್ಟರೆ ಉಳಿದವರ ಬಳಿ ಮೊಬೈಲೂ ಇಲ್ಲ, ಯಾಕೆಂದರೆ ನೆಟ್‌ವರ್ಕೇ ಇಲ್ಲ, ಆಗುಂಬೆಯಲ್ಲಿ ಬಿಎಸ್‌ಎನ್‌ಎಲ್ ಟವರ್ ಇದೆ. ಆದರೆ ಅದರಿಂದ ಮೊಬೈಲಿಗೆ ಸಿಗ್ನಲ್ ಸಿಕ್ಕಿದ್ದೇ ಕಡಿಮೆ, ಮೊಬೈಲಿನಲ್ಲಿ ಮಾತನಾಡಬೇಕಾದರೆ ಹತ್ತಾರು ಕಿ.ಮೀ. ಆಗುಂಬೆ ಹತ್ತಬೇಕು ಎನ್ನುತ್ತಾರೆ ಇಲ್ಲಿನ ರಂಗಪ್ಪ ಗೌಡ.
ಬರೇ ಇಲ್ಲಗಳ ಈ ಗ್ರಾಮಗಳಲ್ಲಿ ಹುಟ್ಟಿದ ವಿಕ್ರಂ ಗೌಡನಂಥ ಅಲ್ಪಸ್ವಲ್ಪ ವಿದ್ಯಾವಂತರು ವ್ಯವಸ್ಥೆ ವಿರುದ್ಧ ಸಿಡಿದದ್ದು, ಕ್ರಾಂತಿಯ ವಿಚಾರಗಳನ್ನು ಬಿತ್ತುವ ನಕ್ಸಲೀಯರು ಅನುಕಂಪ ಗಳಿಸಿಕೊಂಡಿದ್ದು. ಆದ್ದರಿಂದಲೇ ಕಾರ್ಕಳ ತಾಲೂಕಿನ ಈದು, ಬೊಳ್ಳೆಟ್ಟು, ಕನ್ಯಾಲು, ನೂರಲ್ಬೆಟ್ಟು, ಕಿಗ್ಗ, ನೆಮ್ಮಾರು, ಕೆರೆಕಟ್ಟೆ, ಶೀರ್ಲು ಪ್ರದೇಶಗಳು ನಕ್ಸಲರ ಅಡಗುದಾಣಗಳಾಗಿವೆ. 20 ವರ್ಷಗಳ ಹಿಂದೆ ಈ ಎಲ್ಲಾ ಇಲ್ಲಗಳಿಂದ ಬೇಸತ್ತ ವಿಕ್ರಮ್ ಗೌಡ ಭಂಡ ಧೈರ್ಯದಲ್ಲಿ ಬಂದೂಕು ಹಿಡಿದ ಮತ್ತು ಅದೇ ಬಂದೂಕಿಗೇ ಬಲಿಯಾದ. ಅಂದು ಇದ್ದ ಬಹುತೇಕ ಎಲ್ಲಾ ಇಲ್ಲಗಳು ಇಂದೂ ಊರಿನಲ್ಲಿವೆ.