ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿಪ್ರಕಟಿಲಾಗಿದ್ದು, ಅದರಂತೆ ದ.ಕ. ಜಿಲ್ಲೆಯಲ್ಲಿ 16,46,387 ಮತದಾರರಿದ್ದಾರೆ. ಮ್ಯಾಪಿಂಗ್‌ ಆಗದಿರುವ ಮತ್ತು ಹೆಸರು ಬದಲಾವಣೆ, ಪೋಷಕರ ಹೆಸರು ಬದಲಾವಣೆ, ವಯಸ್ಸಿನ ಅಂತರ ಸೇರಿದಂತೆ ತಾರ್ತಿಕ ದೋಷಗಳಿಂದ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ 1,50,153 ಮತದಾರರಿಗೆ ಬಿಎಲ್‌ಒಗಳ ಮೂಲಕ ನೋಟೀಸು ಹಂಚಿಕೆಯಾಗಲಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ತಿಳಿಸಿದರು.

ಮಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿಪ್ರಕಟಿಲಾಗಿದ್ದು, ಅದರಂತೆ ದ.ಕ. ಜಿಲ್ಲೆಯಲ್ಲಿ 16,46,387 ಮತದಾರರಿದ್ದಾರೆ. ಮ್ಯಾಪಿಂಗ್‌ ಆಗದಿರುವ ಮತ್ತು ಹೆಸರು ಬದಲಾವಣೆ, ಪೋಷಕರ ಹೆಸರು ಬದಲಾವಣೆ, ವಯಸ್ಸಿನ ಅಂತರ ಸೇರಿದಂತೆ ತಾರ್ತಿಕ ದೋಷಗಳಿಂದ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ 1,50,153 ಮತದಾರರಿಗೆ ಬಿಎಲ್‌ಒಗಳ ಮೂಲಕ ನೋಟೀಸು ಹಂಚಿಕೆಯಾಗಲಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ತಿಳಿಸಿದರು.ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಕರಡು ಮತದಾರರ ಮಾಹಿತಿ ನೀಡಿದರು.ಆ.24ರಿಂದ ಆರಂಭಗೊಂಡು ಸೆ.23ರ ಅವಧಿಯಲ್ಲಿ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ 1,50,153 ಮತದಾರರಿಗೆ ನೋಟೀಸು ಹಂಚಿಕೆಯಾಗಿ ಆ ಅವಧಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ವಿಚಾರಣೆಯ ದಿನಾಂಕ, ಸಮಯ ಮತ್ತು ಸ್ಥಳದ ವಿವರ ನೋಟೀಸಿನಲ್ಲಿ ಇರಲಿದ್ದು, ಬಿಎಲ್‌ಒಗಳು ನಿಗದಿತ ಅವಧಿಯೊಳಗೆ ನೋಟೀಸು ಮತದಾರರ ಮನೆಗಳಿಗೆ ತಲುಪಿಸಲಿದ್ದಾರೆ ಎಂದರು.ನೋಟೀಸಿನಲ್ಲಿ ತಿಳಿಸಲಾದ ನಿಗದಿತ ಅವಧಿಯೊಳಗೆ ಮತದಾರರು ಲಿಖಿತ ಮನವಿಯೊಂದಿಗೆ ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಯನ್ನು ಭೇಟಿಯಾಗಲು ಸಾಧ್ಯವಾಗದಿದ್ದಲ್ಲಿ ಮತ್ತೊಂದು ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿಯೂ ಮತದಾರರು ವಿಚಾರಣೆಗೆ ಹಾಜರಾಗದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗುತ್ತದೆ ಎಂದರು.

ಮತದಾರರು ವಿಚಾರಣೆಗೆ ಹಾಜರಾಗುವ ವೇಳೆ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿಕೊಂಡು ಬರಬೇಕು. ಮತದಾರರು ಆನ್‌ಲೈನ್‌ ಮೂಲಕ ದಾಖಲೆಗಳನ್ನು ಅಪ್‌ಲೋಡ್‌ ಮಾಡಬಹುದು. ಆದರೆ ಭೌತಿಕವಾಗಿ ಮತದಾರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿ ಎದುರು ಹಾಜರಾಗುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ದರ್ಶನ್‌ ಸ್ಪಷ್ಟಪಡಿಸಿದರು.

ಈಗಾಗಲೇ ಚುನಾವಣಾ ಆಯೋಗವು ತಿಳಿಸಿರುವಂತೆ, 1987ರ ಜು.1ಕ್ಕಿಂತ ಮೊದಲು ಜನಿಸಿದವರಾಗಿದ್ದರೆ ಸ್ವಂತಕ್ಕೆ ಸಂಬಂಧಿಸಿದಂತೆ ಜನ್ಮ ದಿನಾಂಕ ಮತ್ತು ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ದಾಖಲೆಒದಗಿಸಬೇಕು. 1987 ಜು. 1ರಿಂದ 2004ರ ಡಿ.2ರೊಳಗೆ ಜನಿಸಿದ್ದವರು ಜನ್ಮ ದಿನಾಂಕ, ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ದಾಖಲೆ ಜತೆಗೆ ತಂದೆ ಅಥವಾ ತಾಯಿಗೆ ಸಂಬಂಧಿಸಿದಂತೆ ಅವರ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳ ದೃಢೀಕರಿಸುವ ದಾಖಲೆ ಸಲ್ಲಿಸಬೇಕು ಎಂದರು.ದ.ಕ. ಜಿಲ್ಲೆಯ ಕರಡು ಪಟ್ಟಿಯಲ್ಲಿರುವ ಒಟ್ಟು ಮತದಾರರಲ್ಲಿ 8,07,600 ಮಂದಿ ಪುರುಷ, 8,38,768 ಮಂದಿ ಮಹಿಳಾ ಮತದಾರರು ಹಾಗೂ 19 ಮಂದಿ ತೃತೀಯ ಲಿಂಗಿಗಳು ಸೇರಿದ್ದಾರೆ. ಇದರಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ 2,17,959, ಮೂಡುಬಿದಿರೆಯಲ್ಲಿ 1,93,691, ಮಂಗಳೂರು ನಗರ ಉತ್ತರದಲ್ಲಿ 2,23,296, ಮಂಗಳೂರು ನಗರ ದಕ್ಷಿಣದಲ್ಲಿ 2,06,493, ಮಂಗಳೂರಿನಲ್ಲಿ 1,95,011, ಬಂಟ್ವಾಳದಲ್ಲಿ 2,11,744, ಪುತ್ತೂರಿನಲ್ಲಿ 2,01,574, ಸುಳ್ಯದಲ್ಲಿ 1,96,619 ಮತದಾರರಿದ್ದಾರೆ ಎಂದರು.

ಜಿಲ್ಲೆಯ ಎಸ್‌ಐಆರ್‌ ಪ್ರಕ್ರಿಯೆಯ ವಿವರ

2026ರ ಜೂ.16ರಂತೆ ಜಿಲ್ಲೆಯಲ್ಲಿ 18,03,766 ಮತದಾರರಿದ್ದು, 18,03,766 ಮಂದಿಗೂ (ಶೇ.100) ಎನ್ಯುಮರೇಶನ್‌ ಫಾರಂಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ 16,46,387 (ಶೇ.91.27) ಎನ್ಯುಮರೇಶನ್‌ ಫಾರಂಗಳನ್ನು ಡಿಜಿಟೈಸ್‌ ಮಾಡಲಾಗಿದೆ. 1,57,379 (ಶೇ.8.73) ಎಎಸ್‌ಡಿಡಿ ಮಾರ್ಕ್ ಮಾಡಿರುವ ಸಂಖ್ಯೆ, 11,124 (ಶೇ. 0.62) ಗೈರು ಮತದಾರರು, 82,988 (ಶೇ.4.60) ಶಾಶ್ವತವಾಗಿ ವಲಸೆ ಹೋಗಿರುವ ಮತದಾರರು, 45,318 (ಶೇ.2.51) ಮರಣ ಹೊಂದಿರುವ ಮತದಾರರು, 15,395 (ಶೇ.0.85) ಬೇರೆಡೆ ಮತಪತ್ರ ಹೊಂದಿರುವವರು, 2,554 (ಶೇ.0.14) ಇತರೆ ಎಂದು ಅವರು ಅಂಕಿ-ಅಂಶ ನೀಡಿದರು.2026ರ ಜೂನ್‌ವರೆಗಿನ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ, 2002ರ ಮತದಾರರ ಪಟ್ಟಿಗೆ ಮ್ಯಾಪಿಂಗ್‌ ಸಂದರ್ಭ ಹೆಸರು ಬಿಟ್ಟು ಹೋಗಿದ್ದಲ್ಲಿ ಅಥವಾ ಹೆಸರಿನಲ್ಲಿನ ಬದಲಾವಣೆ ಹಾಗೂ ಇತರ ಕಾರಣದಿಂದ ಕರಡು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿರುವ ಮತದಾರರಿಗೆ ನೋಟೀಸ್‌ ಬಂದರೆ ಅವರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದು ಎಂದರ್ಥವಲ್ಲ. ಈ ಬಗ್ಗೆ ಯಾವುದೇ ರೀತಿಯ ಅನಗತ್ಯ ಭಯ ಅಥವಾ ಅಂಜಿಕೆ ಮತದಾರರಿಗೆ ಬೇಡ. ದಾಖಲೆಗಳನ್ನು ಪಡೆದು ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟವಾಗುವಂತೆ ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ., ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಡಾ.ಸಂತೋಷ್‌ ಕುಮಾರ್‌, ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಅಕ್ಷತಾ ಮತ್ತಿತರರು ಇದ್ದರು. ಬಾಕ್ಸ್‌...ಸಾರ್ವಜನಿಕರು ತಮ್ಮ ವ್ಯಾಪ್ತಿಯ ಮತಗಟ್ಟೆಮಟ್ಟದ ಅಧಿಕಾರಿಗಳಲ್ಲಿ, ವೆಬ್‌ಪೋರ್ಟಲ್‌ www.ceokarnataka.kar.nic.in, https://voters.eci.gov.in ಅಥವಾ www.dk.nic.in ನಲ್ಲಿ ವಿವರಗಳನ್ನು ಪರಿಶೀಲಿಸಬಹುದು. ಮತದಾರರ ಸಹಾಯವಾಣಿ 1950 ಸಂಖ್ಯೆಗೆ ಕರೆಮಾಡಿಯೂ ಮಾಹಿತಿ ಪಡೆಯಬಹುದು ಎಂದರು.

​​