ದಲಿತ ಸಿಎಂ ಹೋರಾಟಕ್ಕೆ ಚಾಲನೆ: ಎಂ.ವೆಂಕಟಸ್ವಾಮಿ

| Published : Nov 12 2025, 01:30 AM IST

ಸಾರಾಂಶ

ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ಪ್ರಭಾವಿ ವ್ಯಕ್ತಿಗಳು ರಾಜ್ಯದಲ್ಲಿ ಮಂತ್ರಿಗಳಾಗಿದ್ದರು. ಆದರೆ, ಈವರೆವಿಗೂ ದಲಿತ ವ್ಯಕ್ತಿಯೊಬ್ಬರಿಗೆ ಮುಖ್ಯಮಂತ್ರಿ ಸ್ಥಾನಮಾನ ನೀಡಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷಗಳ ಕಾಲ ಮುಂದುವರಿದಲ್ಲಿ ಯಾವುದೇ ಅಪಸ್ವರ ಇಲ್ಲ. ಆದರೆ, ಬದಲಾವಣೆಯಾದಲ್ಲಿ ದಲಿತರಿಗೆ ಸ್ಥಾನಮಾನ ನೀಡಬೇಕೆಂಬುದು ನಮ್ಮ ಆಶಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ದಲಿತ ಮುಖ್ಯಮಂತ್ರಿ ಹೋರಾಟಕ್ಕೆ ಚಾಲನೆ ನೀಡಲಾಗಿದೆ. ಈಗಲಾದರೂ ದಲಿತ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಒತ್ತಾಯಿಸಿದರು.

ರಾಜ್ಯ ಸರ್ಕಾರದಲ್ಲಿ ನವೆಂಬರ್ ಕ್ರಾಂತಿ ಬಗ್ಗೆ ಚರ್ಚೆ ನಡೆಯುತ್ತಿದೆ. ಜೊತೆಗೆ ಸಿದ್ದರಾಮಯ್ಯ ಅವರು ಬದಲಾವಣೆಯಾಗತ್ತಾರೆಂಬ ವ್ಯಾಪಕ ಚರ್ಚೆಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ದಲಿತ ನಾಯಕರೊಬ್ಬರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ಪ್ರಭಾವಿ ವ್ಯಕ್ತಿಗಳು ರಾಜ್ಯದಲ್ಲಿ ಮಂತ್ರಿಗಳಾಗಿದ್ದರು. ಆದರೆ, ಈವರೆವಿಗೂ ದಲಿತ ವ್ಯಕ್ತಿಯೊಬ್ಬರಿಗೆ ಮುಖ್ಯಮಂತ್ರಿ ಸ್ಥಾನಮಾನ ನೀಡಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷಗಳ ಕಾಲ ಮುಂದುವರಿದಲ್ಲಿ ಯಾವುದೇ ಅಪಸ್ವರ ಇಲ್ಲ. ಆದರೆ, ಬದಲಾವಣೆಯಾದಲ್ಲಿ ದಲಿತರಿಗೆ ಸ್ಥಾನಮಾನ ನೀಡಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಪ್ರತಿಪಾದಿಸಿದರು.

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಆದರೆ, ಅವರನ್ನು ಮುಂದೆ ೨೦೨೮ರಲ್ಲಿ ಮುಖ್ಯಮಂತ್ರಿ ಮಾಡಲಿ, ಸದ್ಯ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದಲ್ಲಿ ತುಂಬಾ ಸಂತೋಷ, ಅವರನ್ನು ಹೊರತುಪಡಿಸಿದಂತೆ ಡಾ. ಜಿ. ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆ.ಎಚ್. ಮುನಿಯಪ್ಪ ಅವರಲ್ಲಿ ಯಾರಾದರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿದರು.

ನ. ೧೯ರಂದು ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದು, ಅಂದು ಅವರಿಗೆ ಮನವಿ ಸಲ್ಲಿಸಿ ರಾಜ್ಯದಲ್ಲಿ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿಯಾಗಿ ಮಾಡುವಂತೆ ಆಗ್ರಹಿಸುವುದಾಗಿ ತಿಳಿಸಿದರು.

ಅನುದಾನ ವಾಪಸ್ಸು ಕೊಡುವವರೆಗೂ ಹೋರಾಟ:

ರಾಜ್ಯದ ಬಜೆಟ್‌ನಲ್ಲಿ ದಲಿತರಿಗೆ ಮೀಸಲಾಗಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಈಗಾಗಲೇ ಹೋರಾಟ ನಡೆಸಿದ್ದೇವೆ. ಸುಮಾರು ೪೬ ಸಾವಿರ ಕೋಟಿಯಷ್ಟು ದಲಿತರಿಗೆ ಸೇರಿದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರುವ ರಾಜ್ಯಸರ್ಕಾರದ ಕ್ರಮವನ್ನು ಖಂಡಿಸಿದರು.

ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಸಚಿವರ ನಿವಾಸದ ಮುಂದೆ ಹೋರಾಟ ನಡೆಸಿದ್ದೇವೆ. ಈ ಅನುದಾನ ವಾಪಸ್ಸು ಬರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಘೋಷಿಸಿದರು.

ದಲಿತ ಮುಖಂಡರಾದ ಅಶ್ವತ್ಥ, ನರಸಿಂಹಮೂರ್ತಿ, ಎಂ.ವಿ.ಕೃಷ್ಣ, ಎಚ್.ಬಿ.ಗಂಗರಾಜು, ಎಸ್.ಪಿ. ನಾರಾಯಣಸ್ವಾಮಿ ಇತರರು ಗೋಷ್ಠಿಯಲ್ಲಿದ್ದರು.