ಬೈಲುಕುಪ್ಪೆ ಟಿಬೇಟಿಯನ್‌ ಶಿಬಿರಕ್ಕೆ ದಲಾಯಿಲಾಮ ಭೇಟಿ

| Published : Jan 06 2025, 01:01 AM IST

ಬೈಲುಕುಪ್ಪೆ ಟಿಬೇಟಿಯನ್‌ ಶಿಬಿರಕ್ಕೆ ದಲಾಯಿಲಾಮ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಟಿಬೇಟಿಯನ್‌ ಧಾರ್ಮಿಕ ಗುರು 14ನೇ ದಲಾಯಿಲಾಮ ಭಾನುವಾರ ಮಧ್ಯಾಹ್ನ ಕುಶಾಲನಗರ ಸಮೀಪ ಬೈಲುಕುಪ್ಪೆ ಟಿಬೇಟಿಯನ್‌ ನಿರಾಶ್ರಿತ ಶಿಬಿರಕ್ಕೆ ಆಗಮಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಟಿಬೇಟಿಯನ್ ಧಾರ್ಮಿಕ ಗುರು ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ 14ನೇ ದಲಾಯಿಲಾಮ ಭಾನುವಾರ ಮಧ್ಯಾಹ್ನ ಕುಶಾಲನಗರ ಸಮೀಪದ ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತ ಶಿಬಿರಕ್ಕೆ ಆಗಮಿಸಿದ ಸಂದರ್ಭ ಅವರ ಸಾವಿರಾರು ಸಂಖ್ಯೆಯ ಅನುಯಾಯಿಗಳು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.

ಟಿಬೇಟಿಯನ್ನರ ನಡೆದಾಡುವ ದೈವ ಎಂದೇ ನಂಬಿರುವ ಟಿಬೆಟನ್ ಪರಮೋಚ್ಚ ಗುರು ದಲಾಯಿಲಾಮ ಅವರು ವಿಶ್ರಾಂತಿಗಾಗಿ ಬೈಲುಕುಪ್ಪೆಗೆ ಆಗಮಿಸಿರುವುದಾಗಿ ಶಿಬಿರದ ಪ್ರಮುಖರು ಮಾಹಿತಿ ನೀಡಿದ್ದಾರೆ.

ಬೈಲುಕುಪ್ಪೆ ಶಿಬಿರದ ತಶಿಲೊಂಪೊ ಬೌದ್ಧ ಮಂದಿರದಲ್ಲಿ ಮುಂದಿನ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬೈಲುಕುಪ್ಪೆಗೆ ಆಗಮಿಸಿದ ದಲಾಯಿಲಾಮ ಅವರನ್ನು ಮೈಸೂರು ಜಿಲ್ಲಾಡಳಿತ ಹಾಗೂ ಶಿಬಿರದ ಪ್ರತಿನಿಧಿಗಳು ಬರಮಾಡಿಕೊಂಡರು.

ವೈದ್ಯರ ಸಲಹೆ: ಹಿಮಾಚಲ ಪ್ರದೇಶದ ಧರ್ಮಶಾಲಾ ಟಿಬೇಟಿಯನ್ ಕೇಂದ್ರ ಹೆಚ್ಚಿನ ಶೀತ ವಾತಾವರಣ ಇರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಬೈಲುಕುಪ್ಪೆಗೆ ವಿಶ್ರಾಂತಿಗಾಗಿ ಆಗಮಿಸಿರುವುದಾಗಿ ಟಿಬೆಟಿಯನ್ ಶಿಬಿರದ ಪ್ರತಿನಿಧಿ ಜಿಗ್ಮೆ ಸುಲ್ಟರೀಂ ಮಾಹಿತಿ ನೀಡಿದ್ದಾರೆ. ದಲಾಯಿಲಾಮ ಅವರಿಗೆ ಅಮೆರಿಕದಲ್ಲಿ ಹೆಚ್ಚಿನ ಚಿಕಿತ್ಸೆ ನಡೆದಿದ್ದು ಈ ಸಂಬಂಧ ಹೆಚ್ಚಿನ ವಿಶ್ರಾಂತಿ ಅಗತ್ಯತೆ ಇದೆ ಎಂದು ಸುದ್ದಿಗಾರರೊಂದಿಗೆ ತಿಳಿಸಿದರು. ದಲೈಲಾಮ ಸ್ವಲ್ಪಕಾಲ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ವಿಶ್ರಾಂತಿ ಪಡೆಯಲು ತೆರಳಿದರು.

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ಬಂದೋಬಸ್ತ್ ಕಲ್ಪಿಸಲಾಗಿತ್ತು.