ಭಾನುವಾರ ಹಳ್ಳಿಹೊಳೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಭೀಮ ಶಕ್ತಿ ಐಕ್ಯತಾ ಸಮಾವೇಶ ನೆರವೇರಿತು.
ಕುಂದಾಪುರ: ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದು ನೀವು ಹುಟ್ಟಿರುವುದೇ ದೇಶ ಆಳುವುದಕ್ಕೆ ಎಂದು, ಆದರೆ ದಲಿತ ಸಂಘಟನೆಗಳು ದಲಿತರು ಆಳುಗಳಾಗಿ ಬದುಕುವುದಕ್ಕೆ ತೀರ್ಮಾನಿಸಿದಂತಿದೆ, ಸಂಘಟನೆಗಳು ಬೇಡುವ ಚಳವಳಿ ಬಿಟ್ಟು ನೀಡುವ ಚಳವಳಿಯನ್ನು ಹುಟ್ಟುಹಾಕುತ್ತಿಲ್ಲ ಎಂದು ದಲಿತ ಚಿಂತಕ ಜಯನ್ ಮಲ್ಪೆ ಆರೋಪಿಸಿದ್ದಾರೆ.
ಭಾನುವಾರ ಇಲ್ಲಿನ ಹಳ್ಳಿಹೊಳೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ ಭೀಮ ಶಕ್ತಿ ಐಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹೋರಾಟ, ಚಳವಳಿಗಳ ಮೂಲಕ ಅಂಬೇಡ್ಕರ್ ಸಂವಿಧಾನದ ಮೂಲಕ ನಮಗೀಗ ಬೇಕಾಗಿರುವುದನ್ನು ಪಡೆಯುವ ಅವಕಾಶ ನೀಡಿದ್ದಾರೆ. ನಾವು ಶಾಸನಗಳನ್ನು ಜಾರಿಮಾಡುವ ವಿಧಾನಸಭೆ ಮತ್ತು ಲೋಕಸಭೆಗೆ ಪ್ರವೇಶಿಸುವ ರಾಜಕೀಯ ಶಕ್ತಿಯಾಗಬೇಕು ಎಂದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರಮೇಶ್ ಕುಲಾಲ್, ದಲಿತ ಮಹಿಳೆಯರು ತಮ್ಮ ಮಕ್ಕಳ್ಳನ್ನು ವಿದ್ಯಾಭಾಸ ನೀಡಿ ಬೆಳಸಲು ಶ್ರಮಿಸಬೇಕು ಎಂದರು. ಶಂಕರನಾರಾಯಣ ಪೋಲೀಸ್ ಉಪನಿರೀಕ್ಷಕ ಯೂನುಸ್ ಗಡ್ಡೆಕರ್, ದಲಿತರು ಸರ್ಕಾರಿ ಸೌಲಭ್ಯಗಳನ್ನು ಪಡೆದು, ದುಶ್ಚಟಗಳಿಂದ ಮುಕ್ತರಾಗಿ ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು ಎಂದರು.ಗ್ರಾ.ಪಂ. ಮಾಜಿ ಅಧ್ಯಕ್ಷ ರಾಮ ನಾಯ್ಕ ಕೆರ್ಕಾಡು ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿದ ವಾಸುದೇವ ಮುದೂರು, ದಲಿತ ಮುಖಂಡ ಪರಮೇಶ್ವರ ಉಪ್ಪೂರು, ಹಳ್ಳಿಹೊಳೆ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಶೆಟ್ಟಿ, ದಸಂಸ ಜಿಲ್ಲಾ ನಾಯಕ ಚಂದ್ರ ಹಳಗೇರಿ, ಅಂಬೇಡ್ಕರ್ ಯುಸೇನೆಯ ಗಣೇಶ್ ನೆರ್ಗಿ ಮುಂತಾದವರಿದ್ದರು, ಕುಮಾರದಾಸ್ ಹಾಲಾಡಿ ಸ್ವಾಗತಿಸಿ, ಸುರೇಶ್ ಮೂಡುಬಗೆ ವಂದಿಸಿದರು. ಉದಯ ಹಳ್ಳಿಹೊಳೆ ನಿರೂಪಿಸಿದರು.