ದಕ್ಷಿಣ ಕನ್ನಡ ಮುಂಗಾರು ಪೂರ್ವ ಮಳೆ ಅಬ್ಬರಕ್ಕೆ ವಿವಿಧೆಡೆ ಹಾನಿ

| Published : May 21 2025, 12:03 AM IST

ದಕ್ಷಿಣ ಕನ್ನಡ ಮುಂಗಾರು ಪೂರ್ವ ಮಳೆ ಅಬ್ಬರಕ್ಕೆ ವಿವಿಧೆಡೆ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮುಂಗಾರು ಪೂರ್ವ ಮಳೆಯ ಆರ್ಭಟ ಜೋರಾಗಿದ್ದು, ಧಾರಾಕಾರ ಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ. ಏರ್‌ಪೋರ್ಟ್‌ ರನ್‌ವೇಯಿಂದ ಭಾರೀ ನೀರು ಬಿಟ್ಟಿದ್ದರಿಂದ ಆದ್ಯಪಾಡಿ ಗ್ರಾಮಕ್ಕೆ ಹೋಗುವ ರಸ್ತೆ ಬದಿಯ ಮನೆಗಳಿಗೆ ಹಾನಿಯಾಗಿದ್ದಲ್ಲದೆ, ರಸ್ತೆಗೂ ಹಾನಿ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮುಂಗಾರು ಪೂರ್ವ ಮಳೆಯ ಆರ್ಭಟ ಜೋರಾಗಿದ್ದು, ಧಾರಾಕಾರ ಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ. ಏರ್‌ಪೋರ್ಟ್‌ ರನ್‌ವೇಯಿಂದ ಭಾರೀ ನೀರು ಬಿಟ್ಟಿದ್ದರಿಂದ ಆದ್ಯಪಾಡಿ ಗ್ರಾಮಕ್ಕೆ ಹೋಗುವ ರಸ್ತೆ ಬದಿಯ ಮನೆಗಳಿಗೆ ಹಾನಿಯಾಗಿದ್ದಲ್ಲದೆ, ರಸ್ತೆಗೂ ಹಾನಿ ಉಂಟಾಗಿದೆ. ವಿವಿಧೆಡೆ ಮರಗಳು ಉರುಳಿ ಸಂಚಾರಕ್ಕೆ ಅಡ್ಡಿ, ಮನೆಗಳಿಗೆ ಹಾನಿ ಸಂಭವಿಸಿದೆ.

ಮೇ 20, 21ರಂದು ಭಾರೀ ಮಳೆ ಸಾಧ್ಯತೆಯ ರೆಡ್ ಅಲರ್ಟ್‌ನ್ನು ಹವಾಮಾನ ಇಲಾಖೆ ಘೋಷಿಸಿದ್ದು, ಮಳೆಯ ತೀವ್ರತೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.

ಸೋಮವಾರ ರಾತ್ರಿಯಿಂದ ಆರಂಭವಾದ ಮಳೆ ಮಂಗಳವಾರ ಮಧ್ಯಾಹ್ನದವರೆಗೂ ಬಿಟ್ಟೂ ಬಿಟ್ಟು ಸುರಿಯುತ್ತಲೇ ಇತ್ತು. ಕೆಲವೊಮ್ಮೆ ಧಾರಾಕಾರವಾಗಿ ಸುರಿದಿದೆ. ಮಧ್ಯಾಹ್ನ ಬಳಿಕ ಕೊಂಚ ವಿರಾಮ ನೀಡಿತ್ತು. ಮುಂಗಾರು ಪೂರ್ವದಲ್ಲೇ ಮಳೆಗಾಲದ ವಾತಾವರಣ ಜಿಲ್ಲೆಯಲ್ಲಿ ಕಂಡುಬಂದಿದೆ.

ಅವಾಂತರದಿಂದ ಹಾನಿ:

ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ತುಂಬಿದ ಮಳೆ ನೀರನ್ನು ಏಕಾಏಕಿ ಹೊರಬಿಟ್ಟ ಪರಿಣಾಮ ಕೆಳಭಾಗದ ಅದ್ಯಪಾಡಿ ಗ್ರಾಮಕ್ಕೆ ತೆರಳುವ ರಸ್ತೆಯುದ್ದಕ್ಕೂ ಭಾರೀ ಕೆಸರು ನೀರು ತುಂಬಿ ವಾಹನ ಸವಾರರು ಪರದಾಡಿದರು. ಅಲ್ಲದೆ ನೀರಿನ ರಭಸದಿಂದ ಐದಾರು ಮನೆಗಳಿಗೂ ಹಾನಿ ಸಂಭವಿಸಿದೆ. ರಸ್ತೆಯ ಅಡಿ ಭಾಗ ಕುಸಿದು ರಸ್ತೆಗೂ ಹಾನಿಯಾಗಿದೆ.

ಕಳೆದ ವರ್ಷವೂ ಏರ್‌ಪೋರ್ಟ್‌ನ ನೀರನ್ನು ಏಕಾಏಕಿ ಬಿಟ್ಟಿದ್ದರಿಂದ ಇದೇ ಭಾಗದಲ್ಲಿ ತೀವ್ರ ಸಮಸ್ಯೆ ಸೃಷ್ಟಿಯಾಗಿತ್ತು. ಪರ್ಯಾಯ ಮಾರ್ಗೋಪಾಯ ಬ ಬೇಡಿಕೆ ಇದ್ದರೂ ಏರ್‌ಪೋರ್ಟ್‌ ಆಡಳಿತ ಅದನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಅದ್ಯಪಾಡಿ ಗ್ರಾಮಸ್ಥರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಪೈಪ್‌ಲೈನ್‌ ಮೂಲಕ ನೀರನ್ನು ಸುರಕ್ಷಿತ ಜಾಗಕ್ಕೆ ಬಿಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

10ಕ್ಕೂ ಅಧಿಕ ಮರಗಳು ಉರುಳಿ ಹಾನಿ:

ಮಂಗಳೂರು ನಗರದ ವಿವಿಧೆಡೆ ಹತ್ತಕ್ಕೂ ಹೆಚ್ಚು ಮರಗಳು ಉರುಳಿ ಹಾನಿ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ಬಜಾಲ್‌ನಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದ್ದರೆ, ಮರೋಳಿಯಲ್ಲಿ ಸುಮತಿ ಎಂಬವರ ಮನೆ ಮೇಲೆ ಗುಡ್ಡ ಕುಸಿದು ಹಾನಿಯಾಗಿದೆ. ಕದ್ರಿ ಪಾರ್ಕ್‌ನ ಸ್ಮಾರ್ಟ್‌ ರಸ್ತೆ ಪಕ್ಕದ ಮರ ಉರುಳಿ ಬೆಂಚೊಂದು ಮುರಿದಿದೆ. ಲಾಲ್‌ಬಾಗ್‌ ಸಮೀಪ ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರ ವಸತಿ ಗೃಹದ ಮುಂಭಾಗ ಮರ ಬಿದ್ದು ಅರ್ಧ ಗಂಟೆಗೂ ಅಧಿಕ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು.

ಮಣ್ಣಗುಡ್ಡೆಯ ಕೆನರಾ ಹೈಸ್ಕೂಲ್ ಬಳಿ ಮರದ ಗೆಲ್ಲು ರಸ್ತೆಗೆ ಮುರಿದು ಬಿದ್ದಿತ್ತು. ಕೊಡಿಯಾಲ್ ಗುತ್ತು ಬಳಿ ಅಪಾರ್ಟ್‌ಮೆಂಟ್‌ನ ಆವರಣ ಗೋಡೆ ಕುಸಿದಿದೆ. ಕಾವೂರು ಪೊಲೀಸ್ ಠಾಣೆಯ ಸಮೀಪ ರಸ್ತೆ ಅಡಿಭಾಗ ಕುಸಿದಿದ್ದು, ಸಂಚಾರ ಅಪಾಯಕಾರಿಯಾಗಿದೆ.ಕೆತ್ತಿಕಲ್‌ನಲ್ಲಿ ಮತ್ತೆ ಗುಡ್ಡ ಕುಸಿತ:

ಕಳೆದ ವರ್ಷ ಗುಡ್ಡ ಜರಿದು ಮೇಲ್ಭಾಗದ ಮನೆಗಳಿಗೆ ಅಪಾಯಕಾರಿಯಾಗಿದ್ದ ಕೆತ್ತಿಕಲ್‌ನಲ್ಲಿ ಈಗ ಮತ್ತೆ ಗುಡ್ಡ ಕುಸಿತ ಶುರುವಾಗಿ ಆತಂಕದ ವಾತಾವರಣ ತಲೆದೋರಿದೆ. ಈ ಭಾಗದಲ್ಲಿ ಮಳೆಗಾಲಕ್ಕೂ ಮೊದಲೇ ಮುನ್ನೆಚ್ಚರಿಕೆ ಕಾಮಗಾರಿ ಪೂರ್ತಿಗೊಳಿಸಬೇಕಿತ್ತು. ಆದರೆ ಅದು ಸಾಧ್ಯವಾಗದೆ ಇರುವುದರಿಂದ ಈ ಮಳೆಗಾಲದಲ್ಲೂ ಅದೇ ಆತಂಕದ ಪರಿಸ್ಥಿತಿ ಮುಂದುವರಿದಿದೆ.

ಉಕ್ಕೇರಿದ ಮ್ಯಾನ್‌ಹೋಲ್‌ಗಳು:

ಮುಂಗಾರು ಪೂರ್ವದ ಮಳೆಗೇ ನಗರದ ಪರಿಸ್ಥಿತಿ ಅಧೋಗತಿ ತಲುಪಿದೆ. ನಗರದ ಅನೇಕ ಕಡೆಗಳಲ್ಲಿ ಮಲ-ಮೂತ್ರ ಹರಿಯುವ ಒಳಚರಂಡಿ ಉಕ್ಕೇರಿ ಅಸಹನೀಯ ವಾತಾವರಣ ಸೃಷ್ಟಿಯಾಗಿತ್ತು. ಬಲ್ಮಠ, ಕದ್ರಿ, ಬಿಜೈ, ಬಂಟ್ಸ್‌ ಹಾಸ್ಟೆಲ್‌ ಸೇರಿದಂತೆ ವಿವಿಧೆಡೆ ಒಳಚರಂಡಿ ನೀರು ರಸ್ತೆಗೆ ಹರಿದಿತ್ತು. ಸ್ಥಳೀಯರು ಅನೇಕ ವರ್ಷಗಳಿಂದ ನಿರಂತರವಾಗಿ ಮಹಾನಗರ ಪಾಲಿಕೆಗೆ ದೂರು ನೀಡುತ್ತಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

-----------ಗುಡ್ಡ, ರಸ್ತೆ ಅಗೆತ, ಮಣ್ಣು ಸಾಗಾಟ ನಿಷೇಧ

ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಮಣ್ಣು ಕುಸಿತ, ಗುಡ್ಡ ಕುಸಿತ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಪ್ರಾಣಹಾನಿಯಾಗುವುದನ್ನು ತಡೆಗಟ್ಟಲು ಮೇ 21ರಿಂದ ಸೆ.30ರವರೆಗೆ ಯಾವುದೇ ರೀತಿಯ ರಸ್ತೆ ಅಗೆತ, ಗುಡ್ಡ ಅಗೆತ ಹಾಗೂ ಮಣ್ಣು ಅಗೆತದ ಕಾಮಗಾರಿ ನಡೆಸದಂತೆ ಮಹಾನಗರ ಪಾಲಿಕೆ ಸೂಚಿಸಿದೆ ಹಾಗೂ ಈ ಅವಧಿಯಲ್ಲಿ ಮಣ್ಣು ಸಾಗಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ.

ಈಗಾಗಲೇ ಪಾಲಿಕೆಯಿಂದ ಪರವಾನಗಿ ಪಡೆದು ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿದ್ದರೆ, ಕಾಮಗಾರಿಯ ಸ್ಥಳದಲ್ಲಿ ಅಕ್ಕಪಕ್ಕದ ಆಸ್ತಿಗಳಿಗೆ ಹಾನಿಯಾಗದ ರೀತಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಜರೂರಾಗಿ ಬ್ಯಾಕ್‌ ಫಿಲ್ಲಿಂಗ್‌ ಕಾಮಗಾರಿ ನಿರ್ವಹಿಸಿ, ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಯಾವುದಾದರೂ ಅನಾಹುತ ಸಂಭವಿಸಿ ಆಸ್ತಿಪಾಸ್ತಿಗಳಿಗೆ ಅಥವಾ ಪ್ರಾಣ ಹಾನಿಯಾದರೆ ಮಾಲೀಕರು ಹಾಗೂ ಸಂಬಂಧಪಟ್ಟ ಎಂಜಿನಿಯರ್‌ ಅವರನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.