೧೨ರಂದು ದಕ್ಷಿಣ ಕಾಶಿ ಕಾಲಕಾಲೇಶ್ವರ ಜಾತ್ರೆ

| Published : Apr 08 2025, 12:35 AM IST

ಸಾರಾಂಶ

. ಉತ್ತರ ಕರ್ನಾಟಕ ಅಸಂಖ್ಯಾತ ಭಕ್ತರ ಆರಾಧ್ಯ ಕುಲದೈವ ದಕ್ಷಿಣ ಕಾಶಿ ಪ್ರಸಿದ್ಧಿ ಪಡೆದ ಕಾಲಕಾಲೇಶ್ವರ ಜಾತ್ರಾ ರಥೋತ್ಸವ ಏ.೧೨ರ ದವನದ ಹುಣ್ಣಿಮೆಯಂದು ಸಂಜೆ ೫.೨೦ಕ್ಕೆ ನಡೆಯಲಿದೆ.

ಗಜೇಂದ್ರಗಡ: ಉತ್ತರ ಕರ್ನಾಟಕ ಅಸಂಖ್ಯಾತ ಭಕ್ತರ ಆರಾಧ್ಯ ಕುಲದೈವ ದಕ್ಷಿಣ ಕಾಶಿ ಪ್ರಸಿದ್ಧಿ ಪಡೆದ ಕಾಲಕಾಲೇಶ್ವರ ಜಾತ್ರಾ ರಥೋತ್ಸವ ಏ.೧೨ರ ದವನದ ಹುಣ್ಣಿಮೆಯಂದು ಸಂಜೆ ೫.೨೦ಕ್ಕೆ ನಡೆಯಲಿದೆ.

ಯುಗಾದಿ ದಿನದಿಂದಲೇ ಮದುವೆ ಆಮಂತ್ರಣ ಪತ್ರಿಕೆ ಕಟ್ಟುವುದು, ನಿತ್ಯ ರುದ್ರಾಭಿಷೇಕ, ನಂದಿ ಧ್ವಜಾರೋಹಣ, ಪಲ್ಲಕ್ಕಿ ಜತೆ ಇತರ ಧಾರ್ಮಿಕ ಕಾರ್ಯಗಳು ಕ್ಷೇತ್ರದಲ್ಲಿ ನಡೆದಿವೆ. ಪ್ರಕೃತಿ ನಿರ್ಮಿತ ಏಕ ಶಿಲಾ ರುದ್ರರಮಣಿಯ ಬೆಟ್ಟದಲ್ಲಿ ಲಿಂಗ ಸ್ವರೂಪಿ ಕಾಲಕಾಲೇಶ್ವರ ತ್ರಿಕಾಲ ಪೂಜಿತ. ಪ್ರತಿವರ್ಷ ದವನದ ಹುಣ್ಣಿಮೆಯಂದು ಜಾತ್ರೆ ನಡೆಯುವದು ಭಕ್ತರ ಮನದಲ್ಲಿ ಶಾಶ್ವತ ನೆಲೆಯೂರಿದೆ.

ಘಮಗಮಿಸುವ ಸುವಾಸನೆ ದವನದ ಸಸ್ಯವನ್ನು ದೇವರಿಗೆ ಅರ್ಪಿಸಿ ಮುಡಿದುಕೊಳ್ಳುವದು ಐತಿಹಾಸಿಕ ಪರಂಪರೆ ಜಾತ್ರೆ ಸಂಪ್ರದಾಯ ವಿಶೇಷ. ಅಷ್ಟಮಿಯಿಂದ ಚೈತ್ರ ಬಹುಳದ ವರೆಗೆ ಉತ್ಸವ ಮೂರ್ತಿ ಆರೋಹಣ ಉತ್ಸವ ನಡೆಯಲಿದೆ. ಕಳಸ ಹಾಗೂ ರಥಕ್ಕೆ ಹಗ್ಗ ರಾಜೂರ ಮತ್ತು ಹಿರೇಮ್ಯಾಗೇರಿ ಗ್ರಾಮದ ಭಕ್ತರು ಮೆರವಣಿಗೆ ಮೂಲಕ ತರುವುದು ವಾಡಿಕೆ. ದವನದ ಹುಣ್ಣಿಮೆಯ ಪೂರ್ಣಿಮಾ ದಿನ ವಿಶೇಷ ಪೂಜೆ, ದವನಾರ್ಪಣ ಆದ ಬಳಿಕ ಸಂಜೆ ಆಕಾಶದಲ್ಲಿ ನಕ್ಷತ್ರ ಕಂಡ ಬಳಿಕ ಧರ್ಮದರ್ಶಿಗಳು ತೂಪಾಕಿ ಹಾರಿಸುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡುವ ವಿಶಿಷ್ಟ ಪರಂಪರೆ ಮುಂದುವರೆಸಲಾಗಿದೆ. ಗಜೇಂದ್ರಗಡ ರಸ್ತೆ ಹೊಂದಿಗೊಂಡ ಪಾದಗಟ್ಟಿ ತಲುಪಿ ರಥವು ಮರಳಿದ ನಂತರ ಪಲ್ಲಕ್ಕಿಯೊಂದಿಗೆ ದೇವಾಲಯಕ್ಕೆ ಮರಳುವುದು.ಪೌರಾಣಿಕ ಹಿನ್ನೆಲೆ: ಕಾಲಕಾಲೇಶ್ವರನ ಲಿಂಗ ದರ್ಶನ ಮಾಡಿದರೆ, ಕಾಶಿಯ ವಿಶ್ವೇಶ್ವರನ ದರ್ಶನ ಮಾಡಿದಷ್ಟು ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆ ಇಂದಿಗೂ ಭಕ್ತರಲ್ಲಿದೆ. ಗಜಾಸುರನ ಸಂಹಾರಕ್ಕಾಗಿ ಕಾಶಿಯಿಂದ ಇಲ್ಲಿಗೆ ಬಂದು ನೆಲೆಸಿದ ಶಿವನ ಕ್ಷೇತ್ರವೇ "ದಕ್ಷಿಣ ಕಾಶಿ ". ಭಕ್ತರ ಇಷ್ಟಾರ್ಥದಂತೆ ಗಜಾಸುರನನ್ನು ಸಂಹರಿಸಿ ಸ್ವಯಂಭೂ ಲಿಂಗವಾಗಿ ನೆಲೆಸಿದ ಈಶ್ವರನೇ ಶಿವ ಕಾಲಕಾಲೇಶ್ವರನಾಗಿ ನೆಲೆಯೂರಿದ್ದಾನೆ.

ಏ.೧೧ರಂದು ಮಹಾರಥಕ್ಕೆ ಕಳಸಾರೋಹಣ ಬಳಿಕ ಕಾಲಕಾಲೇಶ್ವರ ಬೋರಾದೇವಿಯವರ ನಂದಿ ವಾಹನದಲ್ಲಿ ಕಲ್ಯಾಣೋತ್ಸವ ಜರುಗಲಿದ್ದು, ಏ.೧೨ರಂದು ಬೆಳಗ್ಗೆ ಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ದವನಾರ್ಪಣೆ ಸೇವೆ ಸಂಜೆ ಮಹಾರಥೋತ್ಸವ ನಡೆಯಲಿದೆ. ಏ.೧೩ರಂದು ಕಡುಬಿನ ಕಾಳಗ ಸ್ವಾಮಿಗೆ ನಿತ್ಯ ರುದ್ರಾಭಿಷೇಕ ಸಂಜೆ ಕಾಲಕಾಲೇಶ್ವರ ಸ್ವಾಮಿಗೆ ಬೋರಾದೇವಿಯನ್ನು ಒಪ್ಪಿಸುವ ಕಾರ್ಯಕ್ರಮ ಬಳಿಕ ತೊಟ್ಟಿಲು, ಗುಲಾಲ ಸೇವೆ ನಡೆಯಲಿದೆ. ಏ.೧೪ರಂದು ಪುಷ್ಕರ್ಣಿ ತೀರ್ಥದಲ್ಲಿ ಕಾಲೇಶನಿಗೆ ಹಾಗೂ ಬೋರಾದೇವಿಗೆ ಅಮೃತ ಸ್ನಾನ ನಡೆಯಲಿದ್ದು, ಭಾವೈಕ್ಯತೆಯ ಸಂಕೇತವಾಗಿರುವ ಈ ಜಾತ್ರೆಯು ಐದು ದಿನಗಳ ವರೆಗೆ ನಡೆಯಲಿದೆ.