ಸಾರಾಂಶ
ಕನ್ನಡಪ್ರಭ ವಾರ್ತೆ ವಿಧಾನಪರಿಷತ್
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣ ಬಳಕೆ ಮಾಡಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ, ವಾಗ್ವಾದಿಂದ ಗದ್ದಲದ ವಾತಾವರಣ ಉಂಟಾಗಿ ಎರಡು ಬಾರಿ ಸದನ ಮುಂದೂಡಿದ ಪ್ರಸಂಗ ನಡೆಯಿತು.ಏಕಕಾಲದಲ್ಲಿ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪ, ಏರಿದ ಧ್ವನಿಯಲ್ಲಿ ಮಾತನಾಡತೊಡಗಿದರು. ಸಭಾಪತಿ ಬಸವರಾಜ ಹೊರಟ್ಟಿ ಅವರು ಸದಸ್ಯರಿಗೆ ಕೂರುವಂತೆ ಸಾಕಷ್ಟು ಬಾರಿ ಹೇಳಿದರೂ ಬಹುತೇಕರು ಕೇಳಲಿಲ್ಲ. ಇದರಿಂದ ತೀವ್ರ ಬೇಸರಗೊಂಡ ಸಭಾಪತಿ ಎರಡು ಬಾರಿ ಸದನವನ್ನು ಮುಂದೂಡಿದರು.
ಪ್ರಶ್ನೋತ್ತರ ವೇಳೆ ಬಿಜೆಪಿಯ ಹೇಮಲತಾ ನಾಯಕ್ ಹಾಗೂ ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರು ಗ್ಯಾರಂಟಿ ಯೋಜನೆಗೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣ ಬಳಸಲಾಗುತ್ತಿದೆ, ಇದು ದಲಿತರಿಗೆ ಮಾಡಿದ ಅನ್ಯಾಯ ಎಂದರು.ಈ ಬಗ್ಗೆ ಸುದೀರ್ಘವಾಗಿ ಉತ್ತರಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಗ್ಯಾರಂಟಿ ಯೋಜನೆಗೆ ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಹಿಂದೆಯೂ ಬಳಸಿಲ್ಲ, ಮುಂದೆಯೂ ಬಳಸುವುದಿಲ್ಲ. ಕೇಂದ್ರ ಸರ್ಕಾರ 50 ಲಕ್ಷ ಕೋಟಿ ರು. ಬಜೆಟ್‌ನಲ್ಲಿ ಪರಿಶಿಷ್ಟರಿಗೆ 12 ಲಕ್ಷ ಕೋಟಿ ರು. ಅನುದಾನ ಮೀಡಲಿಡಬೇಕು, ಆದರೆ ಪರಿಶಿಷ್ಟ ಜಾತಿಗೆ 1.69 ಲಕ್ಷ , ಪರಿಶಿಷ್ಟ ಪಂಗಡಕ್ಕೆ 1.29 ಲಕ್ಷ ಕೋಟಿ ಅನುದಾನ ನೀಡಿರುವುದು ನ್ಯಾಯವೇ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಎಸ್‌ಸಿಪಿ, ಟಿಎಸ್‌ಪಿ ಹಣ ಬಳಸಿಕೊಂಡಿರುವುದಾಗಿ ಸದನದಲ್ಲೇ ಒಪ್ಪಿಕೊಂಡಿದ್ದಾರೆ ಎಂದರು. ಈ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಿದೆ, ಆದರೆ ರಾಜಕಾರಣ ಮಾಡಲು ಹೊರಟರೆ ನಾವು ಅದನ್ನೇ ಮಾಡಬೇಕಾಗುತ್ತದೆ ಎಂದು ಹೇಳಿದರು.
ಆದರೆ ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ಟಿ.ಎ.ಶರವಣ ಮತ್ತು ಹೇಮಲತಾ ನಾಯಕ್, ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿ ಪ್ರತ್ಯೇಕವಾಗಿ 52 ಸಾವಿರ ಕೋಟಿ ರು. ಮೀಸಲಿಟ್ಟ ಮೇಲೆ ಎಸ್‌ಸಿಪಿ, ಟಿಎಸ್‌ಪಿ ಹಣ ಯಾಕೆ ಅಗತ್ಯವಿದೆ, ಆಯವ್ಯಯದಲ್ಲಿ ಮೀಸಲಿಟ್ಟ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು. ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಗ್ಯಾರಂಟಿ ಯೋಜನೆಗೆ ಪರಿಶಿಷ್ಟರ ಹಣ ಯಾಕೆ ಬೇಕು, ಬೇರೆ ಅನುದಾನ ಇಲ್ಲವೇ ಎಂದು ಪ್ರಶ್ನಿಸಿದರು.ಆಗ ಆಡಳಿತ ಪಕ್ಷದ ಸದಸ್ಯರು ಪ್ರಶ್ನೋತ್ತರ ವೇಳೆ ಚರ್ಚೆಗೆ ಅವಕಾಶವಿಲ್ಲ ಎಂದು ಆಕ್ಷೇಪಿಸುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ಎದ್ದು ನಿಂತು ಮಾತನಾಡತೊಡಗಿದರು. ತೀವ್ರ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರು ಸಾಕಷ್ಟು ಮನವಿ ಮಾಡಿದರೂ ಸದಸ್ಯರು ಎದ್ದು ನಿಂತು ಮಾತನಾಡತೊಡಗಿದರು. ಗದ್ದಲದ ವಾತಾವರಣ ಉಂಟಾಗಿದ್ದರಿಂದ 10 ನಿಮಿಷ ಕಲಾಪ ಮುಂದೂಡಿದರು.
ಪುನಃ ಸದನ ಸೇರುತ್ತಿದ್ದಂತೆ ಛಲವಾದಿ ನಾರಾಯಣಸ್ವಾಮಿ ಅವರು, ಪರಿಶಿಷ್ಟರ ವಿಷಯದಲ್ಲಿ ತಾವು ಭಾವುಕನಾಗಿ ಮಾತನಾಡಿದ್ದೇನೆ. ತಮ್ಮ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ, ಆದರೆ ನಮ್ಮವರೇ ನಮ್ಮ ಸಮುದಾಯಕ್ಕೆ ಚೂರಿ ಹಾಕಿದರೆ ಏನು ಮಾಡುವುದು ಎಂದು ಪ್ರಶ್ನಿಸಿದರು. ಆಗ ಸಚಿವ ಮಹಾದೇವಪ್ಪ ಅವರು ಗ್ಯಾರಂಟಿ ಯೋಜನೆಗೆ ಪರಿಶಿಷ್ಟರ ಹಣ ಬಳಕೆ ಮಾಡಿಲ್ಲ ಎಂದು ಪುನರುಚ್ಚರಿಸಿದರು.ತಪ್ಪು ಸಂದೇಶ ಬೇಡ: ಸಚಿವ ಪ್ರಿಯಾಂಕ್ ಖರ್ಗೆ ಅವರು, ಸದನದಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುವುದು ಬೇಡ, ಪ್ರತಿಪಕ್ಷಗಳು ಹೇಳಿರುವ ಸುಳ್ಳು ಒಪ್ಪಲು ಸಾಧ್ಯವಿಲ್ಲ ಎನ್ನುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ಆಕ್ಷೇಪಿಸತೊಡಗಿದರು. ಪುನಃ ವಾಗ್ವಾದ ಶುರುವಾಗುತ್ತಿದ್ದಂತೆ ಸಭಾಪತಿ ಹೊರಟ್ಟಿ ಕಲಾಪವನ್ನು ಮತ್ತೆ 10 ನಿಮಿಷ ಮುಂದೂಡಿದರು.