ಸಾರಾಂಶ
ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೂದಿಹಾಳ್ ಗೇಟ್‍ನ ಬಳಿ ಮುಂದೆ ಚಲಿಸುತ್ತಿದ್ದ ಲಾರಿಯೊಂದರ ವೇಗಕ್ಕೆ ತುರ್ತು ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿ ಬರುತ್ತಿದ್ದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ.
ದಾಬಸ್‍ಪೇಟೆ: ಎರಡು ಲಾರಿಗಳು ಹಾಗೂ ಒಂದು ಟಾಟಾ ಏಸ್ ಸರಕು ವಾಹನದ ನಡುವೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೂದಿಹಾಳ್ ಗೇಟ್ ನ ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ- 48ರಲ್ಲಿ ನಡೆದಿದೆ. ಶಿರಾ ಮೂಲದ ತ್ರಿವೇಣಿ (25) ಮೃತಪಟ್ಟ ಮಹಿಳೆಯಾಗಿದ್ದು, ಶಿವಕುಮಾರ್ (32) ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ.
ಘಟನಾ ವಿವರ: ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೂದಿಹಾಳ್ ಗೇಟ್‍ನ ಬಳಿ ಮುಂದೆ ಚಲಿಸುತ್ತಿದ್ದ ಲಾರಿಯೊಂದರ ವೇಗಕ್ಕೆ ತುರ್ತು ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿ ಬರುತ್ತಿದ್ದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಅದೇ ವೇಳೆ ಲಾರಿಗಳ ಹಿಂದಿದ್ದ ಟಾಟಾ ಏಸ್ ವಾಹನ ಕೂಡ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಶಿರಾದಿಂದ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದ ಟಾಟಾ ಏಸ್ ವಾಹನದಲ್ಲಿದ್ದ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದರ ಪರಿಣಾಮ ಆತನನ್ನು ನೆಲಮಂಗಲದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸರಣಿ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ತೀವ್ರವಾಗಿತ್ತು. ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.