ಚಿಕ್ಕಮಗಳೂರು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಸಭೆಯಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಕುರಿತು ಆಡಿದ ಮಾತುಗಳನ್ನು ಖಂಡಿಸಿ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಗುರುವಾರ ನಗರದ ಆಜಾದ್‌ ಪಾರ್ಕ್ ವೃತ್ತದಲ್ಲಿ ಅಮಿತ್ ಶಾ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ರಾಜ್ಯಸಭೆಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಕುರಿತು ಅಮಿತ್‌ ಶಾ ಹೇಳಿಕೆ । ಪ್ರತಿಕೃತಿ ದಹನ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಸಭೆಯಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಕುರಿತು ಆಡಿದ ಮಾತುಗಳನ್ನು ಖಂಡಿಸಿ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಗುರುವಾರ ನಗರದ ಆಜಾದ್‌ ಪಾರ್ಕ್ ವೃತ್ತದಲ್ಲಿ ಅಮಿತ್ ಶಾ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್, ಪ್ರಜಾಪ್ರಭುತ್ವ ದೇಶದಲ್ಲಿ ಜೀವಿಸುತ್ತಿರುವ 140 ಕೋಟಿ ಜನಸಂಖ್ಯೆ ಡಾ.ಬಿ.ಆರ್‌. ಅಂಬೇಡ್ಕರ್ ಹಾಕಿಕೊಟ್ಟ ಸಂವಿಧಾನದಡಿ ಬದುಕು ಕಟ್ಟಿಕೊಂಡಿದ್ದಾರೆ. ಪ್ರಸ್ತುತ ಸಮಾಜದಲ್ಲಿ ನಾಗರಿಕರಿಗೆ ಸಮಗ್ರ ಸವಲತ್ತು ಸಿಕ್ಕಿದೆ ಎಂದಾದರೆ ಅದು ಅಂಬೇಡ್ಕರ್ ನೀಡಿದ ದೊಡ್ಡ ಕೊಡುಗೆ ಎಂದು ಹೇಳಿದರು.

ಭಾರತದ ಅವಿವೇಕಿ ಗೃಹಮಂತ್ರಿ ಅಮಿತ್ ಶಾ ಅವರು ದೇಶದ ಕಾನೂನು ರಕ್ಷಣಾ ಮಂತ್ರಿ ಸಚಿವರಾಗಲು ನಾಲಾಯಕ್. ಹಿಂದೊಮ್ಮೆ ಗೃಹ ಸಚಿವರು ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನ ಸಿಕ್ಕರೆ ಸಂವಿಧಾನ ಬದಲಿಸುತ್ತೇವೆ ಎಂಬಂ ರೀತಿ ಲೋಕಸಭಾ ಅಧಿವೇಶನದಲ್ಲಿ ಮಾತನಾಡಿದ್ದರು. ಈಗ ದೇಶದ ಸೌಹಾರ್ದತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.

ದೇಶದಿಂದ ನರೇಂದ್ರ ಮೋದಿ ಹಾಗೂ ಅಮಿತ್ ಶಾ ತಂಡವನ್ನು ತೊಲಗಿಸುವ ಸಂದೇಶವನ್ನು ನಾಗರಿಕರು ಕೊಡಬೇಕಿದೆ. ಈ ಹೇಳಿಕೆ ವಿರುದ್ಧ ಕೇವಲ ದಲಿತ ಸಂಘಟನೆ ಚಳುವಳಿ ನಡೆಸಿದರೆ ಸಾಲದು, ಎಲ್ಲಾ ಪ್ರಗತಿಪರರು, ಸಂವಿಧಾನ ಬಗ್ಗೆ ಅಭಿಮಾನ ಹಾಗೂ ದೇಶದ ಕಾಳಜಿ ಹೊಂದಿರುವ ಪ್ರಜೆಗಳು ಒಮ್ಮತದಿಂದ ಮುಂದಾಗಬೇಕು ಎಂದು ಹೇಳಿದರು.

ದೇಶದ ಗೃಹಮಂತ್ರಿಯಾಗಿ ಅಮಿತ್ ಶಾ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ. ಸೆರೆವಾಸ ಅನುಭವಿಸಲು ಸೂಕ್ತ. ಓರ್ವ ಗಡಿಪಾರಾದ ವ್ಯಕ್ತಿ ಇಂದು ಗೃಹಮಂತ್ರಿಯಾಗಿ ತಕ್ಕಮಟ್ಟಿನ ಆಡಳಿತ ನೀಡಲು ಸಾಧ್ಯವೇ ಎಂಬುದು ಅರಿಯಬೇಕು. ಅಂಬೇಡ್ಕರ್ ಹಾಗೂ ದೇಶದ ಜನತೆ ಬಗ್ಗೆ ಭಾವನಾತ್ಮಕ ಸಂಬಂಧ ತಿಳಿಯದವರಿಗೆ ಅಧಿಕಾರ ಧಕ್ಕಿರುವುದು ಸರಿಯೇ ಎಂದು ಪ್ರಶ್ನಿಸಿದರು.

ದೇಶದ ಗೃಹ ಸಚಿವರ ಈ ಹೇಳಿಕೆಗೆ ಪ್ರತಿಯೊಬ್ಬರು ಖಂಡಿಸಬೇಕು. ಈ ಹೋರಾಟ ಒಂದು ದಿನಕ್ಕೆ ಸೀಮಿತಗೊಳಿಸದೇ ದೊಡ್ಡ ಹೋರಾಟ ವಾಗಿ ಹಮ್ಮಿಕೊಳ್ಳಬೇಕು. ಮನುವಾದ ಒಪ್ಪುವ ರಾಜಕೀಯ ಪಕ್ಷವಿದ್ದರೆ ಬಿಜೆಪಿ. ಆ ಪಕ್ಷಕ್ಕೆ ದೇಶದ ಸಂವಿಧಾನ, ಸಂಸ್ಕೃತಿ, ಬದುಕು ಗೊತ್ತಿಲ್ಲ. ಆ ಕಾರಣದಿಂದ ನಾಯಕರನ್ನು ಮಂತ್ರಿಗಳಾಗಿ ಮಾಡಿ ದೇಶ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಅಂಬೇಡ್ಕರ್ ವಿಚಾರಧಾರೆಗಳಿಗೆ ಅಮಿತ್, ಮೋದಿ ಸರಿಸಾಟಿಯಲ್ಲ ಹಾಗೂ ಅವರ ತತ್ತ್ವ ಒಪ್ಪಿಕೊಳ್ಳುವ ಮನಸ್ಸು ಅವರಿಗಿಲ್ಲ. ಮನುವಾದ ಒಪ್ಪಿಕೊಳ್ಳುವ ಸಂಸ್ಕೃತಿ ಮತೀಯ ಶಕ್ತಿಯ ಬೆಂಬಲದಿಂದ ಬಂದಿರುವ ರಾಜಕೀಯ ಪಕ್ಷ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಬಂಧವನ್ನು ಕಳಚಿ ಕೊಂಡು ನಾಗರಿಕರು ಮೊದಲು ಮಾನವರಾಗಿ ದೇಶದ ಏಕತೆಯನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಎಚ್.ಎಂ.ರುದ್ರಸ್ವಾಮಿ, ದಂಟರಮಕ್ಕಿ ಶ್ರೀನಿವಾಸ್, ಮರ್ಲೆ ಅಣ್ಣಯ್ಯ, ಹರೀಶ್ ಮಿತ್ರ, ಚಿದಾನಂದ್, ಮಂಜುನಾಥ್, ಉಮೇಶ್, ಪೂರ್ಣೇಶ್, ದೊಡ್ಡಯ್ಯ, ನಾಗರಾಜ್, ಗೌಸ್‌ ಮೊಹಿಯುದ್ಧೀನ್, ಹಿರೇಮಗಳೂರು ರಾಮಚಂದ್ರ, ಹೊನ್ನೇಶ್, ಹುಣಸೇಮಕ್ಕಿ ಲಕ್ಷ್ಮಣ್‌, ಕೆ. ಭರತ್‌ ಇದ್ದರು.

19 ಕೆಸಿಕೆಎಂ 1ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಸಭೆಯಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಕುರಿತ ಹೇಳಿಕೆ ಖಂಡಿಸಿ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಗುರುವಾರ ಚಿಕ್ಕಮಗಳೂರಿನ ಆಜಾದ್‌ ಪಾರ್ಕ್ ವೃತ್ತದಲ್ಲಿ ಅಮಿತ್ ಶಾ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.