- ಸರಿಯಾದ ಸಮಯದಲ್ಲಿ ಹೈಕಮಾಂಡ್ ಸೂಕ್ತ ನಿರ್ಣಯ: ವಿಶ್ವಾಸ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಲಿತ ಮುಖ್ಯಮಂತ್ರಿ ಮಾಡುವ ಅಧಿಕಾರ ಕಾಂಗ್ರೆಸ್‌ ಪಕ್ಷದಲ್ಲಿ ಈಗ ದಲಿತರ ಕೈಯಲ್ಲೇ ಇದೆ. ನಮ್ಮ ಪಕ್ಷಕ್ಕೆ ದಲಿತ ಹೈಕಮಾಂಡ್ ಇದೆ. ಸರಿಯಾದ ಸಮಯದಲ್ಲಿ ಸೂಕ್ತ ನಿರ್ಣಯವನ್ನು ಹೈಕಮಾಂಡ್ ಕೈಗೊಳ್ಳಲಿದೆ. ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಯಾರು, ಯಾರ ತಲೆ ಮೇಲೆ ಕೈ ಇಟ್ಟು, ಆಣೆ ಮಾಡಿದ್ದಾರೋ ಗೊತ್ತಿಲ್ಲ. ಅದನ್ನು ನಾವ್ಯಾರೂ ನೋಡಿಯೂ ಇಲ್ಲ ಎಂದರು.


ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಹಿರಿಯ ನಾಯಕರಾಗಿದ್ದ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆಯಂದಾಗಿ ತೆರವಾಗಿರುವ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಲಿದೆ. ಯಾರನ್ನು ಅಭ್ಯರ್ಥಿಯಾಗಿ ಮಾಡಬೇಕೆಂಬ ಬಗ್ಗೆ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನರ ಜೊತೆಗೆ ಚರ್ಚಿಸಿಯೇ, ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

ದಕ್ಷಿಣ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುವುದಾ? ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲೇ ನಮಗೆ ಗೆಲ್ಲಿಸಲಿಲ್ಲ. ಅಂತಹದ್ದರಲ್ಲಿ ಸಾಮಾನ್ಯ ವರ್ಗದ ದಕ್ಷಿಣ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದಾ? ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೆಟ್ ಕೊಟ್ಟರೂ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗಾಗಿ ನಾವೆಲ್ಲರೂ ಕೆಲಸ ಮಾಡುತ್ತೇವೆ. ಮುಸ್ಲಿಮರು ಸೇರಿದಂತೆ ಯಾರನ್ನೂ ಕಾಂಗ್ರೆಸ್ ಪಕ್ಷ ಕಡೆಗಣಿಸಿಲ್ಲ, ಕಡೆಗಣಿಸುದೂ ಇಲ್ಲ ಎಂದು ಎಚ್.ಆಂಜನೇಯ ಸ್ಪಷ್ಟಪಡಿಸಿದರು.

- - -

(ಪೋಟೋ: ಆಂಜನೇಯ)