: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‌ ಸೇವೆ ವಿಸ್ತಾರವಾಗಿದ್ದು, ಉತ್ತಮ ಸೇವೆ ನೀಡಲಾಗುತ್ತಿದೆ. ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವ ಕೆಲಸವನ್ನು ಚಾಲಕರು ಮಾಡಬೇಕಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನು ಅಪಘಾತ ರಹಿತ ಜಿಲ್ಲೆಯನ್ನಾಗಿ ಮಾಡೋಣ ಎಂದು ಮಂಗಳೂರು ಉಪ ಸಾರಿಗೆ ಆಯುಕ್ತ ಮುರುಗೇಂದ್ರ ಬಸವರಾಜ ಹೇಳಿದರು.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‌ ಸೇವೆ ವಿಸ್ತಾರವಾಗಿದ್ದು, ಉತ್ತಮ ಸೇವೆ ನೀಡಲಾಗುತ್ತಿದೆ. ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವ ಕೆಲಸವನ್ನು ಚಾಲಕರು ಮಾಡಬೇಕಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನು ಅಪಘಾತ ರಹಿತ ಜಿಲ್ಲೆಯನ್ನಾಗಿ ಮಾಡೋಣ ಎಂದು ಮಂಗಳೂರು ಉಪ ಸಾರಿಗೆ ಆಯುಕ್ತ ಮುರುಗೇಂದ್ರ ಬಸವರಾಜ ಹೇಳಿದರು.

ಅವರು ಬುಧವಾರ ಪತ್ರಿಕಾ ಭವನದಲ್ಲಿ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ, ದ.ಕ. ಬಸ್‌ ಮಾಲೀಕರ ಸಂಘದ ವತಿಯಿಂದ ಅಪಘಾತ ರಹಿತ ಚಾಲಕರಿಗೆ ಅಭಿನಂದನೆ, ಗೌರವಾರ್ಪಣೆ ಮತ್ತು ಬಸ್‌ ಪಾಸ್‌ ವಿತರಣೆ ಕಾರ್ಯಕ್ರಮದಲ್ಲಿ ಚಾಲಕರನ್ನು ಸನ್ಮಾನಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 321 ನಗರ ಸಾರಿಗೆ, 650 ಗ್ರಾಮಾಂತರ ಸರ್ವಿಸ್ ಬಸ್‌ಗಳು ಸೇರಿದಂತೆ 900-1,000 ಬಸ್‌ಗಳು ಜಿಲ್ಲೆಯಲ್ಲಿದೆ. ದ.ಕ‌. ಜಿಲ್ಲೆಗೆ ಬಸ್‌ಗಳು ಜೀವನಾಡಿ ಇದ್ದಂತೆ. ಜಿಲ್ಲೆಯ ಅಭಿವೃದ್ಧಿಗೆ ಸಾರಿಗೆ ವ್ಯವಸ್ಥೆ ಅವಲಂಬಿಸಲೇ ಬೇಕಾಗಿದೆ. ಅದನ್ನು ಖಾಸಗಿಯವರು ನೀಡುತ್ತಿದ್ದು, ಶೇ.99.99 ಸೇವೆ ನೀಡುತ್ತಿದ್ದಾರೆ. ಇಂದಿನ ಸನ್ಮಾನ ಕಾರ್ಯಕ್ರಮದ ಮೂಲಕ ಪತ್ರಕರ್ತರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗಲಿದೆ. ಅಪಘಾತ ರಹಿತ ಉತ್ತಮ ಸೇವೆ ನೀಡಲು ಸಂಘದವರಿಗೆ ತಿಳಿಸಿದ್ದೇವೆ. ಅದನ್ನು ಪಾಲಿಸುವ ಕಾರ್ಯ ಆಗುತ್ತಿದೆ ಎಂದರು.

ಮಂಗಳೂರು ಸಂಚಾರ ವಿಭಾಗ ಸಹಾಯಕ ಪೊಲೀಸ್‌ ಆಯುಕ್ತೆ ನಜ್ಮಾ ಫಾರೂಕಿ ಮಾತನಾಡಿ, ದೇಶದಲ್ಲಿ ದ.ಕ. ಜಿಲ್ಲೆ ಬ್ಯಾಂಕ್‌ ವ್ಯವಸ್ಥೆ ಹುಟ್ಟಲು ಕಾರಣವಾಗಿದೆ. ಅದೇ ರೀತಿ ಖಾಸಗಿ ಬಸ್ ವ್ಯವಸ್ಥೆ ಅದರದೇ ಆದ ಇತಿಹಾಸ ಕಂಡಿದೆ. ಪತ್ರಕರ್ತರು ಅಪಘಾತ ರಹಿತ ಚಾಲಕರ ಗುರುತಿಸಿ ಗೌರವಿಸಿದ್ದು, ಸಂಘದವರು ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಿದ್ದು ಉತ್ತಮ ಕೆಲಸ ಎಂದರು.

ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಅಜೀಜ್ ಪಾರ್ತಿಪಾಡಿ ಮಾತನಾಡಿ, ಪ್ರಜಾಪ್ರಭುತ್ವವನ್ನು ಸದೃಢವಾಗಿ ಉಳಿಸಿಕೊಳ್ಳುವಲ್ಲಿ ಮಾಧ್ಯಮ ಮಹತ್ವದ ಪಾತ್ರ ವಹಿಸಿದೆ ಎಂದರು.

ಚಾಲಕರಿಗೆ ಸನ್ಮಾನ:

ಕಳೆದ ಹಲವು ದಶಕಗಳಿಂದ ಬಸ್‌ ಚಾಲಕರಾಗಿದ್ದು ಅಪಘಾತ ರಹಿತ ಚಾಲಕರಾದ ಎಂ.ಪಿ.ಅಶೋಕ್, ಶಶಿಕುಮಾರ್, ಅಲೆಕ್ಸ್ ಕ್ರಾಸ್ತಾ, ಪ್ರವೀಣ್ ಕುಮಾರ್ ಅವರನ್ನು ಅಭಿನಂದಿಸಿ, ಗೌರವಿಸಲಾಯಿತು. ಪತ್ರಕರ್ತರಿಗೆ ಬಸ್‌ ಪಾಸ್‌ ವಿತರಿಸಲಾಯಿತು.

ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್‌ ಬಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ, ದ.ಕ. ಜಿಲ್ಲಾ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳಾದ ರಾಮಚಂದ್ರ ನಾಯಕ್‌, ದಿಲ್‌ರಾಜ್‌ ಫರ್ನಾಂಡಿಸ್‌ ಮತ್ತಿತರರು ಇದ್ದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್‌ ಇಂದಾಜೆ ಸ್ವಾಗತಿಸಿದರು.