ಸಾರಾಂಶ
ಬೆಳ್ತಂಗಡಿ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಆಗುತ್ತಿರುವ ಅಪಪ್ರಚಾರ ಹಾಗೂ ಸುಳ್ಳು ವದಂತಿ ಖಂಡಿಸಿ, ಜಾತಿ-ಮತ, ಪಕ್ಷ ಬೇಧ ಮರೆತು ಸರ್ವಸಹಕಾರಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಸಂಪೂರ್ಣ ಬೆಂಬಲಕ್ಕೆ ಹಾಗೂ ಧರ್ಮಸ್ಥಳದ ಪಾವಿತ್ರ್ಯತೆಯ ರಕ್ಷಣೆಗೆ ಸದಾ ಸಿದ್ಧರೂ, ಬದ್ಧರೂ ಆಗಿದ್ದೆವೆ. ಧರ್ಮಸ್ಥಳದ ಜೊತೆ ಸದಾ ಇರುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಭರವಸೆ ನೀಡಿದ್ದಾರೆ.
ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮಸ್ತ ಸಹಕಾರಿಗಳು ಭಾನುವಾರ ಧರ್ಮಸ್ಥಳಕ್ಕೆ ಧರ್ಮಜಾಗೃತಿ ಯಾತ್ರೆಯಲ್ಲಿ ಮೂರು ಸಾವಿರಕ್ಕೂ ಮಿಕ್ಕಿ ವಾಹನಗಳ ಜಾಥಾದಲ್ಲಿ ಬಂದು ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಧರ್ಮಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.ಎಲ್ಲರೂ ಸದಾ ಡಾ. ಹೆಗ್ಗಡೆ ಅವರ ಜೊತೆಗಿದ್ದು, ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಧರ್ಮಸ್ಥಳ ಕ್ಷೇತ್ರದ ರಕ್ಷಣೆ ಎಲ್ಲಾ ಭಕ್ತರು ಹಾಗೂ ಅಭಿಮಾನಿಗಳ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದ್ದು, ಇಂತಹ ಪವಿತ್ರ ಸೇವೆಯಿಂದ ಭಕ್ತರ ಮನಸ್ಸಿಗೂ ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.
ಸತ್ಯದ ಜೊತೆಗೆ ನಾವಿದ್ದೇವೆ: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಸತ್ಯ, ಧರ್ಮ, ನ್ಯಾಯ, ನೀತಿ ಸದಾ ನೆಲೆ ನಿಂತಿರುವ ಧರ್ಮಸ್ಥಳದ ರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಿದ್ದೇವೆ. ‘ಸತ್ಯಮೇವ ಜಯತೇ’ ಎಂಬಂತೆ ಸತ್ಯಕ್ಕೆ ಸದಾ ಜಯವಿದೆ. ಸತ್ಯದ ಜೊತೆಗೆ ನಾವಿದ್ದೇವೆ ಎಂದು ಡಾ. ಮೋಹನ ಆಳ್ವ ಭರವಸೆ ನೀಡಿದರು.ಹೆಗ್ಗಡೆ ನೇತೃತ್ವದಲ್ಲಿ ಹಲವು ಸಮಾಜಮುಖಿ ಸೇವಾಕಾರ್ಯಗಳ ಮೂಲಕ ಧರ್ಮಸ್ಥಳ ಇಂದು ಇಡೀ ದೇಶಕ್ಕೆ ಮಾದರಿ ಸಂಸ್ಥೆಯಾಗಿದೆ ಎಂದು ಅವರು ಶ್ಲಾಘಿಸಿದರು.
ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಭಕ್ತರು ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ, ಗೌರವ ಮತ್ತು ಅಭಿಮಾನ ತಮಗೆ ಹೆಚ್ಚಿನ ಉತ್ಸಾಹ ಮತ್ತು ಭರವಸೆ ಮೂಡಿಸಿದೆ ಎಂದರು.ಸಹಕಾರಿ ಕ್ಷೇತ್ರವನ್ನು ತಮ್ಮ ಮಾರ್ಗದರ್ಶಿತ್ವ ಮತ್ತು ನಾಯಕತ್ವದೊಂದಿಗೆ ಜನಪ್ರಿಯಗೊಳಿಸಿದ ರಾಜೇಂದ್ರ ಕುಮಾರ್ ಸೇವೆ, ಸಾಧನೆ ಶ್ಲಾಘಿಸಿ, ಸಮಾಜಕ್ಕೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಇಂತಹ ದಕ್ಷ, ಪ್ರಾಮಾಣಿಕ ಹಾಗೂ ನಿಷ್ವಾರ್ಥ ನಾಯಕರ ಅಗತ್ಯವಿದೆ. ಸಹಕಾರಿರಂಗವನ್ನು ರಾಜ್ಯಮಟ್ಟದ ಖ್ಯಾತಿಗೆ ಬೆಳೆಸಿರುವುದಕ್ಕೆ ಹೆಗ್ಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಮ್ಮ ಸಂಸದರ ನಿಧಿಯಿಂದ ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ೫ ಕೋಟಿ ರು. ಅನುದಾನ ನೀಡಲಾಗಿದೆ. ಅಲ್ಲದೆ ಧರ್ಮಸ್ಥಳದಿಂದ ಎಲ್ಲಾ ಸಹಕಾರಿ ಸಂಘಗಳಿಗೂ ಸಕಾಲಿಕ ನೆರವು, ಪ್ರೋತ್ಸಾಹ ನೀಡಲಾಗುತ್ತದೆ ಎಂದರು.ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಬೆಳಪು ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಸುಮಾರು ಹತ್ತು ಸಾವಿರ ಮಂದಿ ಜಾಥಾದಲ್ಲಿ ಬಂದಿದ್ದರು.
ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು.ಅಪಪ್ರಚಾರ ಮಾಡಿದವರಿಗೂ ಹೆಗ್ಗಡೆ ಅಭಿನಂದನೆ....ಮಾಧ್ಯಮಗಳಲ್ಲಿ ಅಪಪ್ರಚಾರ ಹಾಗೂ ಸುಳ್ಳು ವದಂತಿ ಪ್ರಸಾರದಿಂದ ತಮಗೆ ಆಘಾತಕರವಾದ ನೋವು ಉಂಟಾಗಿದೆ. ಆದರೆ ಧಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಭಗವಾನ್ ಚಂದ್ರನಾಥ ಸ್ವಾಮಿ ಇಬ್ಬರೂ ಶಾಂತ ಸ್ವಭಾವದವರಾಗಿದ್ದು, ದೇವರ ಅನುಗ್ರಹ, ಧರ್ಮದೇವತೆಗಳು ಮತ್ತು ಅಣ್ಣಪ್ಪ ಸ್ವಾಮಿಯ ಅಭಯದಿಂದ ನೋವು ಮರೆಯಲು ಸಾಧ್ಯವಾಗಿದೆ ಎಂದರು. ಅಪವಾದ, ಅಪಪ್ರಚಾರ ಮಾಡಿದವರಿಗೂ ಅಭಿನಂದನೆ ಹೇಳಿದ ಹೆಗ್ಗಡೆ ಅವರು, ಅವರಿಂದಾಗಿ ಪ್ರತಿದಿನ ಸಾವಿರಾರು ಮಂದಿ ಧರ್ಮಸ್ಥಳಕ್ಕೆ ಬಂದು ತಮ್ಮ ಪ್ರೀತಿ-ವಿಶ್ವಾಸ, ಗೌರವ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.