ಮಂಗಳೂರು: ದಕ್ಷಿಣ ಕನ್ನಡದಲ್ಲಿ ಕೊಲೆ, ಡ್ರಗ್ಸ್‌, ಅನೈತಿಕ ಪೊಲೀಸ್‌ಗಿರಿ ಸೇರಿದಂತೆ ಅಪರಾಧ ಕೃತ್ಯಗಳು ಕಡಿಮೆಯಾಗಿದ್ದು, ಇದು ಶಾಂತಿ ನೆಲೆಸುತ್ತಿರುವ ಸೂಚನೆ ಎಂದು ಗೃಹ ಸಚಿವ ಡಾ. ಪರಮೇಶ್ವರ್‌ ಹೇಳಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್‌ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಹಿಂದೆ ತಮ್ಮ ಮಕ್ಕಳನ್ನು ಮಂಗಳೂರಿಗೆ ಶಿಕ್ಷಣಕ್ಕೆ ಕಳುಹಿಸುವುದಿಲ್ಲ ಎಂದು ಜನರೇ ಹೇಳುತ್ತಿದ್ದರು. ಈಗ ಅಂಥ ವಾತಾವರಣವಿಲ್ಲ. ಪೊಲೀಸರು ಅಂಕಿ ಅಂಶಗಳ ಮೂಲಕ ಇಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ಮರುಕಳಿಸುತ್ತಿದೆ ಎಂದರು.ಅಶಾಂತಿ ಇದ್ದದ್ದು ನಿಜ:

ಕರಾವಳಿಯಲ್ಲಿ ಕೋಮು ಸಂಘರ್ಷದ ಕುರಿತು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹಸಚಿವ ಡಾ.ಜಿ. ಪರಮೇಶ್ವರ್‌, ಅವರೇನೇ ಹೇಳಲಿ. ನಾನು ಪೊಲೀಸ್‌ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಪಡೆದಿದ್ದೇನೆ. ಹಿಂದೆ ಅಶಾಂತಿಯ ವಾತಾವರಣ ಇದ್ದದಂತೂ ಸತ್ಯ. ಆದರೆ ಈಗ ಅದು ಬದಲಾವಣೆಯಾಗಿದೆ. ಇದನ್ನು ಗೃಹಸಚಿವನಾಗಿ ಪೊಲೀಸ್‌ ದೃಷ್ಟಿಕೋನದಿಂದ ಹೇಳುತ್ತಿದ್ದೇನೆ. ಪ್ರಿಯಾಂಕ್‌ ಖರ್ಗೆ ಅವರು ಯಾವ ದೃಷ್ಟಿಕೋನದಿಂದ ಹೇಳಿದರೋ ಗೊತ್ತಿಲ್ಲ ಎಂದು ಹೇಳಿದರು.

ಎಸ್‌ಐಟಿ ಅಂತಿಮ ವರದಿ ಬಳಿಕ ಬಹಿರಂಗ:

ಧರ್ಮಸ್ಥಳ ಗ್ರಾಮದ ಪ್ರಕರಣದಲ್ಲಿ ಎಸ್‌ಐಟಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಮಧ್ಯಂತರ ವರದಿ ಸಲ್ಲಿಕೆಯಾಗಿದ್ದು, ಅದನ್ನು ಸದನದಲ್ಲಿ ಹಾಗೂ ಇತರೆಡೆಗಳಲ್ಲಿ ತಿಳಿಸಿದ್ದೇನೆ. ಅಂತಿಮ ವರದಿ ಬಂದ ಬಳಿಕ ಅದನ್ನು ಸರ್ಕಾರ, ಕ್ಯಾಬಿನೆಟ್‌ ಮುಂದಿರಿಸಿ ಬಹಿರಂಗಗೊಳಿಸುವ ಕೆಲಸ ಮಾಡಲಿದ್ದೇವೆ. ಅಂತಿಮ ವರದಿ ಸಲ್ಲಿಕೆಯಾಗುವವರೆಗೆ ನಾವು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಗೃಹ ಸಚಿವರು ತಿಳಿಸಿದರು.


ಬೆಳ್ತಂಗಡಿಯ ಸುಮಂತ್‌ ಎಂಬ ಬಾಲಕನ ಅನುಮಾನಸ್ಪದ ಸಾವು ಪ್ರಕರಣ ತನಿಖೆ ಹಂತದಲ್ಲಿದೆ. ತನಿಖೆಯ ಹಂತದಲ್ಲಿ ಮಾಹಿತಿ ಬಹಿರಂಗ ಮಾಡಿದರೆ ಅಪರಾಧ ಮಾಡಿದವರು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಪೊಲೀಸರು ನನ್ನ ಬಳಿ ಹೇಳಿದ್ದರೂ ಅದನ್ನು ಸಾರ್ವಜನಿಕವಾಗಿ ಹೇಳುವಂತಿಲ್ಲ ಎಂದರು.ಬೆಟ್ಟಿಂಗ್‌ ಇಲ್ಲದ ಅಂಕ ಒಕೆ:

ಕರಾವಳಿಯಲ್ಲಿ ಸಾಂಪ್ರದಾಯಿಕ ಕೋಳಿ ಅಂಕದ ಮೇಲೆ ನಿರ್ಬಂಧದ ಕುರಿತು ಪ್ರತಿಕ್ರಿಯಿಸಿದ ಡಾ.ಜಿ. ಪರಮೇಶ್ವರ್‌, ಕಾನೂನು ಮಾಡಿದ ಬಳಿಕ ಸಂಪ್ರದಾಯದ ವಿಚಾರ ಬರುವುದಿಲ್ಲ. ಸಂಪ್ರದಾಯ ಎಂದು ಕಾನೂನು ಬಿಟ್ಟುಬಿಡಲು ಆಗುತ್ತದೆಯೇ? ನನ್ನಲ್ಲೂ ಕೋಳಿ ಅಂಕ ಪರವಾನಗಿ ಕೊಡಲು ಕೇಳಿದ್ದಾರೆ. ಕಾನೂನಿನಲ್ಲಿ ಬೆಟ್ಟಿಂಗ್‌ ಮಾಡಲು ಅವಕಾಶವಿಲ್ಲ, ಕಾನೂನು ಬಾಹಿರ ವಿಚಾರವನ್ನು ಅನುಮತಿಸಲಾಗುವುದಿಲ್ಲ. ಆದರೆ ಯಾವುದೇ ಬೆಟ್ಟಿಂಗ್‌ ಇಲ್ಲದೆ ಕೇವಲ ಸಂಪ್ರದಾಯಕ್ಕಾಗಿ ಕೋಳಿ ಅಂಕ ನಡೆಸುತ್ತಿರುವ ಕುರಿತು ಮನವರಿಕೆ ಆದರೆ ಪರವಾನಗಿ ನೀಡಬಹುದು ಎಂದರು.