ಪೊಲೀಸರ ಮಧ್ಯಸ್ಥಿಕೆ: ಹೋರಾಟ ಕೈಬಿಟ್ಟ ದಲಿತ ಸಂಘಟನೆಗಳು

| Published : Oct 17 2023, 12:45 AM IST

ಪೊಲೀಸರ ಮಧ್ಯಸ್ಥಿಕೆ: ಹೋರಾಟ ಕೈಬಿಟ್ಟ ದಲಿತ ಸಂಘಟನೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥರು ಈಚೆಗೆ ಸ್ಥಳೀಯ ಹೆಗ್ಗೇರಿಯ ಭುವನೇಶ್ವರಿ ನಗರದಲ್ಲಿ ನಡೆಸಿದ ಪಾದಯಾತ್ರೆ ಖಂಡಿಸಿ, ಆ ಸ್ಥಳದಲ್ಲಿ ಸೋಮವಾರ ಕೋಣದ ಗಂಜಲ ಹಾಕಿ ಶುದ್ಧೀಕರಿಸುವ ಹೋರಾಟ ಹಮ್ಮಿಕೊಂಡಿದ್ದ ವಿವಿಧ ದಲಿತ ಸಂಘ- ಸಂಸ್ಥೆಗಳ ಮಹಾಮಂಡಳದ ಸದಸ್ಯರು ಪೊಲೀಸರ ಮಧ್ಯಸ್ಥಿಕೆಯಲ್ಲಿ ನಡೆದ ರಾಜಿ ಸಂಧಾನದಿಂದಾಗಿ ಹೋರಾಟ ಕೈಬಿಟ್ಟರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥರು ಈಚೆಗೆ ಸ್ಥಳೀಯ ಹೆಗ್ಗೇರಿಯ ಭುವನೇಶ್ವರಿ ನಗರದಲ್ಲಿ ನಡೆಸಿದ ಪಾದಯಾತ್ರೆ ಖಂಡಿಸಿ, ಆ ಸ್ಥಳದಲ್ಲಿ ಸೋಮವಾರ ಕೋಣದ ಗಂಜಲ ಹಾಕಿ ಶುದ್ಧೀಕರಿಸುವ ಹೋರಾಟ ಹಮ್ಮಿಕೊಂಡಿದ್ದ ವಿವಿಧ ದಲಿತ ಸಂಘ- ಸಂಸ್ಥೆಗಳ ಮಹಾಮಂಡಳದ ಸದಸ್ಯರು ಪೊಲೀಸರ ಮಧ್ಯಸ್ಥಿಕೆಯಲ್ಲಿ ನಡೆದ ರಾಜಿ ಸಂಧಾನದಿಂದಾಗಿ ಹೋರಾಟ ಕೈಬಿಟ್ಟರು.

ಹೆಗ್ಗೇರಿಯ ಭುವನೇಶ್ವರಿ ನಗರದಲ್ಲಿ ಹಲವು ದಲಿತ ಮುಖಂಡರು ಕೋಣದ ಗಂಜಲ ಹಾಕಿ ಶುದ್ಧೀಕರಿಸುವ ಹೋರಾಟ ನಡೆಸಲು ಮುಂದಾದರು. ತಪ್ಪು ಮಾಹಿತಿ ನೀಡಿದ ವಿಶ್ವ ಹಿಂದೂ ಪರಿಷತ್‌ ಮಹಾನಗರದ ಧರ್ಮಚಾರಿ ಸಂಪರ್ಕ ಪ್ರಮುಖ ಯಲ್ಲಪ್ಪ ಬಾಗಲಕೋಟಿ ಜತೆ ದಲಿತ ಸಂಘಟನೆಗಳ ಮುಖಂಡರು ವಾಗ್ವಾದ ನಡೆಸಿದರು.

ಈ ಸಂದರ್ಭದಲ್ಲಿ ಹಳೇ ಹುಬ್ಬಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ಸುರೇಶ ಯಳ್ಳೂರ ಮಧ್ಯಪ್ರವೇಶಿಸಿ, ಸಂಘರ್ಷಕ್ಕೆ ಕಾರಣವಾಗುವ ಆಚರಣೆ ಮಾಡಬಾರದು. ಪರಸ್ಪರ ಚರ್ಚೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಮನವೊಲಿಸಿದರು. ಬಳಿಕ ಮಹಾಮಂಡಳದ ಸದಸ್ಯರು ಹೋರಾಟ ಮೊಟಕುಗೊಳಿಸಿದರು.

ಈ ವೇಳೆ ಮಹಾಮಂಡಳದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಮಾತನಾಡಿ, ಪೇಜಾವರ ಶ್ರೀಗಳು ಕಳೆದ ಅ. 12ರಂದು ವಿಶ್ವ ಹಿಂದೂ ಪರಿಷತ್ ಹುಬ್ಬಳ್ಳಿ ಮಹಾನಗರದ ಧರ್ಮಚಾರಿ ಸಂಪರ್ಕ ಪ್ರಮುಖ ಯಲ್ಲಪ್ಪ ಬಾಗಲಕೋಟಿ ಅವರ ಮನೆಗೆ ಭೇಟಿ ನೀಡಿದ್ದರು. ಅವರ ಮನೆ ಭುವನೇಶ್ವರ ನಗರದಲ್ಲಿದ್ದು, ಇದು ದಲಿತರ ಕೇರಿ ಎಂದು ಎಲ್ಲಿಯೂ ನಮೂದಾಗಿಲ್ಲ. ಇಲ್ಲಿ ಎಲ್ಲ ಜಾತಿ, ಧರ್ಮದ ಜನರು ವಾಸವಾಗಿದ್ದಾರೆ ಎಂದರು.

ಉಡುಪಿಯಲ್ಲಿ ನಡೆದಿದ್ದ ದಲಿತ ಸಮಾವೇಶದ ನಂತರ ಇಡೀ ಉಡುಪಿಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡಲಾಗಿತ್ತು. ಅಂತಹ ಮಠದ ಸ್ವಾಮೀಜಿ ಇಲ್ಲಿನ ಭುವನೇಶ್ವರ ನಗರವನ್ನು ದಲಿತ ಕೇರಿ ಎಂದು ಬಿಂಬಿಸಿ ಇಲ್ಲಿಗೆ ಭೇಟಿ ನೀಡುವ ಅಗತ್ಯ ಏನಿತ್ತು ? ಎಂದು ಪ್ರಶ್ನಿಸಿದ ಅವರು, ಸ್ವಾಮೀಜಿ ಬಂದು ಹೋಗಿರುವ ಸ್ಥಳವನ್ನು ಕೋಣದ ಗಂಜಲ ಹಾಕಿ ಶುದ್ಧೀಕರಿಸುವ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು ಎಂದರು.

ಈ ಬಗ್ಗೆ ನಾವು ಕಾರ್ಯಕ್ರಮದ ಆಯೋಜಕ ಯಲ್ಲಪ್ಪ ಬಾಗಲಕೋಟಿ ಅವರನ್ನು ವಿಚಾರಿಸಿದಾಗ, ಸ್ವಾಮೀಜಿ ನಮ್ಮ ಮನೆಗೆ ಮತ್ತು ಇಲ್ಲಿನ ಭುವನೇಶ್ವರಿ ದೇವಸ್ಥಾನಕ್ಕೆ ಖಾಸಗಿ ಆಹ್ವಾನದ ಮೇರೆಗೆ ಭೇಟಿ ನೀಡಿದ್ದರು. ದಲಿತ ಕೇರಿ ಎಂದು ಹೇಳಿದ್ದು ತಪ್ಪಾಗಿದೆ ಎಂದು ಹೇಳಿದ್ದಾರೆ. ಶ್ರೀಗಳು ಖಾಸಗಿಯಾಗಿ ಅವರ ಮನೆಗೆ ಭೇಟಿ ನೀಡಿದ್ದರೆ ನಮ್ಮ ತಕರಾರಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಜಾತಿ, ಧರ್ಮದವರು ಯಾರ ಮನೆಗೆ ಬೇಕಾದರೂ ಭೇಟಿ ನೀಡಬಹುದು. ಹೀಗಾಗಿ ಹೋರಾಟ ಕೈಬಿಡಲಾಗಿದೆ ಎಂದು ಉಳ್ಳಿಕಾಶಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾರುತಿ ದೊಡ್ಡಮನಿ, ಫಕ್ಕಣ್ಣ ದೊಡ್ಡಮನಿ, ಜಯರಾಮ ಜನ್ನೆ, ರವಿ ಎಚ್‌., ದೇವೇಂದ್ರಪ್ಪ ಇಟಗಿ, ಸೋಮಶೇಖರ ಸೌದತ್ತಿ, ಅಶೋಕ ಹಾದಿಮನಿ, ವಿಜಯ ಬಾಗಲಕೋಟಿ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಇದ್ದರು. ದಲಿತ ಸಂಘಟನೆಗಳು ಹೋರಾಟಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಭುವನೇಶ್ವರಿ ನಗರದಲ್ಲಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಹೋರಾಟಕ್ಕೆ ಕರೆ, ಹೇಳಿಕೆ ಬದಲಿಸಿದ ಯಲ್ಲಪ್ಪ:

ಪೇಜಾವರ ಶ್ರೀಗಳ ಭೇಟಿ ಕುರಿತು ಅ. 9ರಂದು ಸುದ್ದಿಗೋಷ್ಠಿ ನಡೆಸಿದ್ದ ಅಖಿಲ ಭಾರತ ಮಾಧ್ವ ಮಹಾಮಂಡಲದ ಪದಾಧಿಕಾರಿಗಳು, ಭುವನೇಶ್ವರಿ ನಗರದ ದಲಿತರ ಕೇರಿಯಲ್ಲಿ ಶ್ರೀಗಳು ಪಾದಯಾತ್ರೆ ನಡೆಸಲಿದ್ದಾರೆ ಎಂದು ತಿಳಿಸಿದ್ದರು. ಮಾಧ್ಯಮಗಳಲ್ಲಿ ಇದು ಪ್ರಕಟವಾದ ನಂತರವೂ ಸುಮ್ಮನಿದ್ದ ಯಲ್ಲಪ್ಪ ಬಾಗಲಕೋಟಿ, ದಲಿತ ಸಂಘ ಸಂಸ್ಥೆಗಳ ಮಹಾಮಂಡಳದವರು ಹೋರಾಟಕ್ಕೆ ಕರೆ ನೀಡಿದ ನಂತರ ತಮ್ಮ ಹೇಳಿಕೆ ಬದಲಿಸಿದ್ದಾರೆ.

ಪೇಜಾವರ ಶ್ರೀ ನಮ್ಮ ಮನೆಗೆ ಮತ್ತು ದೇವಸ್ಥಾನಕ್ಕೆ ಖಾಸಗಿ ಆಹ್ವಾನದ ಮೇರೆಗೆ ಭೇಟಿ ನೀಡಿದ್ದರು. ಮಾಧ್ಯಮಗಳಲ್ಲಿ ಭುವನೇಶ್ವರಿ ನಗರದ ಬದಲಾಗಿ ದಲಿತ ಕೇರಿ ಎಂದು ಪ್ರಕಟವಾಗಿದ್ದು, ಇದರಿಂದ ಪರಿಶಿಷ್ಟ ಜಾತಿ ಸಮುದಾಯದಲ್ಲಿ ಅಸಮಾಧಾನ ಉಂಟಾಗಿದೆ. ದಲಿತ ಕೇರಿ ಎಂದು ತಪ್ಪಾಗಿ ಅರ್ಥಮಾಡಿಕೊಳ್ಳದೆ ಭುವನೇಶ್ವರಿ ನಗರ ಎಂದು ಪರಿಗಣಿಸಿ ಮುಂದಿನ ಯಾವುದೇ ನಡೆಗೆ ಅವಕಾಶ ಕೊಡಬಾರದು ಎಂದು ವಿಶ್ವ ಹಿಂದೂ ಪರಿಷತ್‌ ಹಾಗೂ ಭುವನೇಶ್ವರಿ ಸೇವಾ ಸಂಘದ ಪ್ರಕಟಣೆ ಮೂಲಕ ಯಲ್ಲಪ್ಪ ಬಾಗಲಕೋಟಿ, ಮಂಜುನಾಥ ಸಣ್ಣಕ್ಕಿ ತಿಳಿಸಿದ್ಧಾರೆ.